ಕೈಗಾರಿಕಾ ತರಬೇತಿ ಸಂಸ್ಥೆ ಮತ್ತು ಉದ್ಯೋಗ ಇಲಾಖೆ, ತರಬೇತಿ ಸಂಸ್ಥೆ ಹಾಗೂ ಹಳೇ ವಿದ್ಯಾರ್ಥಿಗಳ ಸಂಘದ ಸಹಯೋಗದಲ್ಲಿ ನಡೆಯುವ ಬೆಳ್ಳಿ ಹಬ್ಬ ಮತ್ತು ಗುರುವಂದನಾ ಕಾರ್ಯಕ್ರಮದಲ್ಲಿ ಶಾಸಕ ಕೆ.ಎಂ.ಉದಯ್ ಅಧ್ಯಕ್ಷತೆ ವಹಿಸಲಿದ್ದು, ಇಲಾಖೆ ಆಯುಕ್ತ ಡಾ.ರಾಗಾ ಪ್ರಿಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕಿನ ಸೋಮನಹಳ್ಳಿಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಬೆಳ್ಳಿ ಹಬ್ಬ ಮಹೋತ್ಸವ ಮತ್ತು ಗುರುವಂದನಾ ಕಾರ್ಯಕ್ರಮವನ್ನು ಡಿ.20 ರಂದು ಹಮ್ಮಿಕೊಳ್ಳಲಾಗಿದೆ ಎಂದು ತರಬೇತಿ ಸಂಸ್ಥೆ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎ.ಎಂ.ಮಹೇಶ್ ಗುರುವಾರ ಹೇಳಿದರು.ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಕೈಗಾರಿಕಾ ತರಬೇತಿ ಸಂಸ್ಥೆ ಮತ್ತು ಉದ್ಯೋಗ ಇಲಾಖೆ, ತರಬೇತಿ ಸಂಸ್ಥೆ ಹಾಗೂ ಹಳೇ ವಿದ್ಯಾರ್ಥಿಗಳ ಸಂಘದ ಸಹಯೋಗದಲ್ಲಿ ನಡೆಯುವ ಬೆಳ್ಳಿ ಹಬ್ಬ ಮತ್ತು ಗುರುವಂದನಾ ಕಾರ್ಯಕ್ರಮದಲ್ಲಿ ಶಾಸಕ ಕೆ.ಎಂ.ಉದಯ್ ಅಧ್ಯಕ್ಷತೆ ವಹಿಸಲಿದ್ದು, ಇಲಾಖೆ ಆಯುಕ್ತ ಡಾ.ರಾಗಾ ಪ್ರಿಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದರು.
2002ರಲ್ಲಿ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕೈಗಾರಿಕಾ ತರಬೇತಿ ಸಂಸ್ಥೆ ಅಸ್ತಿತ್ವಕ್ಕೆ ಬಂದಿತು. ಈಗ ಸಂಸ್ಥೆಗೆ 25 ವಸಂತ ಪೂರೈಸಿರುವ ಹಿನ್ನೆಲೆಯಲ್ಲಿ ಬೆಳ್ಳಿ ಹಬ್ಬ ಆಚರಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ 5 ಮಂದಿಗೆ ಸನ್ಮಾನಿಸಲಾಗುವುದು ಎಂದರು.ಬೆಳ್ಳಿ ಹಬ್ಬದ ಅಂಗವಾಗಿ ಹೊರ ತಂದಿರುವ ಸ್ಮರಣ ಸಂಚಿಕೆಯನ್ನು ಜಿಲ್ಲಾಧಿಕಾರಿ ಡಾ. ಕುಮಾರ್ ಬಿಡುಗಡೆ ಮಾಡಲಿದ್ದಾರೆ.
ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ಆನಂದ ಘನ ಉಪಸ್ಥಿತಿಯಲ್ಲಿ ಜಿಪಂ ಸಿಇಒ ಕೆ.ಆರ್.ನಂದಿನಿ ರಕ್ತದಾನ ಶಿಬಿರವನ್ನು ಮತ್ತು ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಹಳೇ ವಿದ್ಯಾರ್ಥಿಗಳ ಸಂಘವನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ನಿರ್ದೇಶಕ ಎನ್.ಎಸ್.ಚಿದಾನಂದ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಜಂಟಿ ನಿರ್ದೇಶಕಿ ಎಸ್.ಮಂಜುಳಾ ಬಹುಮಾನ ವಿತರಣೆ ಮಾಡಲಿದ್ದಾರೆ. ಎಂ.ಸಿ.ಬಸವರಾಜು ಪ್ರಧಾನ ಭಾಷಣ ಮಾಡಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಾಹಿತ್ಯ ಕ್ಷೇತ್ರ- ತೈಲೂರು ವೆಂಕಟಕೃಷ್ಣ, ಶಿಕ್ಷಣ ಕ್ಷೇತ್ರ- ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕೆ.ಜೆ.ಶಿವಲಿಂಗಯ್ಯ, ಕೃಷಿ ಕ್ಷೇತ್ರ- ಸಾವಯವ ಕೃಷಿಕ ಜಿ.ಎಂ.ಸಿದ್ದರಾಜು, ಕಲೆ- ಜಾಗೃತಿ ಬರಹಗಾರ ತೂಬಿನಕೆರೆ ಗೋವಿಂದ್ ಹಾಗೂ ಕ್ರೀಡಾ ಕ್ಷೇತ್ರದಿಂದ ವಾಲಿಬಾಲ್ ಆಟಗಾರ್ತಿ ಎಂ.ಎಸ್. ಸಂಜನಾ ಅವರುಗಳನ್ನು ಸನ್ಮಾನಿಸಲಾಗುವುದು ಎಂದರು.ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಜಂಟಿ ನಿರ್ದೇಶಕ ಕೆ.ಆರ್.ಹಾಲಪ್ಪ ಶೆಟ್ಟಿ, ವಿಭಾಗೀಯ ಉಪ ನಿರ್ದೇಶಕ ಕೆ.ಸಿ.ರವಿಶಂಕರ್ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೊಷ್ಠಿಯಲ್ಲಿ ಕಾರ್ಯದರ್ಶಿ ಚಂದ್ರಶೇಖರ್, ಖಜಾಂಚಿ ಪ್ರತಾಪ್ ಚಂದ್ರ, ಉಪಾಧ್ಯಕ್ಷ ಸೋಮರಾಜು, ಕ್ರೀಡಾ ಕಾರ್ಯದರ್ಶಿ ಚಂದ್ರಕಲಾ, ಸಮಿತಿ ಸದಸ್ಯರಾದ ಶೇಖರ್, ಜಯವಾಣಿ, ಆಶಾಲತಾ ಇದ್ದರು.