ಇಂದು ಮಾಲೂರು ಕ್ಷೇತ್ರದಮರು ಮತ ಎಣಿಕೆ: ಸಿದ್ದತೆ

| Published : Nov 11 2025, 02:00 AM IST

ಸಾರಾಂಶ

ಸುಪ್ರೀಂಕೋರ್ಟ್‌ ಆದೇಶದ ಮೇರೆಗೆ ಮಂಗಳವಾರ ಕೋಲಾರ ಜಿಲ್ಲೆ ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆ ನಡೆಯಲಿದ್ದು, ಇದಕ್ಕಾಗಿ ಕೋಲಾರದ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.

ಕನ್ನಡಪ್ರಭ ವಾರ್ತೆ ಕೋಲಾರ

ಸುಪ್ರೀಂಕೋರ್ಟ್‌ ಆದೇಶದ ಮೇರೆಗೆ ಮಂಗಳವಾರ ಕೋಲಾರ ಜಿಲ್ಲೆ ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆ ನಡೆಯಲಿದ್ದು, ಇದಕ್ಕಾಗಿ ಕೋಲಾರದ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.

2023ರ ವಿಧಾನಸಭಾ ಚುನಾವಣೆಯಲ್ಲಿ ಮಾಲೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ವೈ.ನಂಜೇಗೌಡ ಅವರು 248 ಮತಗಳಿಂದ ಬಿಜೆಪಿ ಅಭ್ಯರ್ಥಿ ಮಂಜುನಾಥ್ ಗೌಡ ಅವರನ್ನು ಸೋಲಿಸಿ ಆಯ್ಕೆಯಾಗಿದ್ದರು. ಆದರೆ, ಮತ ಎಣಿಕೆಯಲ್ಲಿ ಲೋಪವಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಮಂಜುನಾಥ್ ಗೌಡ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೀಗಾಗಿ, ಹೈಕೋರ್ಟ್ ಮರು ಮತ ಎಣಿಕೆಗೆ ಆದೇಶ ನೀಡಿತ್ತು. ಅಲ್ಲದೆ, ಶಾಸಕ ಸ್ಥಾನದಿಂದ ನಂಜೇಗೌಡರ ಆಯ್ಕೆ ಅಸಿಂಧುಗೊಳಿಸಿತ್ತು.

ಹೈಕೋರ್ಟ್ ಆದೇಶವನ್ನು ಹಾಲಿ ಶಾಸಕ ಕೆ.ವೈ.ನಂಜೇಗೌಡ ಅವರು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಶಾಸಕ ಸ್ಥಾನದಿಂದ ನಂಜೇಗೌಡರ ಆಯ್ಕೆ ಅಸಿಂಧುಗೊಳಿಸಿದ್ದ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಿತ್ತು. ಆದರೆ, ಮತಗಳ ಮರು ಎಣಿಕೆ ನಡೆಸಲು ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಮಂಗಳವಾರ ಮರುಮತ ಎಣಿಕೆ ನಡೆಯಲಿದೆ. ಫಲಿತಾಂಶವನ್ನು ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾಗುತ್ತದೆ.

ಸಕಲ ಸಿದ್ಧತೆ:

ಕೋಲಾರದ ಟಕಮದಲ್ಲಿರುವ ತೋಟಗಾರಿಕಾ ಮಹಾವಿದ್ಯಾಲಯದಲ್ಲಿ ಮತಗಳ ಮರು ಎಣಿಕೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಬಿಜೆಪಿ ಮಾಜಿ ಶಾಸಕ ಕೆ.ಎಸ್.ಮಂಜುನಾಥ್ ಹಾಗೂ ಇತರ ಪಕ್ಷದ ಅಭ್ಯರ್ಥಿಗಳ ಸಮ್ಮುಖದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಸ್ಟ್ರಾಂಗ್ ರೂಮ್ಅನ್ನು ತೆರೆದು, ನಗರದ ಹೊರವಲಯದ ತೋಟಗಾರಿಕೆ ವಿವಿಯಲ್ಲಿರುವ ಮತ ಎಣಿಕೆ ಕೇಂದ್ರಕ್ಕೆ ಇವಿಎಂ ಯಂತ್ರಗಳನ್ನು ಸ್ಥಳಾಂತರಿಸಲಾಯಿತು.

ಮರು ಮತ ಎಣಿಕೆಗೆ ಉಪವಿಭಾಗಾಧಿಕಾರಿ ಡಾ। ಎಚ್‌.ಪಿ.ಎಸ್.ಮೈತ್ರಿ ಅವರನ್ನು ಚುನಾವಣಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಕೋಲಾರ, ಬಂಗಾರಪೇಟೆ, ಶ್ರೀನಿವಾಸಪುರ, ಮುಳಬಾಗಿಲು ತಹಸೀಲ್ದಾರ್‌ಗಳನ್ನು ಹೆಚ್ಚುವರಿ ಸಹಾಯಕ ಚುನಾವಣಾಧಿಕಾರಿಗಳಾಗಿ ನೇಮಿಸಲಾಗಿದೆ.

ಮರು ಮತ ಎಣಿಕೆಗೆ ಉತ್ತರ ಪ್ರದೇಶದ ಐಎಎಸ್ ಅಧಿಕಾರಿ ಪ್ರಭು ನಾರಾಯಣ್ ಸಿಂಗ್ ಅವರನ್ನು ಚುನಾವಣಾ ಆಯೋಗ ಚುನಾವಣಾ ವೀಕ್ಷಕರನ್ನಾಗಿ ನೇಮಿಸಿದೆ. 1,650ಕ್ಕೂ ಹೆಚ್ಚು ಅಂಚೆ ಮತಗಳಿದ್ದು, ನಾಲ್ಕು ಟೇಬಲ್ ಗಳಲ್ಲಿ ಅಂಚೆ ಮತಗಳನ್ನು ಎಣಿಕೆ ಮಾಡಲಾಗುತ್ತದೆ. ಪ್ರತಿ ಟೇಬಲ್‌ನಲ್ಲೂ 500 ಅಂಚೆ ಮತಗಳನ್ನು ಎಣಿಕೆ ಮಾಡಲಾಗುತ್ತದೆ. ಪ್ರತಿ ಟೇಬಲ್ ಗೂ ಒಬ್ಬ ತಹಸೀಲ್ದಾರ್‌ರನ್ನು ನೇಮಿಸಲಾಗಿದೆ. ಬೆಳಗ್ಗೆ 8 ಗಂಟೆಯಿಂದ ಮತಗಳ ಎಣಿಕೆ ಆರಂಭವಾಗಲಿದೆ.

ಇವಿಎಂ ಮತಗಳನ್ನು 14 ಟೇಬಲ್‌ಗಳಲ್ಲಿ ಎಣಿಕೆ ಮಾಡಲಾಗುತ್ತದೆ. ಪ್ರತಿ ಟೇಬಲ್‌ಗೆ ಒಬ್ಬ ಕೌಂಟಿಂಗ್ ಸೂಪರ್ ವೈಸರ್ ಮತ್ತು ಸಹಾಯಕ ಸಿಬ್ಬಂದಿ ಇರುತ್ತಾರೆ. ಈ ಮಧ್ಯೆ, ಎಣಿಕೆ ನಂತರ ಮೆರವಣಿಗೆ, ವಿಜಯೋತ್ಸವ, ಪಟಾಕಿ ಸಿಡಿಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ। ಎಂ.ಆರ್.ರವಿ ಆದೇಶ ಹೊರಡಿಸಿದ್ದಾರೆ.