ಕನ್ನಡಪ್ರಭ ವಾರ್ತೆ ಭಟ್ಕಳ
ಆಟೋ ಚಾಲಕರ ಮೇಲೆ ಭಟ್ಕಳ ಟ್ಯಾಕ್ಸಿ ಚಾಲಕರು ವಿನಾಃ ಕಾರಣ ದೌರ್ಜನ್ಯ, ಕಿರುಕುಳ ನೀಡಿ ವಿಡಿಯೋವನ್ನು ಸಾಮಾಜಿ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದು, ಇಂತಹವರ ಮೇಲೆ ಕ್ರಮ ಜರುಗಿಸುವಂತೆ ಆಗ್ರಹಿಸಿ ಶನಿವಾರ ಜಿಲ್ಲಾ ಮತ್ತು ತಾಲೂಕು ಆಟೋ ಚಾಲಕರ ಸಂಘದಿಂದ ನಗರ ಠಾಣೆ ಇನ್‌ಸ್ಪೆಕ್ಟರ್‌ಗೆ ಮನವಿ ಸಲ್ಲಿಸಲಾಯಿತು.ಭಟ್ಕಳ ತಾಲೂಕಿನಲ್ಲಿ 1600 ರಿಕ್ಷಾ ಚಾಲಕರು ಸಮಾಜಕ್ಕೆ ಯಾವುದೇ ತೊಂದರೆ ಆಗದ ರೀತಿಯಲ್ಲಿ ಬಾಡಿಗೆ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ನಮ್ಮ ಆಟೋ ಚಾಲಕರ ಬೇಡಿಕೆ ಈಡೇರಿಸುವಂತೆ ಕಳೆದ ಫೆ.12ರಂದು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ನಮ್ಮ ಅಹವಾಲು ಮಂಡಿಸಿದ್ದೇವೆ. ಆ ಸಂದರ್ಬದಲ್ಲಿ ಭಟ್ಕಳ ಟ್ಯಾಕ್ಸಿ ಚಾಲಕ ಸಂಘದವರು ಅಲ್ಲಿ ಉಪಸ್ಥಿತಿರಿದ್ದರು. ಹೀಗಿರುವಾಗ ಕಳೆದ ಒಂದು ವರ್ಷದಿಂದ ಭಟ್ಕಳ ಟ್ಯಾಕ್ಸಿ ಚಾಲಕ ಸಂಘದವರು ನಮ್ಮ ಆಟೋ ಚಾಲಕರಿಗೆ ಬಾಡಿಗೆಗೆ ಹೋದಾಗ ಅವರನ್ನು ಅಡ್ಡಗಟ್ಟುವುದು, ಕಿಸೆಯಿಂದ ಹಣ ಕಸಿಯುವುದು, ದೌರ್ಜನ್ಯ ಮಾಡಿ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ. ಚಲಿಸುತ್ತಿರುವ ಆಟೋಗಳನ್ನು ಎಕಾಏಕಿ ಬೆನ್ನೆತ್ತಿ ಅಡ್ಡಗಟ್ಟುವ ಸಮಯದಲ್ಲಿ ರಿಕ್ಷಾಗಳು ಪಲ್ಟಿಯಾಗಿ ಜೀವಹಾನಿಯಾದರೆ ಅದಕ್ಕೆ ಹೊಣೆ ಯಾರು. ಅಲ್ಲದೇ ಟ್ಯಾಕ್ಸಿ ಚಾಲಕ ಸಂಘದವರಿಗೆ ಈ ರೀತಿ ಆಟೋ ಚಾಲಕರನ್ನು ಅಡ್ಡಗಟ್ಟಿ ಬೆದರಿಸಲು ಕಾನೂನಿನಲ್ಲಿ ಅವಕಾಶ ಇದಯೇ ಎಂದು ಉತ್ತರ ಕನ್ನಡ ಜಿಲ್ಲಾ ಆಟೋ ರಿಕ್ಷಾ ಚಾಲಕ ಮಾಲಕರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಸಿಪಿಐ ದಿವಾಕರ ಅವರನ್ನು ಪ್ರಶ್ನಿಸಿದರು.ಆಟೋ ಚಾಲಕರ ಮೇಲೆ ದೌರ್ಜನ್ಯ ಎಸಗಿ ವಿಡಿಯೋ ಹರಿಬಿಡುವ ಇಂತಹವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದರು.
ಭಟ್ಕಳ ಆಟೋ ಚಾಲಕರ ಸಂಘದ ಅಧ್ಯಕ್ಷ ವೆಂಕಟೇಶ ನಾಯ್ಕ ಕೂಡ ಆಟೋ ಚಾಲಕರ ಮೇಲೆ ಟ್ಯಾಕ್ಸಿ ಚಾಲಕರು ಕಿರುಕುಳ ನೀಡುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಮುಂದೆ ಹೀಗಾಗದಂತೆ ತಡೆಯಬೇಕು. ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಉಪಾಧ್ಯಕ್ಷ ಶ್ರೀನಿವಾಸ ನಾಯ್ಕ, ಮುರುಡೇಶ್ವರ ಆಟೋ ಚಾಲಕರ ಸಂಘದ ಅಧ್ಯಕ್ಷ ಶ್ರೀಧರ ನಾಯ್ಕ, ಭಟ್ಕಳ ಆಟೋ ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಮಾದೇವ ನಾಯ್ಕ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಲೀಂ ಅಹ್ಮದ ಸೇರಿದಂತೆ ನೂರಾರು ಆಟೋ ಚಾಲಕರು ಉಪಸ್ಥಿತರಿದ್ದರು.