ಸುಮಾರು 6 ಟಿಪ್ಪರ್ ನಷ್ಟು ತ್ಯಾಜ್ಯವನ್ನು ನದಿಯಿಂದ ಹೊರ

ಕನ್ನಡಪ್ರಭ ವಾರ್ತೆ ನಂಜನಗೂಡುನಗರದ ಯುವಾ ಬ್ರಿಗೇಡ್ ನ ಕಪಿಲಾ ನದಿ ಸ್ವಚ್ಛತೆ ಅಭಿಯಾನಕ್ಕೆ ಭಾನುವಾರ ಹಲವು ಸಂಘ ಸಂಸ್ಥೆಗಳ ನೂರಾರು ಯುವಕರು ಭಾಗಿಯಾಗಿ , ಶುಕ್ರವಾರದಿಂದ ಭಾನುವಾರದವರೆಗೆ ಮೂರು ದಿನಗಳ ನಡೆದ ನದಿ ಸ್ವಚ್ಚತಾ ಕಾರ್ಯ ಪೂರ್ಣಗೊಂಡಿತು. ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಕಪಿಲಾ ನದಿಯ ಸ್ನಾನಘಟ್ಟದ ಸ್ವಚ್ಛತಾ ಕಾರ್ಯವನ್ನು ಯುವ ಬ್ರಿಗೇಡ್‌ ಕಾರ್ಯಕರ್ತರು , ಶ್ರೀಕಂಠೇಶ್ವರ ದೋಣಿ ಸಂಘ, ಧರ್ಮಸ್ಥಳ ಸಂಘ, ಎನ್ಐ ಕಾಲೇಜು ವಿದ್ಯಾರ್ಥಿಗಳು, ರೋಟರಿ, ಕೆಂಪೇಗೌಡ ಬಡವಾಣೆ ಯುವಕರು, ಕಪಿಲಾ ನದಿ ಸ್ವಚ್ಛತಾ ಅಭಿಯಾನದಲ್ಲಿ ಪಾಲುಗೊಂಡು ಕಪಿಲಾ ನದಿ ಹಾಗೂ ಸ್ನಾನಘಟ್ಟವನ್ನು ಸ್ವಚ್ಛಗೊಳಿಸಿದರು.ನೂರಾರು ಸಂಖ್ಯೆಯಲ್ಲಿ ಸ್ವಯಂಸೇವಾ ಕಾರ್ಯದಲ್ಲಿ ತೊಡಗಿಕೊಂಡ ಯುವಕರು ನದಿಯಲ್ಲಿ ಭಕ್ತರು ಬಿಟ್ಟಿದ್ದ ಬಟ್ಟೆ ಬರೆ, ಮಡಿಕೆ ಕುಡಿಕೆ, ಅಯ್ಯಪ್ಪನ ಮಾಲೆ, ದೇವರ ಫೋಟೋ, ಪ್ಲಾಸ್ಟಿಕ್ ಕವರ್, ಪೂಜಾ ತ್ಯಾಜ್ಯಗಳು ಸೇರಿದಂತೆ ಇನ್ನಿತರ ಸುಮಾರು 6 ಟಿಪ್ಪರ್ ನಷ್ಟು ತ್ಯಾಜ್ಯವನ್ನು ನದಿಯಿಂದ ಹೊರ ತೆಗೆದರು. ನದಿ ಸ್ವಚ್ಛಗೊಂಡಿದ್ದರಿಂದ ನದಿಯ ಹರಿವು ಸುಲಲಿತಗೊಳಿಸುವುದರ ಜೊತೆಗೆ ಭಕ್ತರಿಗೆ ನದಿಗೆ ಬಟ್ಟೆ, ಪೂಜಾ ತ್ಯಾಜ್ಯವನ್ನುವನ್ನು ಎಸೆಯದಂತೆ ಮನವಿ ಮಾಡಿ ಅರಿವು ಮೂಡಿಸಿದರು.ಸ್ವಚ್ಛತಾ ಅಭಿಯಾನಕ್ಕೆ ನಗರಸಭೆ ಟಿಪರ್ ಹಾಗೂ ಜೆಸಿಬಿ ನೀಡಿ ಕಸ ವಿಲೇವಾರಿಗೆ ಸಹಕರಿಸಿತು. ಸ್ವಚ್ಛತೆಯಲ್ಲಿ ಪಾಲ್ಗೊಂಡ ಯುವಕರಿಗೆ ಶ್ರೀಕಂಠೇಶ್ವರ ದೇವಾಲಯದಿಂದ ಊಟ -ತಿಂಡಿ ಸರಬರಾಜು ಮಾಡಲಾಗಿತ್ತು.ಸ್ವಚ್ಚತಾ ಅಭಿಯಾನದಲ್ಲಿ ಯುವಾ ಬ್ರಿಗೇಡ್ ರಾಜ್ಯ ಸಂಚಾಲಕ ಎಸ್. ಚಂದ್ರಶೇಖರ್, ತಾಲೂಕು ಸಂಚಾಲಕ ಚಂದನ್, ಸುನಿಲ್, ಗಿರೀಶ್, ರವಿಶಾಸ್ತ್ರಿ, ರವಿ, ಮಹದೇವ, ಪವನ್, ಸೂರಿ, ಪ್ರಜ್ವಲ್, ಚರಣ್, ಅರ್ಜುನ್, ಶಶಾಂಕ್, ನೀಲಕಂಠನಗರದ ಅನಂತ ಹಾಗೂ ದೋಣಿ ಸಂಘದ ಸುರೇಶ್, ರಂಗಸ್ವಾಮಿ, ಸುಬ್ಬಣ್ಣ, ಚಂದ್ರು, ಶ್ರೀಕಂಠ, ಧರ್ಮಸ್ಥಳದ ಸಂಘದ ಧರ್ಮರಾಜ್, ರೋಟರಿ ಮುರುಳಿ, ಕೆಂಪೇಗೌಡ ಬಡಾವಣೆಯ ರಾಘವೇಂದ್ರ, ಎನ್ಐಇ ಕಾಲೇಜಿನ ವಿದ್ಯಾರ್ಥಿಗಳಾದ ಸಂಜನ್, ಪವನ್, ರಮಿತ, ಯಾನ ಸೀತಮ್ಮ ಇದ್ದರು.