ಹೆಣ್ಣುಮಕ್ಕಳನ್ನು ಪೂಜ್ಯ ಭಾವನೆಯಿಂದ ಕಾಣಿ

| Published : Jan 12 2024, 01:45 AM IST

ಸಾರಾಂಶ

ಗಂಡು- ಹೆಣ್ಣು ಎಂಬ ತಾರತಮ್ಯ ಮಾಡಬಾರದು. ವಿದ್ಯೆ ಕಲಿತ ಹೆಣ್ಣುಮಕ್ಕಳು ದೇಶದಲ್ಲಿ ಹಲವು ಉನ್ನತ ಹುದ್ದೆಗಳನ್ನು ಅಲಂಕರಿಸಿ, ಅವುಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.

ಸಂಡೂರು: ಹೆಣ್ಣಾಗಿ ಹುಟ್ಟಿದ್ದಕ್ಕೆ ಹೆಮ್ಮೆ ಇದೆ. ಹೆಣ್ಣುಮಕ್ಕಳನ್ನು ಪೂಜ್ಯಭಾವನೆಯಿಂದ ಕಾಣಿ. ನನ್ನನ್ನು ಕಾರ್ಯಕ್ರಮದ ಅಧ್ಯಕ್ಷ ಸ್ಥಾನದಲ್ಲಿ ಕೂಡಿಸಿದ್ದು ನನಗೆ ಹೆಮ್ಮೆ ಎನಿಸುತ್ತದೆ ಎಂದು 8ನೇ ತರಗತಿ ವಿದ್ಯಾರ್ಥಿನಿ ಟಿ.ಎಂ. ಹರ್ಷಿತಾ ಅಭಿಪ್ರಾಯಪಟ್ಟರು.

ತಾಲೂಕಿನ ತೋರಣಗಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೆಎಸ್‌ಡಬ್ಲ್ಯು ಫೌಂಡೇಶನ್‌ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಕುರಿತ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ, ಹೆಣ್ಣು- ಗಂಡಿನ ಲಿಂಗಾನುಪಾತ ಆಘಾತಕಾರಿಯಾಗಿದೆ. ಈಗಿನ ಲಿಂಗಾನುಪಾತ 1000 ಪುರುಷರಿಗೆ 932 ಇದೆ. ಈ ಅಸಮತೋಲನವನ್ನು ಸರಿಪಡಿಸಲು ಪಿಸಿಪಿಎನ್‌ಡಿಟಿ ಕಾಯ್ದೆ ಅನುಷ್ಠಾನ ಸರಿಯಾಗಿ ಜಾರಿಯಾಗಬೇಕು. ಈ ದಿಸೆಯಲ್ಲಿ ಸರ್ಕಾರವು ಹಲವು ರೀತಿಯ ಕ್ರಮಗಳನ್ನು ಕೈಗೊಂಡಿದೆ ಎಂದರು.

ಶಿಕ್ಷಕಿ ವಿಶಾಲಾಕ್ಷಿ ಮಾತನಾಡಿ, ಗಂಡು- ಹೆಣ್ಣು ಎಂಬ ತಾರತಮ್ಯ ಮಾಡಬಾರದು. ವಿದ್ಯೆ ಕಲಿತ ಹೆಣ್ಣುಮಕ್ಕಳು ದೇಶದಲ್ಲಿ ಹಲವು ಉನ್ನತ ಹುದ್ದೆಗಳನ್ನು ಅಲಂಕರಿಸಿ, ಅವುಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಹೆಣ್ಣುಮಕ್ಕಳ ಸಂಖ್ಯೆ ಕಡಿಮೆಯಾದರೆ, ಸಮಾಜದಲ್ಲಿ ಹಲವು ರೀತಿಯ ಸಮಸ್ಯೆಗಳು ಉದ್ಭವಿಸಲಿವೆ. ಬೇಟಿ ಬಚಾವೋ, ಬೇಟಿ ಪಡಾವೋ ಎಂಬುದು ಎಲ್ಲರ ನಾಡಿಮಿಡಿತವಾಗಬೇಕಿದೆ ಎಂದರು. ಕಾರ್ಯಕ್ರಮವನ್ನು ಮ್ಯಾಜಿಕ್ ಬಸ್‌ನ ಎಎಲ್‌ಇ ದುರ್ಗಾ ಮತ್ತು ಎಲ್‌ಎಸ್‌ಇ ಶಾಲಿನಿ ಅವರು ನಿರ್ವಹಿಸಿದರು. ಶಿಕ್ಷಕರಾದ ವಿಶ್ವನಾಥ, ಸುಜಾತ, ಅನಿತಾ, ಭಾಗ್ಯಲಕ್ಷ್ಮಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.