ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಬಿಡುಗಡೆ ಮಾಡಿರುವ ಆರನೇ ತರಗತಿ ಕನ್ನಡ ಪಠ್ಯಪುಸ್ತಕದ ಹೆಸರು ಬದಲಾವಣೆ ಹಾಗೂ ಪಠ್ಯ ವಿಷಯಗಳ ತಿದ್ದುಪಡಿಗೆ ಮಾಜಿ ಶಿಕ್ಷಣ ಸಚಿವರು, ವಿವಿಧ ಸಾಹಿತಿಗಳು, ಹೋರಾಟಗಾರರು, ಶಿಕ್ಷಣ ತಜ್ಞರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಬೆಂಗಳೂರು : ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಬಿಡುಗಡೆ ಮಾಡಿರುವ ಆರನೇ ತರಗತಿ ಕನ್ನಡ ಪಠ್ಯಪುಸ್ತಕದ ಹೆಸರು ಬದಲಾವಣೆ ಹಾಗೂ ಪಠ್ಯ ವಿಷಯಗಳ ತಿದ್ದುಪಡಿಗೆ ಮಾಜಿ ಶಿಕ್ಷಣ ಸಚಿವರು, ವಿವಿಧ ಸಾಹಿತಿಗಳು, ಹೋರಾಟಗಾರರು, ಶಿಕ್ಷಣ ತಜ್ಞರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಕೂಡಲೇ ಪರಿಷ್ಕೃತ ಕನ್ನಡ ಪಠ್ಯಪುಸ್ತಕವನ್ನು ವಾಪಸ್ ಪಡೆಯಲು ಆಗ್ರಹ
ಈ ಸಂಬಂಧ ಪ್ರತ್ಯೇಕ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಮಾಜಿ ಸಚಿವ ಮಧು ಬಂಗಾರಪ್ಪ, ಸಾಹಿತಿಗಳಾದ ಕೆ.ಮರಳಸಿದ್ದಪ್ಪ, ಎಸ್.ಜಿ.ಸಿದ್ದರಾಮಯ್ಯ, ರಾಮಕೃಷ್ಣ, ಡಾ.ವಿಜಯಾ, ಹೋರಾಟಗಾರರಾದ ಬಂಜಗೆರೆ ಜಯಪ್ರಕಾಶ್, ಜಾಣಗೆರೆ ವೆಂಕಟರಾಮಯ್ಯ, ಶಿಕ್ಷಣ ತಜ್ಞ ವಿ.ಪಿ.ನಿರಂಜನಾರಾಧ್ಯ ಮತ್ತಿತರರು ಕೂಡಲೇ ಪರಿಷ್ಕೃತ ಕನ್ನಡ ಪಠ್ಯಪುಸ್ತಕವನ್ನು ವಾಪಸ್ ಪಡೆಯಲು ಆಗ್ರಹಿಸಿದ್ದಾರೆ.
6ನೇ ತರಗತಿ ಕನ್ನಡ ಪಠ್ಯಪುಸ್ತಕಕ್ಕೆ ‘ಕೃಷ್ಣ’ ಹೆಸರು
ಮಧು ಬಂಗಾರಪ್ಪ ಅವರು, 6ನೇ ತರಗತಿ ಕನ್ನಡ ಪಠ್ಯಪುಸ್ತಕಕ್ಕೆ ‘ಕೃಷ್ಣ’ ಎಂದು ಹೆಸರಿಡಲಾಗಿದೆ. ಕನ್ನಡದ ವೈಚಾರಿಕ ಪರಂಪರೆ, ಸ್ಥಳೀಯ ಸಂಸ್ಕೃತಿ ಹಾಗೂ ಪ್ರಾದೇಶಿಕ ಜೀವನ ಶೈಲಿಗೆ ಪುಸ್ತಕದಲ್ಲಿ ಆದ್ಯತೆ ನೀಡಿಲ್ಲ. ಕರಾವಳಿ ಕರ್ನಾಟಕ, ಉತ್ತರ ಕರ್ನಾಟಕ, ಮಲೆನಾಡು ಹಾಗೂ ಹಳೆ ಮೈಸೂರು ಭಾಗದ ಜಾನಪದ, ಸಾಹಿತ್ಯ ಮತ್ತು ಜೀವನ ಪದ್ಧತಿಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಸಮತೋಲನ ಆಹಾರದ ಪಾಠದಲ್ಲಿ ಮೊಟ್ಟೆ, ಮೀನು ಮತ್ತು ಮಾಂಸಾಹಾರದ ಕುರಿತು ಯಾವುದೇ ಉಲ್ಲೇಖವಿಲ್ಲ. ಕೇವಲ ಸಸ್ಯಾಹಾರಕ್ಕೆ ಮಾತ್ರ ಪ್ರಾಮುಖ್ಯತೆ ನೀಡಲಾಗಿದೆ. ಇದು ಸಮತೋಲಿತ ನಿರೂಪಣೆ ಅಲ್ಲ ಎಂದು ಆರೋಪಿಸಿದ್ದಾರೆ.
ಶಿಕ್ಷಣ ತಜ್ಞರು, ಸಾಹಿತಿಗಳು ರಾಜ್ಯದ ಡಿಎಸ್‌ಇಆರ್‌ಟಿ ಈಗಾಗಲೇ ‘ಸವಿ ಕನ್ನಡ’, ‘ಸಿರಿ ಕನ್ನಡ’ ಹಾಗೂ ‘ತಿಳಿ ಕನ್ನಡ’ ಪಠ್ಯಪುಸ್ತಕಗಳನ್ನು ಸಿದ್ಧಪಡಿಸಿದೆ. ಅವುಗಳನ್ನು ಪರಿಗಣಿಸದೇ ಹೊಸ ಪುಸ್ತಕ ಬಿಡುಗಡೆ ಮಾಡಿರುವುದು ಕನ್ನಡದ ಅಸ್ಮಿತೆಗೆ ಅಪಚಾರ. ಕೂಡಲೇ ಈ ಪುಸ್ತಕವನ್ನು ಹಿಂದಕ್ಕೆ ಪಡೆದು, ಕರ್ನಾಟಕದ ಸಂಸ್ಕೃತಿ, ಆಚಾರ-ವಿಚಾರ, ಸಾಹಿತ್ಯ ಮತ್ತು ಪರಂಪರೆಯನ್ನು ಒಳಗೊಂಡ ಹೊಸ ಪುಸ್ತಕ ಸಿದ್ಧಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
