ಸಾರಾಂಶ
ಚಿಂತಾಮಣಿ: ಟ್ರ್ಯಾಕ್ಟರ್‌ನ ಚಾಲಕನೊಬ್ಬ ಅತಿವೇಗ ಮತ್ತು ಅಜಾಗರೂಕತೆಯಿಂದ ವಾಹನ ಚಲಾಯಿಸಿಕೊಂಡು ಹೋಗುತ್ತಿದ್ದು, ಹೆದ್ದಾರಿಯಲ್ಲಿ ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ಹಿಂಬದಿಯಲ್ಲಿ ಬರುತ್ತಿದ್ದ ಬೈಕ್ ಸವಾರ ಟ್ರ್ಯಾಕ್ಟರ್ ಹಿಂಭಾಗದ ಟ್ರಾಲಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನ ತಲೆಗೆ ತೀವ್ರ ಪೆಟ್ಟುಬಿದ್ದು ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಾಯಿಂದ್ರಹಳ್ಳಿ ಗೇಟ್ ಬಳಿ ನಡೆದಿದೆ. ಬೆಂಗಳೂರು ರಸ್ತೆಯ ನಾಯಿಂದ್ರಹಳ್ಳಿ ಗೇಟ್ ಬಳಿ ಬುಧವಾರ ರಾತ್ರಿ ಸುಮಾರು ೮. ೩೦ರ ವೇಳೆ ನಡೆದ ಅಪಘಾತದಲ್ಲಿ ಮೃತಪಟ್ಟ ಬೈಕ್ ಸವಾರನನ್ನು ಚಿಂತಾಮಣಿ ತಾಲೂಕಿನ ಚಿಲಕಲನೇರ್ಪು ಹೋಬಳಿ ಯಂಡಹಳ್ಳಿಯ ಆನಂದ್ ಬಿನ್ ವೆಂಕಟರಾಮಪ್ಪ (೩೦ ವರ್ಷ) ಎಂದು ಗುರುತಿಸಲಾಗಿದೆ. ಆನಂದ್ ತಾಲೂಕಿನ ಕೆಂಚರ‍್ಲಹಳ್ಳಿಯಲ್ಲಿ ಬೈಕ್ ವಾಹನಗಳ ರಿಪೇರಿ ಅಂಗಡಿಯನ್ನು ತೆರೆದಿದ್ದು, ವಾಹನಗಳಿಗೆ ಬೇಕಾದ ಬಿಡಿ ಭಾಗಗಳನ್ನು ಖರೀದಿಸಿಕೊಂಡು ಬೆಂಗಳೂರಿನಿಂದ ಚಿಂತಾಮಣಿಗೆ ವಾಪಸ್ಸಾಗುತ್ತಿದ್ದಾಗ ಈ ಅಪಘಾತ ನಡೆದಿದೆ. ಅಪಘಾತಕ್ಕೆ ಕಾರಣವಾದ ಟ್ರ್ಯಾಕ್ಟರ್‌ನ ಚಾಲಕ ಟ್ರ್ಯಾಕ್ಟರ್‌ನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ, ಮೃತ ಬೈಕ್ ಸವಾರನ ಅಣ್ಣ ಪ್ರಸಾದ್ ನೀಡಿದ ದೂರಿನ ಮೇಲೆ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಟ್ರ್ಯಾಕ್ಟರ್‌ನ ಚಾಲಕನ ಪತ್ತೆಗೆ ಮುಂದಾಗಿದ್ದಾರೆ.