ಸಾರಾಂಶ
ಶಿವಮೊಗ್ಗ: ನಗರದ ಲಗಾನ್ ಕಲ್ಯಾಣ ಮಂದಿರದಲ್ಲಿ ವಿಪ್ರ ಯುವ ಪರಿಷತ್ ವತಿಯಿಂದ ಜ.26ರಿಂದ 28ರವರೆಗೆ ತೇರಾ ಕೋಟಿ ಶ್ರೀರಾಮ ತಾರಕ ಜಪ ಸಾಂಗತ ಯಾಗ ಏರ್ಪಡಿಸಲಾಗಿದೆ ಎಂದು ಪರಿಷತ್ತಿನ ಅಧ್ಯಕ್ಷ ರಾಘವೇಂದ್ರ ಉಡುಪ ಹೇಳಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಪ್ರ ಯುವ ಪರಿಷತ್ತು, ಕಳೆದೊಂದು ವರ್ಷದಿಂದ ಹೆಬ್ಬಳ್ಳಿಯ ಶ್ರೀ ದತ್ತಾವಧೂತ ಮಹಾರಾಜರ ಅನುಗ್ರಹದಿಂದ 13 ಕೋಟಿ ರಾಮನಾಮ ಜಪ ಪೂರೈಸಿದೆ. ಇದರ ಅಂಗವಾಗಿ ದತ್ತಾವಧೂತ ಮಹಾರಾಜರ ಸಾನ್ನಿಧ್ಯದಲ್ಲಿ ಯಾಗವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ಜ.26ರಿಂದ 28ರವರೆಗೆ ನಡೆಯಲಿರುವ ಕಾರ್ಯಕ್ರಮಗಳಲ್ಲಿ ಪ್ರತಿದಿನ ಗಣಪತಿ ಪೂಜೆ, ಹೋಮ, ಪ್ರಕಾರಶುದ್ಧಿ, ಪುಣ್ಯಾಹ, ಪೂಜೆ ಕಾರ್ಯಕ್ರಮಗಳು ನಡೆಯುತ್ತವೆ. 26ರ ಸಂಜೆ 6ರವರೆಗೆ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಳ್ಳುತ್ತದೆ. ರಾತ್ರಿ 8ಕ್ಕೆ ಶ್ರೀಕ್ಷೇತ್ರ ಹೆಬ್ಬಳ್ಳಿಯಿಂದ ಶ್ರೀಮಹಾರಾಜರ ಪಾದುಕೆ ಪರಿವಾರದೊಂದಿಗೆ ಮಹಾರಾಜರ ಪುರ ಪ್ರವೇಶ ಆಗಲಿದೆ. ಜ.27ರಂದು ಬೆಳಗ್ಗೆ 7ರಿಂದ ರಾಮ ತಾರಕಯಾಗ ಪ್ರಾರಂಭಗೊಳ್ಳಲಿದೆ. 13 ಕುಂಡದಲ್ಲಿ ಋತ್ವಿಜರಿಂದ ಯಾಗ ನಡೆಯಲಿದೆ. ಕೂಡ್ಲಿ ಕ್ಷೇತ್ರದ ಶ್ರೀ ಅಭಿನವ ಶಂಕರ ಭಾರತಿ ಮಹಾಸ್ವಾಮಿಗಳು, ಮೈಸೂರಿನ ಶ್ರೀ ಅರ್ಜುನ್ ಅವಧೂತರು, ಅರಸೀಕೆರೆಯ ಶ್ರೀ ಪರಂಪರಾ ಅವಧೂತ ಶ್ರೀ ಸತೀಶ್ ಶರ್ಮಾಜಿ, ರಾಮಕೃಷ್ಣ ಆಶ್ರಮದ ಶ್ರೀ ವಿನಯಾನಂದ ಸರಸ್ವತಿ ಸಾನ್ನಿಧ್ಯ ವಹಿಸಲಿದ್ದಾರೆ ಎಂದು ತಿಳಿಸಿದರು.
ಬೆಳಗ್ಗೆ 11.30ಕ್ಕೆ ಸೀತಾರಾಮ ಕಲ್ಯಾಣ, ಆಶೀರ್ವಚನವಿದೆ. ಸಂಜೆ 4 ರಿಂದ 5 ರವರೆಗೆ ರಾಮನ್ ಸಿಸ್ಟರ್ ಅವರಿಂದ ವೀಣಾ ವಾದನ, ಸಂಜೆ 6 ರಿಂದ ರಾಮಕೃಷ್ಣ ಹೆಗಡೆ ಅವರ ಭಾಗವತಿಕೆಯಲ್ಲಿ ಲವಕುಶ ಪ್ರಸಂಗ ಯಕ್ಷಗಾನ ನಡೆಯಲಿದೆ. ನಂತರ 8:30ಕ್ಕೆ ಶೇಜಾರುತಿ ಪ್ರಸಾದ ವಿನಿಯೋಗವಾಗಲಿದೆ. 28ರ ಭಾನುವಾರ ಬೆಳಗ್ಗೆ 7ರಿಂದ ಪುನಃ ರಾಮ ತಾರಕ್ ಯಾಗ ಗೋ ಪೂಜೆಯೊಂದಿಗೆ ಮುಂದುವರಿಯಲಿದೆ. ಬೆಳಗ್ಗೆ 10:30ಕ್ಕೆ ಪೂರ್ಣಾಹುತಿ ನಂತರ ಬೆಳಗ್ಗೆ 11 ಗಂಟೆಗೆ ಶ್ರೀರಾಮನಿಗೆ ಪಟ್ಟಾಭಿಷೇಕ ನಡೆಯಲಿದೆ ಎಂದರು.ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಚನ್ನಬಸಪ್ಪ, ಶಾರದ ಪೂರಾನಾಯ್ಕ, ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ವಿಪ ಸದಸ್ಯ ಡಿ.ಎಸ್.ಅರುಣ್ ಮತ್ತಿತರರು ಪಾಲ್ಗೊಳ್ಳುವರು ಎಂದು ತಿಳಿಸಿದರು.