ಮಹಿಳೆಯರೂ ಸೇರಿ ರಾಜ್ಯದ ಮೂರು ಕೋಟಿಗೂ ಅಧಿಕ ಸಾರಿಗೆ ಪ್ರಯಾಣಿಕರಿಗೆ ಸ್ಮಾರ್ಟ್‌ ವಿತರಿಸಲಾಗುವುದು ಎಂದು ಸಾರಿಗೆ ಸಚಿವ ಬೈರತಿ ಸುರೇಶ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮಹಿಳೆಯರೂ ಸೇರಿ ರಾಜ್ಯದ ಮೂರು ಕೋಟಿಗೂ ಅಧಿಕ ಸಾರಿಗೆ ಪ್ರಯಾಣಿಕರಿಗೆ ಸ್ಮಾರ್ಟ್‌ ವಿತರಿಸಲಾಗುವುದು ಎಂದು ಸಾರಿಗೆ ಸಚಿವ ಬೈರತಿ ಸುರೇಶ್‌ ತಿಳಿಸಿದರು.

ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿಯಲ್ಲಿ ಸೋಮವಾರ ನಾಲ್ಕೂ ನಿಗಮಗಳ ಹಿರಿಯ ಅಧಿಕಾರಿಗಳೊಂದಿಗೆ ಸಾರಿಗೆ ಸಚಿವರಾದ ನಂತರ ಮೊದಲ ಬಾರಿ ಸಭೆ ನಡೆಸಿ ಮಾತನಾಡಿದ ಬೈರತಿ ಸುರೇಶ್‌ ಅವರು ಶಕ್ತಿ ಯೋಜನೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತದೆ. ಅದಕ್ಕಾಗಿ ರಾಜ್ಯ ಎಲ್ಲ ಮಹಿಳೆಯರಿಗೆ ಉಚಿತ ಪ್ರಯಾಣಕ್ಕಾಗಿ ಸ್ಮಾರ್ಟ್‌ ಕಾರ್ಡ್‌ ವಿತರಿಸಲಾಗುವುದು ಎಂದರು.

ಅಲ್ಲದೆ, ಶಕ್ತಿ ಸ್ಮಾರ್ಟ್‌ ಕಾರ್ಡ್‌ ಮಾದರಿಯಲ್ಲಿ ಪುರುಷರಿಗೂ ರೀಚಾರ್ಜ್‌ ಮಾಡಬಹುದಾದಂಥ ಸ್ಮಾರ್ಟ್‌ ನೀಡಲು ಉದ್ದೇಶಿಸಲಾಗಿದೆ. ಒಟ್ಟಾರೆ ರಾಜ್ಯದ 3 ಕೋಟಿ ಜನರಿಗೆ ಸ್ಮಾರ್ಟ್‌ ಕಾರ್ಡ್‌ಗಳನ್ನು ವಿತರಿಸಲು ನಿರ್ಧರಿಸಲಾಗಿದೆ. ಶಕ್ತಿ ಸ್ಮಾರ್ಟ್‌ಕಾರ್ಡ್‌ ಉಚಿತ ಪ್ರಯಾಣಕ್ಕೆ ಬಳಸಬಹುದಾಗಿದ್ದು, ಪುರುಷರಿಗೆ ನೀಡುವ ಸ್ಮಾರ್ಟ್‌ಕಾರ್ಡ್‌ಗಳಿಗೆ ಹಣ ತುಂಬಿ ಅದರ ಮೂಲಕ ಟಿಕೆಟ್ ದರ ಪಾವತಿಸುವಂತೆ ವ್ಯವಸ್ಥೆ ಮಾಡಲಾಗುವುದು ಎಂದರು.

1 ಸಾವಿರ ಬಸ್‌ ಖರೀದಿ:

ಉತ್ತಮ ಬಸ್‌ ಸೇವೆ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರದ ಅನುದಾನದಲ್ಲಿ ಒಂದು ಸಾವಿರ ಹೊಸ ಬಸ್‌ಗಳನ್ನು ಖರೀದಿಸಲಾಗುತ್ತದೆ. ಜತೆಗೆ ಕೇಂದ್ರ ಸರ್ಕಾರದ ಅನುದಾನದಲ್ಲಿ 4 ಸಾವಿರ ಎಲೆಕ್ಟ್ರಿಕ್‌ ಬಸ್‌ಗಳನ್ನು ನಿಯೋಜಿಸಲಾಗುವುದು. ಈ ಬಸ್‌ಗಳನ್ನು ಹಂತಹಂತವಾಗಿ ನಾಲ್ಕೂ ನಿಗಮಗಳಿಗೆ ಹಂಚಿಕೆ ಮಾಡಲಾಗುತ್ತದೆ ಎಂದು ವಿವರಿಸಿದರು.

ಮಹಿಳೆಯರು ಮತ್ತು ಹೆಣ್ಣುಮಕ್ಕಳ ಸುರಕ್ಷತೆಗಾಗಿ ವಾಣಿಜ್ಯ ಕಾರು, ಟ್ಯಾಕ್ಸಿ ಸೇರಿ ಇನ್ನಿತರ ಸಾರ್ವಜನಿಕ ಸೇವೆ ನೀಡುವ ವಾಹನಗಳಿಗೆ ವೆಹಿಕಲ್‌ ಲೊಕೇಷನ್‌ ಟ್ರ್ಯಾಕಿಂಗ್‌ ವ್ಯವಸ್ಥೆ (ವಿಎಲ್‌ಟಿಎಸ್‌) ಅಳವಡಿಕೆಗೆ ವೇಗ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಈವರೆಗೆ 1 ಲಕ್ಷ ವಾಹನಗಳು ಮಾತ್ರ ವಿಎಲ್‌ಟಿಎಸ್‌ ಅಳವಡಿಸಿಕೊಂಡಿದ್ದು, ಇನ್ನೂ 5 ಲಕ್ಷಕ್ಕೂ ಹೆಚ್ಚಿನ ವಾಹನಗಳು ವಿಎಲ್‌ಟಿಎಸ್‌ ಅಳವಡಿಸಿಕೊಳ್ಳಬೇಕಿದೆ. ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ವಿಎಲ್‌ಟಿಎಸ್‌ ಅಳವಡಿಕೆ ಪೂರ್ಣಗೊಳಿಸುವಂತೆ ನಿರ್ದೇಶಿಸಲಾಗಿದೆ ಎಂದರು.

ಸಾರಿಗೆ ಇಲಾಖೆ ಕಾರ್ಯದರ್ಶಿ ದೀಪಾ ಚೋಳನ್‌, ಆಯುಕ್ತ ಸೆಲ್ವಮಣಿ, ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷಾ ಇತರರಿದ್ದರು.