ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಮದ್ಯ ಹಾಗೂ ತಂಬಾಕು ಸೇವನೆಯಿಂದ ಆರೋಗ್ಯದ ಜೊತೆಗೆ ಪ್ರಾಣ ಹಾನಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ಹಿರೀಸಾವೆ ಪಿಎಸ್‌ಐ ರೂಪಾದೇವಿ ಬಿರಾದರ್ ಹೇಳಿದರು.ತಾಲೂಕಿನ ಹಿರೀಸಾವೆ ಗ್ರಾಮದ ಶ್ರೀಕಂಠಯ್ಯ ವೃತ್ತದಲ್ಲಿ ಹಿರೀಸಾವೆ ಪೊಲೀಸ್ ಠಾಣೆ ಹಾಗೂ ಪಿಎಂಶ್ರೀ ಶಾಸಕರ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹಯೋಗದಲ್ಲಿ ನಡೆದ ಮಾದಕ ದ್ರವ್ಯ ವ್ಯಸನ ನಿಯಂತ್ರಣ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿ, ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂದರು.ಧೂಮಪಾನದಿಂದ ಮಾರಕವಾದ ಕ್ಯಾನ್ಸರ್ ಸೇರಿದಂತೆ ಶ್ವಾಸಕೋಶಕ್ಕೆ ಸಂಬಂಧಪಟ್ಟಂತೆ ವಿವಿಧ ಕಾಯಿಲೆಗಳಿಗೆ ತುತ್ತಾಗಲಿದ್ದು ಮದ್ಯ ಸೇವನೆಯಿಂದ ಹಣ ಕಳೆದುಕೊಳ್ಳುವುದರ ಜೊತೆಗೆ ನಿಮ್ಮನ್ನೇ ನಂಬಿಕೊಂಡಿರುವವರ ಬದುಕು ಬೀದಿಗೆ ಬರಲಿದೆ. ಇದರಿಂದ ಗೌರವಕ್ಕೂ ಧಕ್ಕೆಯಾಗಲಿದೆ ಎಂದು ತಿಳಿಸಿದರು.ಪಾಲಕರ ನಡೆ-ನುಡಿ ಹಾಗೂ ದೈನಂದಿನ ಬದುಕು ಮಕ್ಕಳ ಭವಿಷ್ಯಕ್ಕೆ ಮಾದರಿಯಾಗಬೇಕು. ಮನೆಯ ವಾತಾವರಣವು ಮಕ್ಕಳಲ್ಲಿ ಸಂಸ್ಕಾರ ಕಲಿಸುತ್ತದೆ. ಪಾಲಕರು ಮಕ್ಕಳ ಮುಂದೆ ಅನುಚಿತವಾಗಿ ವರ್ತಿಸಬಾರದು. ಪಾಲಕರ ಮಾತು-ಮಾರ್ಗವು ಮಕ್ಕಳಲ್ಲಿ ಮತ್ತಷ್ಟು ಸಂಸ್ಕಾರ ಹೆಚ್ಚಿಸಲಿದೆ. ಇದರಿಂದ ಉತ್ತಮ ಸಮಾಜ ನಿರ್ಮಾಣವಾಗಲಿದೆ ಎಂದು ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ಶಾಲಾಕಾಲೇಜು, ದೇಗುಲ ಹಾಗೂ ಪ್ರಾರ್ಥನಾ ಮಂದಿರಗಳ ಬಳಿ ಮದ್ಯ ಮತ್ತು ತಂಬಾಕು ಉತ್ಪನ್ನಗಳ ಮಾರಾಟ ಅಕ್ಷಮ್ಯ ಅಪರಾಧವಾಗಲಿದೆ. ಇನ್ನು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಹಾಗೂ ಮದ್ಯಪಾನ ಮಾಡುವುದು ಕಂಡುಬಂದಲ್ಲಿ ಅಂತವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.ಜಾಗೃತಿ ಜಾಥಾ:
ಮಾದಕ ದ್ರವ್ಯ ವ್ಯಸನ ನಿಯಂತ್ರಣ ಅಭಿಯಾನದಡಿ ಪಿಎಂಶ್ರೀ ಶಾಸಕರ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಿಂದ ಜಾಗೃತಿ ಜಾಥಾ ಪ್ರಾರಂಭಗೊಂಡು, ತಂಬಾಕು ಮುಕ್ತ ಕುರಿತ ಘೋಷಣೆಗಳೊಂದಿಗೆ ಹಳೆ ಬಿಎಂ ರಸ್ತೆ ಮಾರ್ಗವಾಗಿ ಶ್ರೀಕಂಠಯ್ಯ ವೃತ್ತಕ್ಕೆ ಆಗಮಿಸಿದ ವಿದ್ಯಾರ್ಥಿಗಳು, ಮದ್ಯಪಾನ ಮತ್ತು ಧೂಮಪಾನ ಕುರಿತು ಚುಟುಕು ನಾಟಕ ಪ್ರದರ್ಶನ ಮಾಡುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.ಶಾಲೆಯ ಮುಖ್ಯಶಿಕ್ಷಕಿ ಉಮಾ, ಸಹ ಶಿಕ್ಷಕರಾದ ಧರ್ಮೇಶ್, ಯೋಗೇಶ್, ವಿನಯ ಎಂ.ಗುನಗ, ಗೌರಮ್ಮ, ಶೋಭ, ದೇವಕಿ, ಶ್ವೇತ, ಲಕ್ಷ್ಮಿ, ರಕ್ಷಿತಾ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.