ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ: 23 ವರ್ಷಗಳ ನಂತರ ನಿವೇಶನ ಹಂಚಿಕೆ!

| Published : Jan 12 2024, 01:45 AM IST

ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ: 23 ವರ್ಷಗಳ ನಂತರ ನಿವೇಶನ ಹಂಚಿಕೆ!
Share this Article
  • FB
  • TW
  • Linkdin
  • Email

ಸಾರಾಂಶ

ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಿಂದ ಬರೋಬ್ಬರಿ 23 ವರ್ಷಗಳ ಬಳಿಕ ನಿವೇಶನ ಹಂಚಿಕೆ ಮಾಡಲಾಗಿದೆ. ನಗರಾಭಿವೃದ್ಧಿ ಪ್ರಾಧಿಕಾರಿದಿಂದ ಇದೇ ಮೊದಲ ಬಾರಿಗೆ ನಿವೇಶನ ಹಂಚಿಕೆಯಾಗಿದ್ದು, ಫಲಾನುಭವಿಗಳಿಗೆ ಸಂತಸ ತಂದಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ: ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಮೊಟ್ಟ ಮೊಲದ ಲೇ ಔಟ್ ಸರೋಜಮ್ಮ ಬಡಾವಣೆ ನಿವೇಶನಗಳನ್ನು 23 ವರ್ಷಗಳ ಬಳಿಕ ಹಂಚಿಕೆ ಮಾಡಲಾಗಿದೆ. ಕೊನೆಗೂ ನಿವೇಶನ ಫಲಾನುಭವಿಗಳು ನಿಟ್ಟುಸಿರುಬಿಟ್ಟಿದ್ದಾರೆ.

ಹೌದು, ಕೊಪ್ಪಳ ನಗರದಲ್ಲಿ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ 2000ರಲ್ಲಿ ಮೊಟ್ಟಮೊದಲ ಲೇಔಟ್ ಮಾಡಿತ್ತು. ಇದಾದ ಮೇಲೆ ಇದುವರೆಗೂ ಯಾವುದೇ ಲೇಔಟ್ ಮಾಡಿಲ್ಲ.

ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಆಸಿಫ್ ಅಲಿ ಅವರು ಸುಮಾರು 28 ಎಕರೆ ಭೂಮಿ ಖರೀದಿ ಮಾಡಿ, ಲೇಔಟ್ ಮಾಡುವ ಪ್ರಕ್ರಿಯೆ ಪ್ರಾರಂಭಿಸಿದ್ದರು. ಆದರೆ, ಅದಾದ ಆನಂತರ ರೈತರ ಭೂಸ್ವಾಧೀನ ಸೇರಿದಂತೆ ನಾನಾ ಸಮಸ್ಯೆಗಳು ಮತ್ತು ಭೂಮಿಯ ಬೆಲೆ ಏರಿಕೆಯಾಗಿದ್ದರಿಂದ ರೈತರು ಭೂಮಿ ನೀಡಲು ನಿರಾಕರಿಸಿ, ಕೋರ್ಟ್‌ ಮೆಟ್ಟಿಲು ಏರಿದರು. ಪರಿಣಾಮ ಲೇಔಟ್ ನಿರ್ಮಾಣ ನನೆಗುದಿಗೆ ಬಿದ್ದಿತು.

ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕಳಕಪ್ಪ ಜಾಧವ್ ಅವರು ಇದ್ದಾಗ ರೈತರ ಭೂಮಿಯ ಪರಿಹಾರದ ಸಮಸ್ಯೆ ಇತ್ಯರ್ಥವಾಯಿತು. ಇದಾದ ಮೇಲೆ ಪುನಃ ಲೇಔಟ್ ನಿರ್ಮಾಣ ಪ್ರಕ್ರಿಯೆಗೆ ಮತ್ತೆ ಚಾಲನೆ ದೊರೆಯಿತು. ಇದಾದ ಮೇಲೆ ಲೇ ಔಟ್ ನಿರ್ಮಾಣವಾಗಿದ್ದರೂ ನಿವೇಶನ ಹಂಚಿಕೆಯಾಗಿರಲಿಲ್ಲ. ಈ ವೇಳೆಯಲ್ಲಿ ಇದರಲ್ಲಿ ಸುಮಾರು 19 ಎಕರೆ ಭೂಮಿಯನ್ನು ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಬಿಟ್ಟುಕೊಡಲಾಯಿತು. ಹೀಗಾಗಿ ಉಳಿದ 9 ಎಕರೆಯನ್ನು ಸಹ ಮೆಡಿಕಲ್ ಕಾಲೇಜಿಗೆ ನೀಡಬೇಕು ಎನ್ನುವ ಕುರಿತು ಚರ್ಚೆ ನಡೆಯುತ್ತಲೇ ಇತ್ತು. ಆದರೆ, ಈ ನಡುವೆ ನಿವೇಶನಕ್ಕಾಗಿ ಸದಸ್ಯತ್ವ ಪಡೆದು, ಆರಂಭಿಕ ಶುಲ್ಕ ಪಾವತಿಸಿ ಕಾಯುತ್ತಲೇ ಇದ್ದವರು ನಮಗೆ ನಿವೇಶನ ನೀಡಲೇಬೇಕು ಎಂದು ಪಟ್ಟು ಹಿಡಿದರು. ಹಲವು ವರ್ಷ ಈ ವಿವಾದ ಮುಂದುವರಿಯಿತು.

ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಮಹಾಂತೇಶ ಪಾಟೀಲ್ ಅವರು ಎರಡು ವರ್ಷಗಳ ಹಿಂದೆ ದಿಟ್ಟ ನಿರ್ಧಾರ ತೆಗೆದುಕೊಂಡರು. ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸಿರುವವರಿಗೆ ನಿವೇಶನ ಹಂಚಿಕೆ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ತಪ್ಪಾಗುತ್ತದೆ. ಹೀಗಾಗಿ, ಮೆಡಿಕಲ್ ಕಾಲೇಜಿಗೆ ನೀಡಿ, ಉಳಿದಿರುವ 9 ಎಕರೆಯಲ್ಲಿ ಅರ್ಹ ಫಲಾನುಭವಿಗಳಿಗೆ ಮತ್ತು ಅರ್ಜಿ ಸಲ್ಲಿಸಿದವರಿಗೆ ನಿವೇಶನ ನೀಡುವ ಕುರಿತು ಗೊತ್ತುವಳಿ ಸ್ವೀಕರಿಸಲಾಯಿತು.

ಇನ್ನೇನು ಪ್ರಕ್ರಿಯೆ ಮುಗಿದು ಹಂಚಿಕೆ ಮಾಡಬೇಕು ಎನ್ನುವಾಗ ಸರ್ಕಾರ ಬದಲಾಗಿ, ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಪಾಟೀಲ್ ಅವರ ಅವಧಿ ಮುಗಿಯಿತು. ಹೀಗಾಗಿ, ಮತ್ತೆ ನನೆಗುದಿಗೆ ಬಿದ್ದಿತು.

ನಿವೇಶನ ಹಂಚಿಕೆ: ಜಿಲ್ಲಾಧಿಕಾರಿ ನಲಿನ್ ಅತುಲ್ ಅವರೇ ಆಡಳಿತಾಧಿಕಾರಿಯಾಗಿದ್ದಾರೆ. ಅವರ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಕೊನೆಗೂ 23 ವರ್ಷಗಳ ನಂತರ ನಿವೇಶನ ಹಂಚಿಕೆ ಮಾಡಲಾಗಿದೆ. ಫಲಾನುಭವಿಗಳು ಈಗ ನಿಟ್ಟುಸಿರು ಬಿಟ್ಟಿದ್ದಾರೆ, ಸಂತೋಷಗೊಂಡಿದ್ದಾರೆ. ಈ ಸಭೆಯಲ್ಲಿ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಕಮಿಷನರ್ ಆರ್. ಯೋಗಾನಂದ ಇದ್ದರು.

ಭರ್ಜರಿ ಲಾಭ: ನಿವೇಶವನ್ನು 2019ರಲ್ಲಿ ಆಗಿನ ಜಿಲ್ಲಾಧಿಕಾರಿ ಸುನೀಲ್ ಕುಮಾರ ಅವರು ಚದರ ಅಡಿಗೆ ₹700ರಂತೆ ದರ ನಿಗದಿ ಮಾಡಿದ್ದಾರೆ. ಈಗ ಅದೇ ದರದ ಆಧಾರ ಮೇಲೆ ಹಂಚಿಕೆ ಮಾಡಿದ್ದಾರೆ. ಸದ್ಯ ಮೆಡಿಕಲ್ ಕಾಲೇಜು ಸುತ್ತಮುತ್ತಲ ಪ್ರದೇಶದಲ್ಲಿ ಚದರ ಅಡಿಗೆ ₹1500-₹2500 ದರ ಇದೆ. ಹೀಗಾಗಿ, ನಿವೇಶನ ಪಡೆದವರಿಗೆ ಭರ್ಜರಿ ಲಾಭವಂತೂ ಆಗಿದೆ.

ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಮೊದಲ ಲೇಔಟ್ ನಿವೇಶನಗಳ ಹಂಚಿಕೆ ಸುಮಾರು ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ಅದನ್ನು ಕಳೆದ ವರ್ಷವೇ ಗೊತ್ತುವಳಿ ಮಾಡಿ, ಹಂಚಿಕೆ ಮಾಡಲು ನಿರ್ಧಾರ ಮಾಡಲಾಗಿತ್ತು. ನಮ್ಮ ಅವಧಿ ಮುಗಿದಿದ್ದರಿಂದ ಹಂಚಿಕೆ ಬಾಕಿ ಇತ್ತು. ಈಗಲಾದರೂ ಆಯಿತಲ್ಲಾ ಎನ್ನುವುದೇ ಸಮಾಧಾನದ ಸಂಗತಿ ಎಂದು ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಹಾಂತೇಶ ಪಾಟೀಲ್ ಹೇಳಿದರು.