ಮುಳಗುಂದ ಪಟ್ಟಣದ ಆರ್‌.ಎನ್‌. ದೇಶಪಾಂಡೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ 2025-26ನೇ ಸಾಲಿನ ಕ್ರೀಡಾ, ಸಾಂಸ್ಕೃತಿಕ, ಎನ್‌.ಎಸ್‌.ಎಸ್‌. ರೆಡ್‌ಕ್ರಾಸ್‌ ಹಾಗೂ ರೋವರ್ಸ್‌ ಮತ್ತು ರೇಂಜರ್ಸ್‌ ಚಟುವಟಿಕೆ ಸಮಾರೋಪ ಹಾಗೂ ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ನಡೆಯಿತು.

ಮುಳಗುಂದ: ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಪಠ್ಯ ಅಧ್ಯಯನದ ಜತೆಗೆ ಪಠ್ಯೇತರ ಚಟುವಟಿಕೆಯಲ್ಲೂ ಸಕ್ರಿಯವಾಗಿ ಭಾಗವಹಿಸುವುದು ಅತ್ಯಗತ್ಯವಾಗಿದೆ ಎಂದು ಸ್ಥಳೀಯ ಪೊಲೀಸ್‌ ಠಾಣೆಯ ಸಿಪಿಐ ಬಿ.ಜಿ. ಸುಬ್ಬಾಪುರಮಠ ಹೇಳಿದರು.

ಪಟ್ಟಣದ ಆರ್‌.ಎನ್‌. ದೇಶಪಾಂಡೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ನಡೆದ 2025-26ನೇ ಸಾಲಿನ ಕ್ರೀಡಾ, ಸಾಂಸ್ಕೃತಿಕ, ಎನ್‌.ಎಸ್‌.ಎಸ್‌. ರೆಡ್‌ಕ್ರಾಸ್‌ ಹಾಗೂ ರೋವರ್ಸ್‌ ಮತ್ತು ರೇಂಜರ್ಸ್‌ ಚಟುವಟಿಕೆ ಸಮಾರೋಪ ಹಾಗೂ ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರಬಂಧ, ಭಾಷಣ, ವಿಜ್ಞಾನ ಹಾಗೂ ಕಲಾ ಚಟುವಟಿಕೆ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ನಾಯಕತ್ವ ಗುಣ, ಸೃಜನಶೀಲತೆ ಮತ್ತು ಸಾಮಾಜಿಕ ಕೌಶಲ್ಯಗಳನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದು ಹೇಳಿದರು.

ವಿದ್ಯಾರ್ಥಿಗಳದ್ದು ಬಂಗಾರದಂತಹ ಜೀವನ. ಈ ದಿನಗಳಲ್ಲಿ ನಿಮ್ಮ ಭವಿಷ್ಯ ಹಾಳು ಮಾಡಿಕೊಳ್ಳದೆ, ಸತತ ಅಧ್ಯಯನ, ಪರಿಶ್ರಮದಿಂದ ಯಶಸ್ಸು ಸಾಧಿಸಿ, ಉತ್ತಮ ಭವಿಷ್ಯ ರೂಪಿಸಿಕೊಳ್ಳಿ. ಓದು ನಿಂತ ನೀರಲ್ಲ, ಹರಿಯುವ ನೀರಿನಂತೆ ನಿರಂತರವಾಗಿರಬೇಕು. ಅವಕಾಶಗಳು ಸುಲಭವಾಗಿ ಸಿಗುವುದಿಲ್ಲ, ನಾವೇ ಸೃಷ್ಟಿಸಿಕೊಳ್ಳಬೇಕು. ಸೋಲನ್ನು ಗೆಲುವಿನಲ್ಲಿ ರೂಪಾಂತರಿಸಬೇಕು. ನಾವು ಸಮಾಜದಲ್ಲಿ ಉತ್ತಮ‌ ಪ್ರಜೆಗಳಾಗಿ ಜೀವನ ನಡೆಸಿ, ಸಮಾಜಕ್ಕೆ ಮೌಲ್ಯಯುತ ಕೊಡುಗೆ ನೀಡಬೇಕು. ನೌಕರಿಗಾಗಿ ಓದುವುದು ಬೇಡ, ದೇಶಕ್ಕಾಗಿ ಓದಿ ದೇಶದ ಪ್ರಗತಿಗೆ ಸಹಕಾರ ನೀಡಿ, ಅಪರಾಧಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ಯುವ ಸಮುದಾಯ ಚಿಂತಿಸಬೇಕು ಎಂದು ಹೇಳಿದರು‌.

ಎಸ್‌.ಜೆ.ಜೆ.ಎಂ. ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಅಶೋಕ ಅಂಗಡಿ ಮಾತನಾಡಿ, ಇಂದಿನ ತಾಂತ್ರಿಕ ಯುಗದಲ್ಲಿ ಕಾಲಕ್ಕೆ ತಕ್ಕಂತೆ ವಿದ್ಯಾರ್ಥಿಗಳ ಸಾಧನೆ ಇರಬೇಕು. ಆಂತರಿಕ ಭಾವನೆಗಳು, ಸಾಧನೆ ಮಾಡುವ ವಿಚಾರಗಳಂತಹ ಕನಸುಗಳನ್ನು ಕಂಡು ಅವುಗಳ ಸಾಧನೆಗೆ ಸತತ ಪರಿಶ್ರಮಪಟ್ಟು ಉತ್ತಮ ಜೀವನ ನಡೆಸಬೇಕು. ಸೌಂದರ್ಯ ಮತ್ತು ಯವ್ವನ ಸೋಲಿಸುವ ಶಕ್ತಿ ಶಿಕ್ಷಣಕ್ಕೆ ಇದೆ. ಜಗತ್ತನ್ನು ಆಳುವುದು ಜ್ಞಾನ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಕ್ರಿಯಾಶೀಲರಾಗಿ ಜ್ಞಾನವಂತರಾಗಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ ಆರ್.ಎಂ. ಕಲ್ಲನಗೌಡರ ಮಾತನಾಡಿ, ಪದವಿಗಳಿಗಿಂತ ಕೌಶಲ್ಯ ಮುಖ್ಯ. ಇಂದಿನ ವಿದ್ಯಾರ್ಥಿಗಳಲ್ಲಿ ಮೊದಲಿಗೆ ತಾಳ್ಮೆಯಿಲ್ಲ, ಓದುವ ಹವ್ಯಾಸ ಇಲ್ಲ. ಕೌಶಲ್ಯ ಇಲ್ಲದೆ ಹೋದರೆ ಬದುಕು ನಡೆಸುವುದು ಕಷ್ಟಕರವಾಗುತ್ತದೆ ಎಂದು ಹೇಳಿದರು.

ಉದ್ಯಮಿ ಸಂತೋಷ ದೇಶಪಾಂಡೆ, ಪಪಂ ಮಾಜಿ ಸದಸ್ಯ ಎನ್‌.ಆರ್‌. ದೇಶಪಾಂಡೆ ಮಾತನಾಡಿದರು. ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪಾರಿತೋಷಕ ವಿತರಿಸಲಾಯಿತು.

ಅಶೋಕ ಸೊನಗೋಜಿ, ಸುಮನ್‌ ಚವಡಿ ಇದ್ದರು. ಡಾ. ಶಿವಪ್ಪ ಎಂ. ಕಾರ್ಯಕ್ರಮ ನಿರೂಪಿಸಿದರು. ಪ್ರಾಧ್ಯಾಪಕಿ ಅನುಪಮಾ ಸ್ವಾಗತಿಸಿದರು. ರಾಜು ಬಿ.ಕೆ. ವಂದಿಸಿದರು.