ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಕ್ರಿಕೆಟ್ ಬುಕ್ಕಿಗಳು, ರೌಡಿಗಳಿರುವುದು ಕಂಡುಬಂದರೆ ಅವರ ಬಗ್ಗೆ ಮಾಹಿತಿ ಕೊಡಿ. ಅಂತಹವರನ್ನು ಬುಡಸಹಿತ ಕಿತ್ತುಹಾಕುತ್ತೇನೆ. ನನ್ನ ಕ್ಷೇತ್ರದಲ್ಲಿ ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಶಾಸಕ ಪಿ. ರವಿಕುಮಾರ್ (ಗಣಿಗ) ಎಚ್ಚರಿಕೆ ನೀಡಿದರು.ಜಿಪಂ, ನೈರ್ಮಲ್ಯ ಇಲಾಖೆ ವತಿಯಿಂದ ತಾಲೂಕಿನ ಗೋಪಾಲಪುರ ಗ್ರಾಮದಲ್ಲಿ ನಡೆದ ಮನೆ ಮನೆಗೆ ಗಂಗೆ ಗ್ರಾಮೀಣ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕ್ರಿಕೆಟ್ ಬುಕ್ಕಿಗಳು ಯುವಜನರನ್ನು ಹಾಳು ಮಾಡುವುದರ ಜೊತೆಗೆ ಅವರ ಜಮೀನು, ಮನೆಯಲ್ಲಿನ ಚಿನ್ನಾಭರಣಗಳನ್ನೂ ಸಹ ಗಿರವಿ ಇಡುವಂತೆ ಮಾಡುತ್ತಿದ್ದಾರೆ. ಕ್ರಿಕೆಟ್ ಬೆಟ್ಟಿಂಗ್‌ನಿಂದ ಎಷ್ಟೋ ಜನ ಯುವಕರು ಸಾಲಕ್ಕೆ ಶರಣಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ಐಪಿಎಲ್ ಬರುತ್ತಿದೆ. ಕ್ರಿಕೆಟ್ ಬುಕ್ಕಿಗಳು ಹಾಗೂ ಮಾರಕಾಸ್ತ್ರಗಳನ್ನು ಹಿಡಿದು ಓಡಾಡುವವರಿದ್ದರೆ ನನಗೆ ಅಥವಾ ಪೊಲೀಸರಿಗೆ ಮಾಹಿತಿ ಕೊಡಿ. ಅವರ ಹೆಡೆಮುರಿ ಕಟ್ಟಿ ಹಾಳಾಗುತ್ತಿರುವ ಯುವಕರನ್ನು ರಕ್ಷಣೆ ಮಾಡುವುದಾಗಿ ಹೇಳಿದರು.ಯಾರೋ ಒಬ್ಬರು ಆರ್ಥಿಕವಾಗಿ ಅಭಿವೃದ್ಧಿಯಾಗುವ ಉದ್ದೇಶದಿಂದ ಗ್ರಾಮೀಣ ಭಾಗದ ಯುವಕರನ್ನು ಹಾಳು ಮಾಡುತ್ತಿದ್ದಾರೆ. ಅವರ ತಂದೆ-ತಾಯಂದಿರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ.ಅವರನ್ನು ಸಾಲಗಾರರನ್ನು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಗ್ರಾಮದಲ್ಲಿ ತಿರುಗಾಡುವವರನ್ನು ಪೊಲೀಸರು ಕರೆತಂದು ಕಾನೂನು ಕ್ರಮ ಕೈಗೊಂಡರೆ ಅದಕ್ಕೂ ಶಾಸಕರಿಗೂ ಏನು ಸಂಬಂಧ, ಬೆಂಗಳೂರಿನಿಂದ ರೌಡಿಗಳನ್ನು ಕರೆತಂದು ಇಲ್ಲಿ ರೌಡಿಸಂ ಮಾಡುತ್ತಿದ್ದೇವಾ?, ಕ್ರಿಕೆಟ್ ಬುಕ್ಕಿಗಳಿಗೆ, ರೌಡಿಗಳಿಗೆ ನಾವೇನಾದರೂ ಬೆಂಬಲ ನೀಡುತ್ತಿದ್ದೇವೆಯೇ? ಎಂದು ಜೆಡಿಎಸ್ ಮುಖಂಡ ಬಿ.ಆರ್.ರಾಮಚಂದ್ರ ವಿರುದ್ಧ ಹರಿಹಾಯ್ದರು.ಕ್ರಿಕೆಟ್ ಬುಕ್ಕಿಗಳಿಗೂ, ರೌಡಿಗಳಿಗೂ, ನಮಗೂ ಸಂಬಂಧ ಇಲ್ಲ ಎಂದು ರಾಮಚಂದ್ರ ಹೇಳಲಿ, ಅದು ಬಿಟ್ಟು ಸುಖಾ ಸುಮ್ಮನೆ ನನ್ನ ಮೇಲೆ ಆರೋಪ ಮಾಡುವುದು ಸರಿಯಲ್ಲ. ಕಾನೂನು ಬಾಹಿರ ಕೃತ್ಯಗಳನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಎಲ್ಲರೂ ಸಹಕಾರ ನೀಡಬೇಕು. ಅದಕ್ಕೆ ಸಹಕಾರ ನೀಡಿ ಸಮಾಜದ ಶಾಂತಿ ಹಾಳು ಮಾಡುವುದಕ್ಕೆ ನಾವು ಬಿಡಬೇಕಾ? ಎಂದು ಪ್ರಶ್ನಿಸಿದರು.
ಕ್ರಿಕೆಟ್ ಬುಕ್ಕಿಗಳಿದ್ದಲ್ಲಿ ಅಂತಹವರ ಮೊಬೈಲ್ ನಂಬರ್ ನನಗೆ ಅಥವಾ ಪೊಲೀಸರಿಗೆ ನೀಡಿದಲ್ಲಿ ಅಂತಹವರನ್ನು ಯಾವುದೇ ಮುಲಾಜೂ ಇಲ್ಲದೆ ಮಟ್ಟ ಹಾಕುವುದಾಗಿ ಎಚ್ಚರಿಕೆ ನೀಡಿದರು.೩.೨೦ ಕೋಟಿ ರು. ವೆಚ್ಚದ ಶುದ್ಧ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಿದ್ದೇವೆ. ಇನ್ನು ಮೂರು ತಿಂಗಳಲ್ಲಿ ಶುದ್ಧ ಕುಡಿಯುವ ನೀರನ್ನು ಮನೆ ಮನೆಗೆ ಕೊಡುವ ಕೆಲಸವನ್ನು ಮಾಡುತ್ತೇವೆ ಎಂದು ಹೇಳಿದರು.
ಮಂಡ್ಯ-ಬಿಳಿದೇಗಲು ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಪ್ರತಿ ಕಿಮೀ ಗೆ ೩ ಕೋಟಿ ರು. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಮಾಡಲಾಗುವುದು. ಟೆಂಡರ್ ಕರೆಯುವ ಪ್ರಕ್ರಿಯೆ ನಡೆಯುತ್ತಿದ್ದು, ಶೀಘ್ರ ಅಭಿವೃದ್ಧಿ ಮಾಡಲಾಗುವುದು ಎಂದ ಅವರು, ಮಂಡ್ಯ ವಿಧಾನಸಭಾ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿ ಮಾಡುವುದೇ ನಮ್ಮ ಗುರಿಯಾಗಿದೆ ಎಂದು ಸ್ಪಷ್ಟಪಡಿಸಿದರು.ಸಾತನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಪಿ. ಕೃಷ್ಣಮೂರ್ತಿ, ಯಜಮಾನ್ ಚಂದ್ರಶೇಖರ್, ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಕಾಶ್, ಶಿವರಾಂ, ಮುಖಂಡರಾದ ಪ್ರಕಾಶ್, ಪಿಡಿಒ ಮಲ್ಲೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.