ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು
ಕಳೆದ ಎರಡು ದಿನಗಳಿಂದ ಜಿಲ್ಲಾಡಳಿತ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಇಲ್ಲಿ ನಡೆಯುತ್ತಿರುವ ಕಿತ್ತೂರು ಉತ್ಸವ ಮತ್ತು ಚನ್ನಮ್ಮನ 200ನೇ ವಿಜಯೋತ್ಸವದ ಸಮಾರೋಪ ಸಮಾರಂಭಕ್ಕೆ ಶುಕ್ರವಾರ ತೆರೆ ಬೀಳುತ್ತಿದೆ. ಇದೆ ವೇಳೆ ಸಮಾರೋಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಆಗಮಿಸುತ್ತಿದ್ದು, ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತಂದಿದೆ.ಶುಕ್ರವಾರ ಸಂಜೆ 4 ಗಂಟೆಗೆ ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಹೊರಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಂಜೆ 5ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಸಂಜೆ 5.40ಕ್ಕೆ ಹುಬ್ಬಳ್ಳಿಯಿಂದ ರಸ್ತೆ ಮಾರ್ಗದ ಮೂಲಕ ಕಿತ್ತೂರಿಗೆ ಆಗಮಿಸಲಿರುವ ಅವರು ಸಮಾರೋಪದಲ್ಲಿ ಪಾಲ್ಗೊಳ್ಳಲಿದ್ದಾರೆ.ಮೌಢ್ಯಕ್ಕೆ ಸಡ್ಡು ಹೊಡೆಯುವ ನಿಟ್ಟಿನಲ್ಲಿ ಹಾಗೂ ವಿಜಯೋತ್ಸವದ ಮೆರಗು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಗಮನ ಇಲ್ಲಿನ ಜನತೆಯಲ್ಲಿ ಸಂತಸ ತಂದಿದೆ. ಮಾತ್ರವಲ್ಲ, ಅವರ ಆಗಮನದಿಂದಾಗಿ ಕಿತ್ತೂರು ಅಭಿವೃದ್ಧಿ ಹಾಗೂ ಪ್ರವಾಸೋದ್ಯಮಕ್ಕೆ ಇನ್ನೂ ಹೆಚ್ಚಿನ ಕೊಡುಗೆ ಅಥವಾ ಅನುದಾನ ನೀಡುವ ನಿರೀಕ್ಷೆಯನ್ನು ಕಿತ್ತೂರು ಭಾಗದ ಜನ ಕಾತರದಿಂದ ಎದುರು ನೋಡುತ್ತಿದ್ದಾರೆ.ಕಿತ್ತೂರು ಉತ್ಸವ ಮತ್ತು 200ನೇ ವಿಜಯೋತ್ಸವದ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸುತ್ತಾರೆ ಎಂದು ಕಿತ್ತೂರು ನಾಡಿನ ಜನ ಬಹಳ ಎದುರು ನೋಡಿದ್ದರು. ಆದರೆ, ಸಮಾರೋಪಕ್ಕೆ ಆಗಮಿಸುತ್ತಿರುವುದರಿಂದ ಅದರ ಕಾರ್ಮೋಡ ಈಗ ಸರಿದಿದೆ. ಕಿತ್ತೂರು ಸಂಸ್ಥಾನದ ನಿಷ್ಠಾವಂತರಾಗಿ ಗುರುತಿಸಿಕೊಂಡಿದ್ದ ಸಂಗೊಳ್ಳಿ ರಾಯಣ್ಣನ ಅಭಿವೃದ್ಧಿಗೆ 2013ರಲ್ಲಿ ಅಧಿಕಾರದಲ್ಲಿದ್ದ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಹೆಚ್ಚಿನ ಅನುದಾನ ನೀಡಿ ಅಭಿವೃದ್ಧಿಗೆ ಒತ್ತು ನೀಡಿತ್ತು. ಇದೀಗ ಮತ್ತೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾರೆ. ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರವೇ ಮತ್ತೇ ಅಧಿಕಾರದಲ್ಲಿರುವ ಕಾರಣ ಐತಿಹಾಸಿಕ ರಾಣಿ ಚನ್ನಮ್ಮಾಜಿಯ ಕರ್ಮಭೂಮಿಯಾದ ಕಿತ್ತೂರಿಗೆ ಇನ್ನೂ ಹೆಚ್ಚಿನ ಘೋಷಣೆ ಅಥವಾ ಅನುದಾನ ನೀಡಿ ಪ್ರವಾಸೋದ್ಯಮಕ್ಕೆ ಹಾಗೂ ಅಭಿವೃದ್ಧಿಗೆ ನೂತನ ಯೋಜನೆಗಳನ್ನು ನೀಡಬಹುದು ಎಂಬ ಆಶಾ ಮನೋಭಾವನೆ ಜನರಲ್ಲಿ ಮೂಡಿದೆ. ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ, ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಸಾನ್ನಿಧ್ಯವನ್ನು ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ನಿಚ್ಚಣಕಿಯ ಪಂಚಾಕ್ಷರಿ ಸ್ವಾಮೀಜಿ, ಕಾದರವಳ್ಳಿಯ ಪಾಲಾಕ್ಷ ಸ್ವಾಮೀಜಿ, ಬೈಲೂರಿನ ನಿಜಗುಣಾನಂದ ಸ್ವಾಮೀಜಿ ವಹಿಸಲಿದ್ದಾರೆ.ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಬಾಬಾಸಾಹೇಬ ಪಾಟೀಲ ವಹಿಸಲಿದ್ದು, ಅತಿಥಿಗಳಾಗಿ ಸಚಿವರಾದ ಸಂತೋಷ ಲಾಡ್, ಮುಖ್ಯ ಸಚೇತಕ ಅಶೋಕ ಪಟ್ಟಣ, ಶಾಸಕರಾದ ವಿನಯ ಕುಲಕರ್ಣಿ, ಸ್ಟಾರ್ ಏರ್‌ಲೈನ್ ಸಂಸ್ಥಾಪಕ ಸಂಜಯ ಘೋಡಾವತ್ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹನೀಯರಿಗೆ ಮತ್ತು ವಂಶಸ್ಥರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು ಸಮಾರೋಪದ ನುಡಿಗಳನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುಷೋತ್ತಮ್ ಬಿಳಿಮಲೆ ಆಡಲಿದ್ದಾರೆ.ಇವರಲ್ಲದೆ ಜಿಲ್ಲಾಧಿಕಾರಿ ಮಹ್ಮದ ರೋಷನ್, ಬೆಳಗಾವಿ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಎಸ್ಪಿ ಡಾ.ಭೀಮಾಶಂಕರ ಗುಳೇದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಡಾ.ಕೆ.ಧರಣಿದೇವಿ, ಸಿಇಒ ರಾಹುಲ್ ಶಿಂಧೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಸೇರಿದಂತೆ ಅಧಿಕಾರಿ ವರ್ಗ ಭಾಗವಹಿಸಲಿದ್ದಾರೆ.ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಜನರು
ಈಗಾಗಲೇ ಕಳೆದ ಎರಡು ದಿನಗಳಿಂದ ಕಿತ್ತೂರು ಉತ್ಸವದಲ್ಲಿ ಸಾವಿರಾರು ಸಂಖ್ಯೆಯ ಜನರು ಪಾಲ್ಗೊಂಡು ಎಲ್ಲ ಕಾರ್ಯಕ್ರಮಗಳನ್ನು ಮನದುಂಬಿಕೊಂಡಿದ್ದಾರೆ. ಬೆಳಗಿನ ಗೋಷ್ಠಿಗಳು, ರಾತ್ರಿ ಸಾಂಸ್ಕೃತಿಯ ಕಾರ್ಯಕ್ರಮಗಳು, ಜಾನಪದ ಹಾಡುಗಳು, ನೃತ್ಯ, ಘಟಾನುಘಟಿಗಳ ಕಾರ್ಯಕ್ರಮಗಳನ್ನು ಕೂಡ ನೋಡಿ ಸಂತಸಪಟ್ಟಿದ್ದಾರೆ.