ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮೈಸೂರು ಹಾಗೂ ಶ್ರೀರಂಗಪಟ್ಟಣ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜಸಾಗರದ ಬೃಂದಾವನದಲ್ಲಿ ಕಾವೇರಿ ಆರತಿಗೆ ಶುಕ್ರವಾರ ರಾತ್ರಿ ಪ್ರಾಯೋಗಿಕವಾಗಿ ಚಾಲನೆ ದೊರೆತಿದೆ.೧೦೦ ಕೋಟಿ ರು. ವೆಚ್ಚದಲ್ಲಿ ಕೆಆರ್‌ಎಸ್ ಬೃಂದಾವನದಲ್ಲಿ ರಾಜ್ಯ ಸರ್ಕಾರ ಕಾವೇರಿ ಆರತಿ ಮಾಡಲು ಯೋಜನೆ ರೂಪಿಸಿತ್ತು. ಆದರೆ, ಇದರಿಂದ ಕೆಆರ್‌ಎಸ್ ಅಣೆಕಟ್ಟೆ ಹಾಗೂ ಸುತ್ತಮುತ್ತಲಿನ ಪರಿಸರಕ್ಕೆ ಧಕ್ಕೆ ಆಗಲಿರುವ ಕಾರಣ ಅನುಮತಿ ನೀಡಬಾರದು ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಹಾಗೂ ರೈತ ಸಂಘದ ಮುಖಂಡರು ಎಂದು ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದ್ದರು. ಉಚ್ಛ ನ್ಯಾಯಾಲಯ ಯೋಜನೆ ಜಾರಿಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿತ್ತು.
ಇದರ ನಡುವೆಯೂ ಮೈಸೂರು ಹಾಗೂ ಶ್ರೀರಂಗಪಟ್ಟಣ ದಸರಾ ಮಹೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುವುದರಿಂದ ಅವರನ್ನು ಆಕರ್ಷಿಸಲು ಜಿಲ್ಲಾಡಳಿತ ಮತ್ತು ಕಾವೇರಿ ನೀರಾವರಿ ನಿಗಮ ಕಾವೇರಿ ಆರತಿ ಪೂರ್ವ ಸಿದ್ಧತೆ ಕಾಮಗಾರಿಗಳನ್ನು ಸದ್ದಿಲ್ಲದೆ ಚುರುಕುಗೊಳಿಸಿತ್ತು. ಅಂತಿಮ ಹಂತದ ಸಿದ್ಧತಾ ಕಾಮಗಾರಿಗಳನ್ನು ಪೂರ್ಣಗೊಳಿಸಿದೆ.ಕಾವೇರಿ ಆರತಿ ಸಮಿತಿ ಅಧ್ಯಕ್ಷ ಬೆಂಗಳೂರು ಜಲಮಂಡಳಿ ಮುಖ್ಯಸ್ಥ ರಾಮಪ್ರಸಾತ್ ಮನೋಹರ ನೇತೃತ್ವದಲ್ಲಿ ಗುರುತಿಸಿದ್ದ ಬೃಂದಾವನದ ದೋಣಿ ವಿಹಾರ ಕೇಂದ್ರದ ಬಳಿಯ ಚಿಕ್ಕ ಕಾವೇರಿ ಪ್ರತಿಮೆ ಬಳಿ ಶುಕ್ರವಾರ ಸಂಜೆ ಉತ್ತರ ಮತ್ತು ಪೂರ್ವಾಭಿಮುಖವಾಗಿ ಮುಜರಾಯಿ ಇಲಾಖೆಯ ನೇತೃತ್ವದಲ್ಲಿ ಮೈಸೂರು, ಬೆಂಗಳೂರು, ಶ್ರೀರಂಗಪಟ್ಟಣ, ಮೇಲುಕೋಟೆ ಮೂಲದ ೬ ರಿಂದ ೧೩ ಅರ್ಚಕರ ತಂಡ ವೇದಘೋಷಗಳ ಸಮೇತ ಸುಮಾರು ೧೫ ರಿಂದ ೩೦ ನಿಮಿಷ ಕಾವೇರಿ ಆರತಿ ಮಾಡಿದರು.
ಹಲವು ಅಡೆತಡೆ ನಡುವೆ ದಸರಾ ಸಂದರ್ಭದಲ್ಲಿ ಕಾವೇರಿ ಆರತಿಗೆ ಚಾಲನೆಗೆ ನೀಡಲು ನಿರ್ಧರಿಸಿ, ಪ್ರಾಯೋಗಿಕವಾಗಿ ಪ್ರಾರಂಭಿಸಲಾಗಿದ್ದು, ಈ ಸಂದರ್ಭದಲ್ಲಿ ಕಾವೇರಿ ನೀರಾವರಿ ನಿಗಮದ ಆಧಿಕಾರಿಗಳು ಹಾಜರಿದ್ದರು.ಕೆಆರ್ ಎಸ್ ನೀರಿನ ಮಟ್ಟ
ಗರಿಷ್ಠ ಮಟ್ಟ - 124.80 ಅಡಿಇಂದಿನ ಮಟ್ಟ – 123.55 ಅಡಿ
ಒಳ ಹರಿವು – 6,819 ಕ್ಯುಸೆಕ್ಹೊರ ಹರಿವು – 6,455 ಕ್ಯುಸೆಕ್
ಒಟ್ಟು ಸಂಗ್ರಹ - 47.721 ಟಿಎಂಸಿ