ಬಾಂಗ್ಲಾದೇಶ ಸೇರಿದಂತೆ ಮುಸ್ಲಿಂ ರಾಷ್ಟಗಳಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳ ಮೇಲೆ ನಿರಂತರ ಹಲ್ಲೆ, ಗುಂಪು ಹಿಂಸಾಚಾರ, ಹತ್ಯೆಗಳು ನಡೆಯುತ್ತಿವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಬಾಂಗ್ಲಾದೇಶದಲ್ಲಿ ಗುಂಪೊಂದು ಹಿಂದೂ ವ್ಯಕ್ತಿಯನ್ನು ಹತ್ಯೆ ಮಾಡಿರುವುದನ್ನು ಖಂಡಿಸಿ ನಗರದ ಅರಕೇಶ್ವರ ಬಡಾವಣೆ ಮುಖ್ಯ ರಸ್ತೆಯಲ್ಲಿ ಹಿಂದೂ ಹಿತರಕ್ಷಣಾ ವೇದಿಕೆ ಕಾರ್ಯಕರ್ತರು ಪಂಜಿನ ಮೆರವಣಿಗೆ ನಡೆಸಿದರು.

ಅರಕೇಶ್ವರ ಬಡಾವಣೆ ಮುಖ್ಯ ರಸ್ತೆಯಲ್ಲಿರುವ ಶ್ರೀಆಂಜನೇಯಸ್ವಾಮಿ ದೇವಾಲಯದ ಬಳಿ ಸೇರಿದ ಹಿಂದೂ ಹಿತರಕ್ಷಣಾ ವೇದಿಕೆ ಕಾರ್ಯಕರ್ತರು, ಧಾರ್ಮಿಕ ಹಿಂಸಾಚಾರ ವಿರೋಧಿಸಿ ಘೋಷಣೆ ಕೂಗಿದರು. ಕಿಡಿಗೇಡಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಹಿಂದೂ ಹಿತರಕ್ಷಣಾ ವೇದಿಕೆ ಸಂಚಾಲಕ ಹಾಲಹಳ್ಳಿ ವಸಂತಕುಮಾರ್ ಮಾತನಾಡಿ, ಬಾಂಗ್ಲಾದೇಶ ಸೇರಿದಂತೆ ಮುಸ್ಲಿಂ ರಾಷ್ಟಗಳಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳ ಮೇಲೆ ನಿರಂತರ ಹಲ್ಲೆ, ಗುಂಪು ಹಿಂಸಾಚಾರ, ಹತ್ಯೆಗಳು ನಡೆಯುತ್ತಿವೆ ಎಂದು ಕಿಡಿಕಾರಿದರು.

ಬಾಂಗ್ಲಾ ದೇಶದಲ್ಲಿ ಭಾರತ ವಿರೋಧಿ ಪ್ರತಿಭಟನೆಗಳ ನಡುವೆ, ಇಸ್ಲಾಂ ಧರ್ಮವನ್ನು ಅವಮಾನಿಸಿದ ಆರೋಪದ ಮೇಲೆ ಮೈಮೆನ್ಸಿಂಗ್ ಜಿಲ್ಲೆಯ ಭಾಲುಕಾ ಉಪಜಿಲ್ಲಾದಲ್ಲಿ ನಡೆದ ಗುಂಪು ಹಲ್ಲೆಯಲ್ಲಿ ಯುವಕ ಹಿಂದೂ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಲಾಗಿದೆ. ಪ್ರತಿಭಟನಾಕಾರರು 30 ವರ್ಷದ ದೀಪುಚಂದ್ರ ದಾಸ್ ಅವರ ಮೃತದೇಹವನ್ನು ಸುಟ್ಟುಹಾಕಿದರು ಎಂದು ಆರೋಪಿಸಿದರು.

ಅಲ್ಲಿನ ಹಿಂದೂಗಳ ಮೇಲೆ ಎಲ್ಲಾ ರೀತಿಯ ಹಿಂಸೆ, ಬೆದರಿಕೆ, ಬೆಂಕಿ ಹಚ್ಚುವಿಕೆ ಮತ್ತು ಆಸ್ತಿ ನಾಶವನ್ನು ’ಬಲವಾಗಿ ಮತ್ತು ನಿಸ್ಸಂದಿಗ್ಧವಾಗಿ’ ಖಂಡಿಸುತ್ತೇವೆ, ಅಲ್ಲಿನ ಸರ್ಕಾರ ಹಿಂದೂಗಳಿಗೆ ಸೂಕ್ತ ರಕ್ಷಣೆ ನೀಡಿ, ಕಿಡಿಕೇಡಿಗಳಿಗೆ ಮರಣದಂಡನೆ ವಿಧಿಸಬೇಕು ಎಂದು ಆಗ್ರಹಿಸಿದರು.

ಮುಖ್ಯರಸ್ತೆಯಲ್ಲಿ ಸಾಗಿದ ಪಂಜಿನ ಮೆರವಣಿಗೆಯು ಗುತ್ತಲು ಸರ್ಕಾರಿ ಶಾಲೆವರಗೆ ಸಾಗಿ, ಮಾನವ ಸರಪಳಿ ನಿರ್ಮಿಸಿ, ಸಂತಾಪ ಸೂಚಿಸಿ ಸಮಾಪ್ತಿಗೊಳಿಸಿದರು. ಅಪಾರ ಸಂಖ್ಯೆಯಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ಕಾರ್ಯಕ್ರಮದಲ್ಲಿ ಹಿಂದೂ ಹಿತರಕ್ಷಣಾ ವೇದಿಕೆಯ ಮುಖಂಡರಾದ ಪ್ರದೀಪ್, ವಿವೇಕ್, ಎಚ್.ಆರ್.ಅಶೋಕ್‌ಕುಮಾರ್ ಪ್ರಸನ್ನ, ಚಂದ್ರ, ಶಿವಕುಮಾರ್ ಆರಾಧ್ಯ, ಜವರೇಗೌಡ, ನಂದೀಶ್, ಯೋಗೇಶ್, ಜೀವಧಾರೆ ನಟರಾಜು ಮತ್ತಿತರರಿದ್ದರು.