ಸಾರಾಂಶ
ಪುಸ್ತಕ ಓದುವ ಹವ್ಯಾಸ ಸಂಸ್ಕೃತಿ ಬೆಳೆಸಿಕೊಳ್ಳಬೇಕು ಎಂದು ಮಲ್ಲಪ್ಪ ಹೂಗಾರ ಸಲಹೆ ನೀಡಿದರು.
ಕನ್ನಡಪ್ರಭ ವಾರ್ತೆ ಕಲಾದಗಿ
ವಿದ್ಯಾರ್ಥಿಗಳು ಸತತ ಪರಿಶ್ರಮ ಮತ್ತು ಉತ್ತಮ ಶೈಕ್ಷಣಿಕ ಸಾಧನೆ ಮೂಲಕ ಉನ್ನತ ಗುರಿ ತಲುಪಬೇಕು. ಜತೆಗೆ ತಂದೆ, ತಾಯಿ, ಗುರುಗಳ ಹಾಗೂ ಗ್ರಾಮದ ಕೀರ್ತಿಯನ್ನು ಹೆಚ್ಚಿಸಬೇಕು ಎಂದು ಕೆರೂರ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಚಾರ್ಯ ಮಲ್ಲಪ್ಪ ಹೂಗಾರ ಹೇಳಿದರು.ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ, ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳ ಸ್ವಾಗತ ಹಾಗೂ ಸಾಂಸ್ಕೃತಿಕ, ಕ್ರೀಡಾ ಮತ್ತು ವಿವಿಧ ಘಟಕಗಳ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಕೆಟ್ಟ ಸಹವಾಸಗಳನ್ನು ತೊರೆದು ಪುಸ್ತಕ ಓದುವ ಹವ್ಯಾಸ ಸಂಸ್ಕೃತಿ ಬೆಳೆಸಿಕೊಳ್ಳಬೇಕು. ಕಾಲೇಜು ಅವಧಿಯಲ್ಲಿ ಉಪನ್ಯಾಸಕರು ಹೇಳುವ ಪಠ್ಯಗಳನ್ನು ಅರ್ಥ ಮಾಡಿಕೊಂಡು ಹೆಚ್ಚಿನ ಅಂಕಗಳನ್ನು ಪಡೆಯುವ ಮೂಲಕ ಸಾಧನೆಯತ್ತ ಹೆಜ್ಜೆ ಹಾಕಬೇಕು ಎಂದರು.
ಪ್ರಾಚಾರ್ಯ ಡಾ.ಎಚ್.ಬಿ.ಮಹಾಂತೇಶ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯ ಗುರಿ ಕಲಿಕೆಯಾಗಿರಬೇಕು. ಕಲಿಕಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಂಡು ಉತ್ತಮ ಅಂಕಗಳನ್ನು ಪಡೆದುಕೊಳ್ಳಬೇಕು. ಕಾಲೇಜಿನ ದಿನಗಳಲ್ಲಿ ಸಮಯವನ್ನು ಸದುಪಯೋಗಪಡಿಸಿಕೊಂಡು ಸತತ ಅಧ್ಯಯನಶೀಲರಾಗಬೇಕು ಎಂದರು. ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳನ್ನು ಗುಲಾಬಿ ಹಾಗೂ ಪೆನ್ನುಗಳನ್ನು ನೀಡುವುದರ ಮೂಲಕ ಸ್ವಾಗತಿಸಲಾಯಿತು.ಕಲಾದಗಿ ಗ್ರಾಪಂ ಅಧ್ಯಕ್ಷೆ ಕೌತುನಬಿ ಹಸನಅಹ್ಮದ ರೋಣ, ಹಸನಅಹ್ಮದ ರೋಣ, ಸರ್ಕಾರಿ ಗಂಡು ಮಕ್ಕಳ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಗುರು ಸಿ.ಎಲ್.ಹೂಗಾರ, ಕಾಲೇಜಿನ ಸಾಂಸ್ಕೃತಿಕ ವಿಭಾಗದ ಸಂಚಾಲಕಿ ಸರೋಜಿನಿ ಹೊಸಕೇರಿ, ದೈಹಿಕ ಶಿಕ್ಷಣ ನಿರ್ದೆಶಕ ದುಂಡಪ್ಪ ದೊಡಮನಿ ಇನ್ನಿತರರು ಇದ್ದರು.