ಕನ್ನಡಪ್ರಭ ವಾರ್ತೆ ಹರಿಹರ
ತಾಲೂಕಿನ ಅನೇಕ ಗ್ರಾಮಗಳ ರಸ್ತೆಗಳು ಅರೆ ಬರೆ ಕಾಮಗಾರಿಯ ಪ್ರಭಾವಕ್ಕೆ ಸಿಲುಕಿ ಪ್ರಯಾಣಿಕರು ಹೈರಾಣಾಗಿದ್ದಾರೆ. ವ್ಯವಸ್ಥೆ ಸುಧಾರಣೆಗೆ ಒತ್ತಾಯಿಸಿದ್ದಾರೆ.ಇಂಗಳಗೊಂದಿ, ದೂಳೆಹೊಳೆ, ಹೊಳೆ ಸಿರಿಗೆರೆ ಮಾರ್ಗವಾಗಿ ಹಳ್ಳಿಹಾಳ್ ಗ್ರಾಮದವರೆಗಿನ ರಸ್ತೆಯ ತುಂಬಾ ಗುಂಡಿಗಳು ಬಿದ್ದಿವೆ. ಆ ಗುಂಡಿಗಳನ್ನು ಮುಚ್ಚಲು ಸರ್ಕಾರ 18 ಲಕ್ಷ ರು. ಅನುದಾನ ನೀಡಿದೆ. ಇಂಗಳಗೊಂದಿಯಿಂದ ಸಿರಿಗೆರೆವರೆಗೆ ರಸ್ತೆ ದುರಸ್ತಿ ಆಗಿದೆ. ಸಿರಿಗೆರೆ ಕೆರೆಯಿಂದ ಹಳ್ಳಿಹಾಳ್ ಗ್ರಾಮದವರೆಗೆ ರಸ್ತೆ ಗುಂಡಿಗಳು ಅರೆ ಬರೆ ಕಾಮಗಾರಿ ನಡೆದಿದೆ ಎಂದು ಕಡರನಾಯ್ಕನಹಳ್ಳಿ ಗ್ರಾಮದ ಎಸ್ ಅನಂತ,ಮೊಸವಳ್ಳಿ ಸುರೇಶ್ ಮತ್ತಿತರರು ದೂರಿದ್ದಾರೆ.
ಸದರಿ ರಸ್ತೆಯುದ್ದಕ್ಕೂ ಗುಂಡಿಗಳು ಬಿದ್ದಿವೆ. ಸದರಿ ಗುಂಡಿಗಳಿಗೆ ಸ್ವಲ್ಪ ಸ್ವಲ್ಪ ಜೆಲ್ಲಿ ಹಾಕಿದ್ದಾರೆ ಗುಂಡಿಗಳು ಮುಚ್ಚಿಲ್ಲ, ಕೆಲವು ಕಡೆ ಗುಂಡಿಗಳಿಗೆ ಜೆಲ್ಲಿ ಹಾಕಿಲ್ಲ, ಇನ್ನೂ ಕೆಲವೆಡೆ ಗುಂಡಿಗಳಿಗೆ ಜೆಲ್ಲಿ ಹಾಕಿ ಡಾಂಬರು ಹಾಕಿದ್ದಾರೆ. ಆದರೆ ರಸ್ತೆಗೆ ಈ ಕಾಮಗಾರಿ ಪ್ರಯೋಜನ ತಂದಿಲ್ಲ ಎಂಬುದು ಪ್ರಯಾಣಿಕರ ಅಭಿಪ್ರಾಯವಾಗಿದೆ.ಕೊಕ್ಕನೂರು- ಕಡರನಾಯ್ಕನಹಳ್ಳಿ 4 ಕಿಲೋಮೀಟರ್ ಕಾಮಗಾರಿಯಲ್ಲಿ 2 ಕಿಲೋ ಮೀಟರ್ ಕಾಮಗಾರಿ ಮಾತ್ರ ಆಗಿದೆ ಇನ್ನುಳಿದ 2 ಕಿಲೋ ಮೀಟರ್ ಕಾಮಗಾರಿ ಪ್ರಾರಂಬವಾಗಿ 4 ವರ್ಷಗಳಿಂದ ಪೂರ್ಣಗೊಂಡಿಲ್ಲ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇದರ ಬಗ್ಗೆ ಕ್ರಮ ತೆಗೆದುಕೊಂಡಿಲ್ಲ ಎಂದು ಗಿಂಡೇರ ಅಂಜಿನಪ್ಪ, ವಿಜಯ್ ಗಂಟೇರ ಆಕ್ರೋಶ ಹೊರಹಾಕಿದ್ದಾರೆ.
ಕೊಕ್ಕನೂರು ಹೊನ್ನಾಳಿ ರಸ್ತೆಯಲ್ಲಿ ಮೂಗಿನಗೊಂದಿವರೆಗೆ ಅರೆಬರೆ ಕಾಮಗಾರಿ ಮತ್ತು ನಂದಿಗುಡಿ ರಸ್ತೆಯಿಂದ ಮಲೇಬೆನ್ನೂರು ರಸ್ತೆ ಇಲ್ಲೂ ಸಹ 800 ಮೀಟರ್ ಅರೆಬರೆ ಕಾಮಗಾರಿ ನಡೆದಿದೆ ಶಾಲಾ ಕಾಲೇಜುಗಳಿಗೆ ದೂಳು ಆವರಿಸುತ್ತಿದೆ ಎಂದು ಇತ್ತೀಚೆಗೆ ಶಾಲಾ ಕಾಲೇಜು ವಿದ್ಯಾರ್ಥಿಗಳು ಧರಣಿ ನಡೆಸಿದ್ದರು.
ಇಂತಹ ಕಾಮಗಾರಿ ನಡೆಸಿದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಸರ್ಕಾರದ ಮಹತ್ವಾಕಾಂಕ್ಷಿಯ ಯೋಜನೆಗಳು ಇಂತಹ ಗುತ್ತಿಗೆದಾರರಿಂದ ಬಲಿಯಾಗುತ್ತಿವೆ. ಜನಸಾಮಾನ್ಯರ ತೆರಿಗೆ ಹಣ ನೀರು ಪಾಲಾಗುತ್ತಿದೆ. ಸಂಬಂಧಪಟ್ಟವರು ಮುತುವರ್ಜಿವಹಿಸಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಎಂ ಎನ್ ವೆಂಕಟೇಶ್ ತಿಳಿಸಿದರು.
ಅಪೂರ್ಣ ರಸ್ತೆಗಳ ಡಾಂಬರೀಕರಣ ಶೀಘ್ರಇಂಗಳಗೊಂದಿ, ದೂಳೆಹೊಳೆ, ಹೊಳೆ ಸಿರಿಗೆರೆ ಮಾರ್ಗಗಳಲ್ಲಿ ಸಮರ್ಪಕವಾಗಿ ರಸ್ತೆ ಕಾಮಗಾರಿ ನಡೆದಿದೆ. ಹೊಳೆ ಸಿರಿಗೆರೆ ಕೆರೆ ಏರಿ ಮಾರ್ಗದಿಂದ ಹಳ್ಳಿಹಾಳ್ ರಸ್ತೆ ತುಂಬಾ ಹದಗೆಟ್ಟಿದೆ.
ರಸ್ತೆಯುದ್ದಕ್ಕೂ ಗುಂಡಿಗಳಿವೆ ಹೀಗಾಗಿ ಕಾಮಗಾರಿ ನಿಂತಿದೆ. ಒಟ್ಟು 18 ಲಕ್ಷಗಳ ಮೊತ್ತದ ಕಾಮಗಾರಿ ಇದಾಗಿದೆ. ಈ ಜಂಗಲ್ ಕ್ಲೀನಿಂಗ್ ಸಹ ಸೇರಿರುತ್ತದೆ.ಹಳ್ಳಿಹಾಳು ಮಾರ್ಗದ ರಸ್ತೆಯ ಸಂಪೂರ್ಣ ಕಾಮಗಾರಿಗೆ ಹೆಚ್ಚಿನ ಅನುದಾನಕ್ಕೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು. ಕಡರನಾಯ್ಕನಹಳ್ಳಿ ಕೊಕ್ಕನೂರು ರಸ್ತೆಯ ಅಪೂರ್ಣವಾಗಿರುವ ಡಾಂಬರೀಕರಣವನ್ನು ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ತಾಕೀತು ಮಾಡಲಾಗಿದೆ. ಸದ್ಯದಲ್ಲೇ ಅಪೂರ್ಣ ಕಾಮಗಾರಿ ಪೂರ್ಣಗೊಳಿಸುವ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹರಿಹರ ಲೋಕೋಪಯೋಗಿ ಇಲಾಖೆ ಎಇಇ ಕಂದಗಲ್ ನಾಗರಾಜ್ ಹೇಳಿದ್ದಾರೆ.