ಧಾರವಾಡ:
ಆಧುನಿಕತೆ ಪ್ರವೇಶವಾದರೂ ಸಂಪ್ರದಾಯ ಬಿಡಲಾರದ ಮಾದರಿಯಲ್ಲಿ ಮಹಿಳಾ ಕಾದಂಬರಿಕಾರರು ಬರೆಯುತ್ತಿರುವುದನ್ನು ಕಾಣುತ್ತೇವೆ ಎಂದು ಬೆಟಗೇರಿ ಕೃಷ್ಣಶರ್ಮ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷೆ ಡಾ. ವಿನಯಾ ಒಕ್ಕುಂದ ಹೇಳಿದರು.ಕರ್ನಾಟಕ ವಿದ್ಯಾವರ್ಧಕ ಸಂಘವು ಡಾ. ಬಸು ಬೇವಿನಗಿಡದ ಅನುವಾದಿಸಿದ ವರ್ಜಿನಿಯಾ ವೂಲ್ಪ್ ಅವರ ‘ಲೈಟ್ ಹೌಸ್’ ಕೃತಿ ಬಿಡುಗಡೆ ಮಾಡಿದ ಅವರು, ಲೈಟ್ ಹೌಸ್ ಕಾದಂಬರಿ ನೂರು ವರ್ಷಗಳ ಹಿಂದೆ ರಚಿತವಾಗಿದ್ದರೂ ಕೂಡ ಇಂದಿನ ಕಾಲ ಘಟ್ಟದಲ್ಲೂ ಮುಖಾಮುಖಿಯಾಗಿ ನಿಲ್ಲುತ್ತದೆ. ಸಹೃದಯರ ಮನಸ್ಸಿನ ಆಳಕ್ಕೆ ಪಾತ್ರಗಳು ಇಳಿಯುತ್ತವೆ. ಸಂಪ್ರದಾಯದಿಂದ ಆಧುನಿಕತೆಯ ಕಡೆಗೆ ಚಲಿಸುವ ಮಹಿಳೆಯ ರೂಪಕಗಳು ಅಗಾಧ ಅರ್ಥವನ್ನು ಹೊರಸೂಸುತ್ತವೆ. ಹೆಣ್ಣು ಮೀನಿನ ಅತಿಯಾದ ಆಸೆಯಿಂದ ಇಡೀ ಕುಟುಂಬ ನಾಶವಾಗುವ ಸಂದರ್ಭವನ್ನು ಸೊಗಸಾಗಿ ಕಟ್ಟಿಕೊಡಲಾಗಿದೆ. ಇಲ್ಲಿ ಬರುವ ಪಾತ್ರಗಳು ಸಾಮಾನ್ಯವಾದವುಗಳಲ್ಲ. ಎಲ್ಲವೂ ಸೃಜನಶೀಲ ಪಾತ್ರಗಳು ಎಂದು ಹೇಳಿದರು.
ಕೃತಿಯ ಕುರಿತು ಮಾತನಾಡಿದ ಕವಯತ್ರಿ, ಪ್ರಾಧ್ಯಾಪಕಿ, ಡಾ. ಅನಸೂಯ ಕಾಂಬಳೆ, ಮಹಿಳಾ ಸಾಹಿತ್ಯದ ಅನುವಾದ ಆಗದಿರುವುದು ಖೇದದ ಸಂಗತಿ. ಬಸು ಬೇವಿನಗಿಡದ ಇದಕ್ಕೆ ಹೊರತಾಗಿ, ಅನುವಾದಿಸಿದ್ದು ಸಂತಸದ ಸಂಗತಿ. ‘ಲೈಟ್ ಹೌಸ್’ ಬೆಳಕಿನ ಸಂಕೇತ. ಬರುವ ಹಡಗಿಗೆ ದಾರಿ ತೋರಿಸುವಂತೆ, ಒಂದು ಕುಟುಂಬಕ್ಕೆ ಮಹಿಳೆ ಬೆಳಕಾಗಿ ಹೇಗೆ ನಿಲ್ಲುತ್ತಾಳೆ ಎಂಬುದರ ಸಂಕೇತವಾಗಿದೆ. ಆದರೆ, ಇದಕ್ಕೆ ಗಂಡನಾದವನು ಹೇಗೆ ತಡೆಗೋಡೆಯಾಗಿ ವರ್ತಿಸುತ್ತಾನೆ ಎಂಬುದರ ಚಿತ್ರಣವಿದೆ. ನಿರುದ್ಯೋಗದ ಸಮಸ್ಯೆ, ವರ್ಗ ವೈಷಮ್ಯದ ಚಿತ್ರಣವಿದೆ. ಯುದ್ಧ ಸಂದರ್ಭದಲ್ಲಿ ಯುದ್ಧ ಎನ್ನುವುದು ಅಧಿಕಾರದ ಅಭಿವ್ಯಕ್ತಿಯ ಭಾವವಾಗಿದೆ. ಕಾದಂಬರಿಯ ಅನುವಾದದ ಭಾಷೆ ಓದುಗರ ಮನವನ್ನು ಗೆಲ್ಲುವಲ್ಲಿ ಯಶಸ್ಸು ಕಾಣುತ್ತದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಪ್ರಾ. ಶಶಿಧರ ತೋಡಕರ ಕೃತಿ ಕುರಿತು ಮಾತನಾಡಿದರು. ಡಾ. ಬಸು ಬೇವಿನಗಿಡದ ಅನುಭವ ಹಂಚಿಕೊಂಡರು. ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಸ್ವಾಗತಿಸಿದರು. ಡಾ. ಜಿನದತ್ತ ಹಡಗಲಿ ನಿರೂಪಿಸಿದರು.