ಚಿಕ್ಕಮಗಳೂರುಕಾಂಗ್ರೆಸ್ ಮುಖಂಡ ಡಿ.ಎಸ್. ಚಂದ್ರೇಗೌಡ ಅವರ ಅಕಾಲಿಕ ಮರಣದಿಂದ ಪಕ್ಷ ಹಾಗೂ ಸಮಾಜಕ್ಕೆ ನಷ್ಟ ಉಂಟಾಗಿದೆ. ಅವರು ಅಪಾರ ಜನರನ್ನ ಸಂಪಾದನೆ ಮಾಡಿದ್ದರು ಎಂದು ವಿಧಾನ ಪರಿಷತ್ ಮಾಜಿ ಉಪ ಸಭಾಪತಿ ಬಿ.ಎಲ್.ಶಂಕರ್ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಕಾಂಗ್ರೆಸ್ ಮುಖಂಡ ಡಿ.ಎಸ್. ಚಂದ್ರೇಗೌಡ ಅವರ ಅಕಾಲಿಕ ಮರಣದಿಂದ ಪಕ್ಷ ಹಾಗೂ ಸಮಾಜಕ್ಕೆ ನಷ್ಟ ಉಂಟಾಗಿದೆ. ಅವರು ಅಪಾರ ಜನರನ್ನ ಸಂಪಾದನೆ ಮಾಡಿದ್ದರು ಎಂದು ವಿಧಾನ ಪರಿಷತ್ ಮಾಜಿ ಉಪ ಸಭಾಪತಿ ಬಿ.ಎಲ್.ಶಂಕರ್ ಹೇಳಿದರು.ಇತ್ತೀಚೆಗೆ ಅಪಘಾತದಲ್ಲಿ ನಿಧನರಾದ ಡಿ.ಎಸ್. ಚಂದ್ರೇಗೌಡ ಸೇರಿದಂತೆ ಅವರ ಪತ್ನಿ ಸರೋಜ ಹಾಗೂ ಸಂಬಂಧಿ ಜಯಲಕ್ಷ್ಮಿ ಅವರಿಗೆ ನಗರದ ಕನಕ ಸಮುದಾಯ ಭವನದಲ್ಲಿ ಜಿಲ್ಲಾ ಕುರುಬರ ಸಂಘ, ತಾಲೂಕು ಕುರುಬರ ಸಂಘ, ನಾಗರಿಕ ವೇದಿಕೆ, ಜಿಲ್ಲಾ ಸಂಗೋಳಿ ರಾಯಣ್ಣ ವೇದಿಕೆ, ಕನಕಶ್ರೀ ಹಾಗೂ ವಿವಿಧ ಕನ್ನಡಪರ ಸಂಘಟನೆಗಳಿಂದ ಹಮ್ಮಿಕೊಳ್ಳಲಾಗಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.ಚಂದ್ರೇಗೌಡರು ರಾಜಕಾರಣಿಯಾಗಿ ಅಜಾತ ಶತ್ರುವಿನ ಜೀವನ ರೂಪಿಸಿಕೊಂಡಿದ್ದರು. ಆದರೆ, ಅನಿರೀಕ್ಷಿತ ಘಟನೆಯಲ್ಲಿ ಅವರು ಪತ್ನಿ ಹಾಗೂ ಸಂಬಂಧಿ ಸಮೇತ ನಮ್ಮನ್ನಗಲಿದ್ದಾರೆ. ಅವರಿಗೆ ದೇವರು ಚಿರಶಾಂತಿ ಕರುಣಿಸಲಿ, ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಕೋರಿದರು.ಶಾಸಕ ಎಚ್.ಡಿ. ತಮ್ಮಯ್ಯ ಮಾತನಾಡಿ, ಚಂದ್ರೇಗೌಡರ ಅಗಲಿಕೆಯಿಂದ ಅವರ ಕುಟುಂಬಕ್ಕಷ್ಟೇ ಅಲ್ಲದೆ ಇಡೀ ಕುರುಬ ಸಮಾಜ, ಜಿಲ್ಲೆಯ ಜನರಿಗೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ನಷ್ಟ ಉಂಟಾಗಿದೆ. ಚಂದ್ರೇಗೌಡವರ ಮಾತು ನಿಷ್ಠುರವಾಗಿರು ತ್ತಿತ್ತು. ಆದರೆ, ಅವರ ಹೃದಯ ಅಷ್ಟೇ ಮೃದುವಾಗಿತ್ತು. ನಗರಸಭೆ ಸದಸ್ಯರಾಗಿ ಅವಿರೋಧ ಆಯ್ಕೆಯಾದ ಮೊಟ್ಟ ಮೊದಲ ವ್ಯಕ್ತಿ ಚಂದ್ರೇಗೌಡರಾಗಿದ್ದರು ಎಂದರು.ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಮಾತನಾಡಿ, ನೇರನುಡಿಯ ವ್ಯಕ್ತಿ. ಅವರ ಮನಸಿನಲ್ಲಿ ಕಲ್ಮಷ ಇರಲಿಲ್ಲ. ಯಾವುದೇ ಕೆಲಸ ವಹಿಸಿದರೂ ಜವಾಬ್ದಾರಿಯಿಂದ ನಿರ್ವಹಿಸುತ್ತಿದ್ದರು. ಅವರ ಅಕಾಲಿಕ ಅಗಲಿಕೆ ತೀವ್ರ ದುಃಖ ತಂದಿದೆ ಎಂದರು. ಗಾಯತ್ರಿ ಶಾಂತೇಗೌಡ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಕೆ.ಎಸ್. ಶಾಂತೇಗೌಡ, ಪ್ರಧಾನ ಕಾರ್ಯದರ್ಶಿ ಹಂಪಾಪುರ ಪುಟ್ಟೇಗೌಡ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಮಣೇನಹಳ್ಳಿ ರಾಜು, ಮುಖಂಡರಾದ ಡಿ.ಎಲ್. ವಿಜಯಕುಮಾರ್, ಎಂ.ಎಲ್. ಮೂರ್ತಿ, ಎಚ್.ಎಚ್. ದೇವರಾಜ್, ಕೆ.ಟಿ. ರಾಧಾಕೃಷ್ಣ, ಎ.ಎನ್. ಮಹೇಶ್, ನಗರಸಭೆ ಅಧ್ಯಕ್ಷೆ ಶೀಲಾದಿನೇಶ್, ಲಾಯರ್ ಪುಟ್ಟೇಗೌಡ, ಹಂಪಾಪುರ ಮಂಜೇಗೌಡ ಭಾಗವಹಿಸಿದ್ದರು.