ಶ್ರೀರಾಮ ಭಾರತಕ್ಕಷ್ಟೇ ಅಲ್ಲ, ವಿಶ್ವಕ್ಕೆ ಆದರ್ಶಪುರುಷ: ರೇವಣಸಿದ್ದಪ್ಪ

| Published : Jan 21 2024, 01:31 AM IST

ಶ್ರೀರಾಮ ಭಾರತಕ್ಕಷ್ಟೇ ಅಲ್ಲ, ವಿಶ್ವಕ್ಕೆ ಆದರ್ಶಪುರುಷ: ರೇವಣಸಿದ್ದಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಕೋಟ್ಯಂತರ ಹಿಂದುಗಳ ಆರಾಧ್ಯ ದೈವ ಶ್ರೀರಾಮ ಎಂದು ಸಂಘ ಪರಿವಾರದ ಕರಸೇವಕ ರೇವಣಸಿದ್ದಪ್ಪ ಅವರು ಸನ್ಮಾನ ಸ್ವೀಕರಿಸಿ ಬಣ್ಣಿಸಿದರು.

ಕನ್ನಡಪ್ರಭ ವಾರ್ತೆ ಅಥಣಿ

ಶ್ರೀರಾಮ ಭಾರತಕ್ಕಷ್ಟೇ ಅಲ್ಲ. ವಿಶ್ವಕ್ಕೆ ಆದರ್ಶ ಎನಿಸಿಕೊಂಡಿರುವ ಮಹಾಪುರುಷ. ಅವರನ್ನು ರಾಜಕೀಯವಾಗಿ ಬಳಸಿಕೊಳ್ಳುವುದು ಸರಿಯಲ್ಲ. ಪ್ರಭು ಶ್ರೀರಾಮ ಯಾರೊಬ್ಬರ ಮತ್ತು ಯಾವುದೇ ಪಕ್ಷದ ಸ್ವತ್ತಲ್ಲ. ಕೋಟ್ಯಂತರ ಹಿಂದುಗಳ ಆರಾಧ್ಯ ದೈವ ಎಂದು ಸಂಘ ಪರಿವಾರದ ಕರಸೇವಕ ರೇವಣಸಿದ್ದಪ್ಪ ದೂಪ ಹೇಳಿದರು.

ಇಲ್ಲಿನ ಬಸವೇಶ್ವರ ವೃತ್ತದಲ್ಲಿ ಶನಿವಾರ ವಿಶ್ವಗುರು ಬಸವೇಶ್ವರ ಸೇವಾ ಸಮಿತಿಯಿಂದ ರಾಮ ಮಂದಿರ ಹೋರಾಟದಲ್ಲಿ ಭಾಗಿಯಾದ ಕರಸೇವಕರ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ನಮ್ಮೆಲ್ಲರ ಬದುಕಿಗೆ ರಾಮಾಯಣ ಮತ್ತು ಮಹಾಭಾರತದ ಕಥೆಗಳು ಆದರ್ಶವಾಗಿವೆ. ಶ್ರೀರಾಮನ ಬದುಕು ನಮ್ಮೆಲ್ಲರಿಗೆ ಮಾದರಿಯಾಗಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಗೊಂಡು ಕನ್ನಡಿಗ ಕೆತ್ತಿರುವ ರಾಮನ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನಾ ಸಮಾರಂಭ ಅದ್ಧೂರಿಯಾಗಿ ನಡೆಯುತ್ತಿರುವುದು ನಮ್ಮೆಲ್ಲರಿಗೆ ಹೆಮ್ಮೆಯಾಗಿದೆ ಎಂದು ಹೇಳಿದರು.

1991ರಲ್ಲಿ ಬಾಬ್ರಿ ಮಸೀದಿ ಕೆಡವಿ ರಾಮ ಮಂದಿರ ಕಟ್ಟಬೇಕು ಎಂಬ ಚಳವಳಿಯಲ್ಲಿ ನನ್ನನ್ನು ಸೇರಿದಂತೆ ಏಳು ಜನ ಭಾಗವಹಿಸಿದ್ದೆವು. ಮಧ್ಯಪ್ರದೇಶದಲ್ಲಿ ಅಂದು ಅಧಿಕಾರದಲ್ಲಿದ್ದ ಮುಲಾಯಂ ಸಿಂಗ್ ಸರ್ಕಾರ ನಮ್ಮನ್ನು ಅರ್ಧಕ್ಕೆ ತಡೆದು ಅಯೋಧ್ಯೆ ತಲುಪದಂತೆ ಸಾಕಷ್ಟು ಪ್ರಯತ್ನ ಮಾಡಿದರೂ ನಾವು ಮಾತ್ರ ಕಷ್ಟಪಟ್ಟು ನಮ್ಮ ತಂಡ 250 ಕೀ ಮೀ ಕಾಲ್ನಡಿಗೆಯ ಮೂಲಕ ಅಯೋಧ್ಯ ತಲುಪಿದೆವು. ಒಂದೇ ರಾತ್ರಿಯಲ್ಲಿ ಬಾಬ್ರಿ ಮಸೀದಿ ಕೆಡುವ ಕಾರ್ಯಾಚರಣೆ ನಡೆಯಿತು ಎಂದು ತಮ್ಮ ಅನುಭವ ಹಂಚಿಕೊಂಡರು.

ಮತ್ತೊಬ್ಬ ಕರಸೇವಕ ಸದಾಶಿವ ಲಂಗೋಟಿ ಮಾತನಾಡಿ, 1991ರ ಬಾಬ್ರಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ಚಳವಳಿಯಲ್ಲಿ ಗೋಲಿಬಾರ್ ಮತ್ತು ಗುಲಾಟಿ ಚಾರ್ಜ್ ಆಗಿ ಅನೇಕ ಜನರು ಪ್ರಾಣ ತ್ಯಾಗ ಮಾಡಿದ್ದಾರೆ. ನಾವು ಅಥಣಿಯಿಂದಲೂ ದಿ.ರಾಮಭವ ಮೊಕಾಶಿ, ದಿ.ಎನ್.ಕೆ.ಕುಲಕರ್ಣಿ, ಪ್ರಮೋದ ಜೋಶಿ, ರೇವಣಸಿದ್ದಪ್ಪ ಧೂಪ, ಪ್ರಕಾಶ ದೇಶಪಾಂಡೆ, ಮನೋಜ ಅಥಣಿ ಮತ್ತು ನಾನು ಭಾಗವಹಿಸಿದ್ದೆವು. ಅಂದು ನಡೆದ ಚಳುವಳಿಯಲ್ಲಿ ಅನೇಕ ಜನರ ಹೋರಾಟದ ಪ್ರತಿಫಲವಾಗಿ ಮತ್ತು ಇಂದಿನ ಪ್ರಧಾನಿ ನರೇಂದ್ರ ಮೋದಿ ಅವರ ಸತತ ಪ್ರಯತ್ನದಿಂದ ಅಯೋಧ್ಯೆಯಲ್ಲಿ ಸುಂದರ ರಾಮ ಮಂದಿರ ನಿರ್ಮಾಣವಾಗಿದೆ ಎಂದರು.

ಈ ಸಂದರ್ಭದಲ್ಲಿ ಬಸವೇಶ್ವರ ಸೇವಾ ಸಮಿತಿಯ ರಮೇಶ ಕಾಗಲಿ, ಶಿವರುದ್ರ ಘೂಳಪ್ಪನವರ, ಅರುಣ ಭಾಸಿಂಗಿ, ಬಸವರಾಜ ಮರನೂರ, ಶ್ರೀಶೈಲ ನಾಯಿಕ, ನರಸು ಬಡಕಂಬಿ, ಸಂಗಪ್ಪಾ ಮಾಯನಟ್ಟಿ, ಪುರಸಭಾ ಸದಸ್ಯ ಮಲ್ಲೇಶ ಹುದ್ದಾರ, ರಾಜಶೇಖರ ಗುಡೋಡಗಿ, ಆನಂದ ದೇಶಪಾಂಡೆ, ದೀಪಕ ಟಿಕಾರೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.