ಸಾರಾಂಶ
ಚಿತ್ರದುರ್ಗ: ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತೆ ಒತ್ತಾಯಿಸಿ ಅಂಗನವಾಡಿ ಹಾಗೂ ಬಿಸಿಯೂಟ ಕಾರ್ಯಕರ್ತೆಯರು ಜಿಲ್ಲಾ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದರು. ಸಂಸದ ಹಾಗೂ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಸ್ಥಳಕ್ಕೆ ಆಗಮಿಸಿ ಸಮಸ್ಯೆಗಳನ್ನು ಆಲಿಸುವಂತೆ ಪಟ್ಟು ಹಿಡಿದರು.
ಅಂಗನವಾಡಿ ಕಾರ್ಯಕರ್ತೆಯರಿಗೆ 4500 ರು. ಸಹಾಯಕಿಯರಿಗೆ 2250 ರು. ಆಶಾ ಕಾರ್ಯಕರ್ತೆಯರಿಗೆ 2000 ರು. ನೀಡುತ್ತಿದ್ದು, ಯಾವುದೇ ಜೀವನ ಭದ್ರತೆಯಿಲ್ಲದೇ ಬದುಕುತ್ತಿದ್ದಾರೆ. 2018ರಿಂದ 1 ರುಪಾಯಿ ಸಹ ಹೆಚ್ಚಳ ಮಾಡಿಲ್ಲ. ಅಲ್ಲಿನಿಂದ ಇಲ್ಲಿಯವರೆಗೆ ಹೋರಾಟ ಮಾಡಿಕೊಂಡು ಬರುತ್ತಿದ್ದರೂ ಕೇಂದ್ರ ಮತ್ತು ರಾಜ್ಯ ಸರ್ಕಾರ ಗಮನ ಕೊಡುತ್ತಿಲ್ಲ. ಸಂಸದ ಕೇಂದ್ರ ಮಂತ್ರಿ ಎ.ನಾರಾಯಣಸ್ವಾಮಿ ಇದೇ ರೀತಿ ನಮ್ಮನ್ನು ಕಡೆಗಣಿಸುತ್ತಿದ್ದರೆ ಸದ್ಯದಲ್ಲಿಯೇ ಎದುರಾಗಲಿರುವ ಪಾರ್ಲಿಮೆಂಟ್ ಚುನಾವಣೆಯಲ್ಲಿ ತಕ್ಕ ಶಾಸ್ತಿ ಮಾಡಬೇಕಾದೀತೆಂದು ಎಚ್ಚರಿಸಿದರು.ಆಹಾರ, ಆರೋಗ್ಯ, ಶಿಕ್ಷಣಕ್ಕಾಗಿರುವ ಯೋಜನೆಗಳಾದ ಐಸಿಡಿಎಸ್, ಎಂಡಿಎಂ, ಎನ್ಎಚ್ಎಂಸ್, ಐಸಿಪಿಎಸ್ ಇನ್ನು ಮುಂತಾದ ಯೋಜನೆಗಳನ್ನು ಜಾರಿಗೆ ತರಬೇಕು. 3-6 ವರ್ಷದೊಳಗಿನ ಮಕ್ಕಳಿಗೆ ಉಚಿತ ಕಡ್ಡಾಯ ಮತ್ತು ಸಾರ್ವತ್ರಿಕವಾಗಿ ಪೂರ್ವ ಪ್ರಾಥಮಿಕ ಶಿಕ್ಷಣ ಅಂಗನವಾಡಿ ಕೇಂದ್ರಗಳಲ್ಲಿಯೇ ನೀಡಲು ಕಾನೂನು ರಚಿಸಿ ಎನ್.ಇಪಿ ನಿಲ್ಲಿಸಬೇಕು. ಈ ಯೋಜನೆಗಳಲ್ಲಿ ದುಡಿಯುತ್ತಿರುವ ಗುತ್ತಿಗೆ ಒಳಗುತ್ತಿಗೆ ಹೊರಗುತ್ತಿಗೆ ನೌಕರರನ್ನು ಖಾಯಂಗೊಳಿಸಿ ಸಮಾನ ಕೆಲಸಕ್ಕೆ ಸಮಾನ ವೇತನ ಕೊಡಬೇಕು ಎಂದು ಆಗ್ರಹಿಸಿದರು.
ಸರ್ಕಾರ ಯಾವುದೇ ಹೊಸ ಯೋಜನೆಗಳ ಜಾರಿಗೆ ತಂದರೂ ಅವುಗಳ ಅನು್ಷ್ಠಾನಕ್ಕಾಗಿ ಅಂಗನವಾಡಿ ಹಾೂಗ ಆಶಾ ಕಾರ್ಯಕರ್ತೆಯರು ಬೇಕು. ಇದಕ್ಕಾಗಿ ಅವರು ಹಗಲಿರುಳು ದುಡಿಯುತ್ತಾರೆ. ಅಂತಹವರ ಜೀವನ ಭದ್ರತೆ ನೀಡುವಲ್ಲಿ ಸರ್ಕಾರ ಉದಾಸೀನ ತೋರಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಅಂಗನವಾಡಿ, ಬಿಸಿಯೂಟ, ಆಶಾ ಮತ್ತು ಇತರೆ ಕಾರ್ಯಕರ್ತೆಯರಿಗೆ 31 ಸಾವಿರ ರು. ಕನಿಷ್ಟ ವೇತನ ನಿಗದಿಪಡಿಸಿ ಮಾಸಿಕ ಹತ್ತು ಸಾವಿರ ರು. ಪಿಂಚಣಿ ನೀಡುವುದು ಸೇರಿದಂತೆ ಇನ್ನಿತರೆ ಪ್ರಮುಖ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು. ಸಿಐಟಿಯು ಮುಖ್ಯ ಸಂಚಾಲಕ ಟಿ.ತಿಪ್ಪೇಸ್ವಾಮಿ, ಸಹ ಸಂಚಾಲಕ ಟಿ.ನಿಂಗಣ್ಣ, ಸಿ.ಕೆ.ಗೌಸ್‍ಪೀರ್, ಡಿ.ಎಂ.ಮಲಿಯಪ್ಪ, ಎನ್.ನಿಂಗಮ್ಮ, ಇಂದಿರಮ್ಮ, ಬಿ.ಬೋರಮ್ಮ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
----------24 ಸಿಟಿಡಿ2
ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತೆ ಆಗ್ರಹಿಸಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಜಿಲ್ಲಾ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದರು.