ಕನ್ನಡಪ್ರಭ ವಾರ್ತೆ ಜಮಖಂಡಿ

ಕಾನೂನು ಸೂ ವ್ಯವಸ್ಥೆ ಕಾಪಾಡಲು ಮೊದಲ ಆದ್ಯತೆ ನೀಡಲಾಗುವುದು, ಸಮಾಜ ಘಾತುಕ ಚಟುವಟಿಕೆಗಳು ಸೇರಿದಂತೆ ಇನ್ನಿತರ ಅಪರಾಧಗಳ ಸಂಖ್ಯೆಯನ್ನು ಕಡಿಮೆಗೊಳಿಸಲು ಕ್ರಮ ಜರುಗಿಸಲಾಗುವುದು ಎಂದು ಬೆಳಗಾವಿ ನೂತನ ಐಜಿಪಿ ಸಂದೀಪ ಪಾಟೀಲ ತಿಳಿಸಿದರು.

ನಗರಠಾಣೆಗೆ ಬುಧವಾರ ಸಂಜೆ ಭೇಟಿ ನೀಡಿದ್ದ ಅವರು, ಸುದ್ದಿಗಾರರೊಂದಿಗೆ ಮಾತನಾಡಿದರು. ನೂತನವಾಗಿ ಉತ್ತರ ವಲಯ ಐಜಿಪಿಯಾಗಿ ಅಧಿಕಾರ ವಹಿಸಿಕೊಂಡ ನಂತರ ವಿವಿಧ ನಗರಗಳಿಗೆ ಭೇಟಿ ನೀಡುತ್ತಿದ್ದೇನೆ. ಗುರುವಾರ ವಿಜಯಪುರ ಭೇಟಿ ಇದೆ. ಮಾರ್ಗ ಮಧ್ಯದಲ್ಲಿ ಮುಧೋಳ ಹಾಗೂ ಜಮಖಂಡಿ ಠಾಣೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾಗಿ ತಿಳಿಸಿದರು.

ದಾಖಲಾದ ಅರಾಧಗಳ ಸಂಖ್ಯೆ, ಕೈಗೊಂಡ ಕ್ರಮಗಳ ಕುರಿತು ಮಾಹಿತಿ ಪಡೆದಿದ್ದೇನೆ. ಗಾಂಜಾ, ಮಾವಾ, ಡ್ರಗ್ಸ ಮಾರಾಟ ಜಾಲಗಳನ್ನು ಪತ್ತೆಹಚ್ಚಿ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ತಾಲುಕಿನಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಅಕ್ರಮ ತಡೆಯಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಡಿವೈಎಸ್‌ಪಿ ಸೈಯದ್‌ ರೋಷನ್‌ ಜಮೀರ್‌, ಸಿಪಿಐ ಮಲ್ಲಪ್ಪ ಮಡ್ಡಿ, ಪಿಎಸ್‌ಐ ಅನೀಲ ಕುಂಬಾರ ಸೇರಿದಂತೆ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.