ಹರತಲೆ ಗ್ರಾಮದಲ್ಲಿ ಹುರುಳಿಯ ಹೊಸ ತಳಿ, ಬೀಜೋತ್ಪಾದನೆ ಕುರಿತು ತರಬೇತಿ

| Published : Aug 13 2024, 12:47 AM IST

ಸಾರಾಂಶ

ದ್ವಿದಳ ಧಾನ್ಯಗಳಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ.

ಕನ್ನಡಪ್ರಭ ವಾರ್ತೆ ಸುತ್ತೂರು

ಐಸಿಎಆರ್, ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ನಂಜನಗೂಡು ತಾಲೂಕಿನ ಹರತಲೆ ಗ್ರಾಮದಲ್ಲಿ ಸೋಮವಾರ ಹುರುಳಿಯ ಹೊಸ ತಳಿ ಸಿಆರ್.ಎಚ್.ಜಿ-19 ಬೀಜೋತ್ಪಾದನೆ ಕುರಿತು ತರಬೇತಿ ಆಯೋಜಿಸಿತ್ತು.

ಅಧ್ಯಕ್ಷತೆದ್ದ ಐಸಿಎಆರ್- ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ.ಬಿ.ಎನ್. ಜ್ಞಾನೇಶ್ ಮಾತನಾಡಿ, ದ್ವಿದಳ ಧಾನ್ಯಗಳಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ. ಹೊಸ ತಳಿಗಳಿಂದ ಇಳುವರಿ ಹೆಚ್ಚುತ್ತದೆ. ಬೀಜೋತ್ಪಾದನೆ ಮಾಡಲು ಕೆವಿಕೆಯಿಂದ ದ್ವಿದಳ ಬೀಜೋತ್ಪಾದನೆ ಯೋಜನೆಯಲ್ಲಿ ಅವಕಾಶವಿದ್ದು, ರೈತರು ಗುಣಮಟ್ಟದ ಬಿತ್ತನೆ ಬೆಳೆದು ಆರ್ಥಿಕವಾಗಿ ಸದೃಢರಾಗಬಹುದು ಎಂದು ತಿಳಿಸಿದರು.

ಕೆವಿಕೆಯ ಬೀಜ ತಂತ್ರಜ್ಞಾನ ವಿಭಾಗದ ವಿಷಯ ತಜ್ಞ ಎಚ್.ವಿ. ದಿವ್ಯಾ ಮಾತನಾಡಿ, ದ್ವಿದಳ ಧಾನ್ಯಗಳ ಬೀಜೋತ್ಪಾದನೆಯಲ್ಲಿ ಹೆಚ್ಚಿನ ಅವಕಾಶ ಹಾಗು ಲಾಭವಿದೆ. ಕೆವಿಕೆಯಿಂದ ಬಿತ್ತನೆ ಪಡೆದು ಉತ್ತಮವಾಗಿ ಬೆಳೆದ ಬಿತ್ತನೆಯನ್ನು ಮಾರುಕಟ್ಟೆ ಬೆಲೆಗಿಂತ ಶೇ 20ಷ್ಟು ಹೆಚ್ಚಿನ ಬೆಲೆಗೆ ಕೆವಿಕೆ ಖರೀದಿಸಲು ಸಿದ್ಧವಾಗಿದೆ. ಹುರುಳಿ ಹೊಸ ತಳಿ ಸಿಆರ್ಎಚ್ಜಿ-19 ಹೈದರಾಬಾದಿನ ಸಿಆರ್.ಐಡಿಎ ಯಿಂದ ಬಿಡುಗಡೆಯಾದ ತಳಿಯಾಗಿದ್ದು, ಹಳದಿ ರೋಗ, ಆಂಥ್ರಾಕ್ನೋಸ್, ಅಂಗಮಾರಿ ರೋಗ, ಬೂದು ಮಾರಿ ಹಾಗೂ ಬಿಳಿ ನೊಣಕ್ಕೆ ಸಹಿಷ್ಣುತೆ ಹೊಂದಿದೆ. ಉತ್ತಮ ನಿರ್ವಹಣೆಯಲ್ಲಿ ಹೆಕ್ಟೇರಿಗೆ 7.5 ರಷ್ಟು ಕಾಳಿನ ಇಳುವರಿ ಬರುತ್ತದೆ. ಜೈವಿಕ ಗೊಬ್ಬರವಾದ ರೈಜೋಬಿಯಂನಿಂದ ಬೀಜೋಪಚಾರದ ಪ್ರಾತ್ಯಕ್ಷಿಕೆ ನೀಡಿ, ಜೈವಿಕ ಗೊಬ್ಬರ ಸಾರಜನಕವನ್ನು ಸ್ಥಿರೀಕರಿಸಲು ಅನುಕೂಲಮಾಡಿಕೊಡುವುದಾಗಿ ತಿಳಿಸಿದರು. ಉತ್ತಮ ಬೇಸಾಯ ಪದ್ಧತಿಯಲ್ಲಿ ಸಾಲು ಬಿತ್ತನೆ, ಕಳೆ ನಿರ್ವಹಣೆ, ಗೊಬ್ಬರ ನಿರ್ವಹಣೆ ಹಾಗು ಬೆರಕೆ ತೆಗೆದು ಉತ್ತಮವಾಗಿ ಬೀಜೋತ್ಪಾದನೆ ಮಾಡುವ ತಂತ್ರಜ್ಞಾನಗಳನ್ನು ತಿಳಿಸಿಕೊಟ್ಟರು.

ಹರತಲೆ ಗ್ರಾಪಂ ಅಧ್ಯಕ್ಷ ಗೋವಿಂದ ಮಾತನಾಡಿ, ಕೆವಿಕೆಯವರು ಸತತ ಮೂರು ವರ್ಷದಿಂದ ಹಲವಾರು ತಂತ್ರಜ್ಞಾನಗಳನ್ನು, ತರಬೇತಿಗಳನ್ನು ನಮ್ಮ ಊರಿನ ರೈತರಿಗೆ ನೀಡಿ ಅನುಕೂಲ ಮಾಡಿಕೊಟ್ಟಿದೆ ಎಂದು ತಿಳಿಸಿದರು.

ಯುವರಾಜ ಕಾಲೇಜಿನ ಡಾ. ದೇವಕಿ, ಪ್ರಗತಿಪರ ರೈತರಾದ ರಾಜು, ಲೋಕೇಶ್ ಸೇರಿ 35ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.

ಕೆವಿಕೆಯ ಗೃಹ ವಿಜ್ಞಾನದ ವಿಷಯ ತಜ್ಞ ಡಾ. ದೀಪಕ್, ತಾಂತ್ರಿಕ ಸಹಾಯಕ ಮಹೇಂದ್ರ ಇದ್ದರು. ರಾಜು ಸ್ವಾಗತಿಸಿದರು.