ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಜೆಎಸ್ಎಸ್ ಮಹಾವಿದ್ಯಾಪೀಠದ ವಿವಿಧ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ 2023- 24ನೇ ಸಾಲಿನಲ್ಲಿ ನಿವೃತ್ತರಾದವರನ್ನುಮೈಸೂರು ಸುತ್ತೂರು ಶಾಖಾಮಠದಲ್ಲಿ ನಡೆದ ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರ 109ನೇ ಜಯಂತಿ ಮಹೋತ್ಸವದ ಸಂದರ್ಭದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅಭಿನಂದಿಸಿ ಆಶೀರ್ವದಿಸಿದರು.
ಸೇವೆಯ ದಿನಗಳ ಅನುಭವಗಳನ್ನು ಹಂಚಿಕೊಂಡ ಜೆಎಸ್ಎಸ್ ಕಾನೂನು ಕಾಲೇಜಿನ ಪ್ರಾಂಶುಪಾಲರಾಗಿದ್ದ ಡಾ.ಎಸ್. ನಟರಾಜು ಮತ್ತು ಪಾಲಿಟೆಕ್ನಿಕ್ ಉಪನ್ಯಾಸಕರಾಗಿದ್ದ ಕೆ.ಪಿ. ವಿಜಯಕುಮಾರ್ ಅವರು, ಬಡತನದಲ್ಲಿ ಬೆಳೆದು ಬಂದ ನಮಗೆ ರಾಜೇಂದ್ರ ಶ್ರೀಗಳು ಅನ್ನ, ಆಶ್ರಯ, ಅರಿವು ನೀಡಿದರು. ಗ್ರ್್್್್್್್್್್್್್್‌ಮಾಂತರ ಪ್ರದೇಶದ ವಿದ್ಯಾರ್ಥಿಗಳಾದ ನಮ್ಮಂಥವರಿಗೂ ಎಂಜಿನಿಯರಿಂಗ್ ಶಿಕ್ಷಣಕ್ಕೆ ಅವಕಾಶ ನೀಡಿದರು. ದೇಶಿಕೇಂದ್ರ ಶ್ರೀಗಳು ಜೀವನ ಸಾಗಿಸಲು ಉದ್ಯೋಗವನ್ನು ನೀಡಿದರು. ಸೇವೆ ಸಲ್ಲಿಸಿ ನಿವೃತ್ತರಾದವರನ್ನು ಅಭಿನಂದಿಸುವುದು ಒಂದು ಮಾದರಿ ಕಾರ್ಯವಾಗಿದೆ. ಶ್ರೀಗಳ ಮಾತೃ ವಾತ್ಸಲ್ಯ ನಮಗೆಲ್ಲ ಭಾವತುಂಬಿ ಬರುವಂತೆ ಮಾಡಿದೆ. ಕೆಲಸ ಮಾಡಲು ಅತ್ಯುತ್ತಮ ಅವಕಾಶಗಳನ್ನು ಶ್ರೀಗಳು ನೀಡಿದರು. ಇದು ನಮಗೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಕಾರಿಯಾಯಿತು. ಜೆಎಸ್ಎಸ್ ಸಂಸ್ಥೆಯಲ್ಲಿ ಕುಟುಂಬದ ಸದಸ್ಯರಂತೆ ಎಲ್ಲ ನೌಕರರನ್ನು ಪರಿಗಣಿಸಲಾಗುತ್ತದೆ. ಶ್ರೀಮಠದ ಋಣವನ್ನು ತೀರಿಸುವುದು ಅಸಾಧ್ಯ ಎಂದರು.ಕಾರ್ಯಕ್ರಮದಲ್ಲಿ ಮಹಾವಿದ್ಯಾಪೀಠದ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ 2023ರ ಸೆಪ್ಟೆಂಬರ್ ನಿಂದ 2024ರ ಆಗಸ್ಟ್ 25 ರವರೆಗೆ ನಿವೃತ್ತರಾದವರು, ಹಾಗೂ ಸೇವೆಯಿಂದ ಬಿಡುಗಡೆಗೊಂಡವರಿಗೆ ಅಭಿನಂದನೆ ಮತ್ತು ಸೇವೆ ಸಲ್ಲಿಸುತ್ತಿರುವಾಗಲೇ ಅಗಲಿದವರ ಕುಟುಂಬದವರಿಗೆ ಸಾಂತ್ವನ ಹೇಳಲಾಯಿತು. ಹೀಗೆ ಒಟ್ಟು 177 ನೌಕರರು ಹಾಗೂ ಅವರ ಕುಟುಂಬ ವರ್ಗದವರನ್ನು ಶ್ರೀಗಳು ಆಶೀರ್ವದಿಸಿ ಅಭಿನಂದಿಸಿದರು.
ನಿವೃತ್ತರ ಪರಿಚಯದ ತೇರನೆಳೆದವರು ಪುಸ್ತಕವನ್ನು ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ ಬಿಡುಗಡೆಗೊಳಿಸಿದರು.ಡಾ.ಬಿ. ಪ್ರಭುಸ್ವಾಮಿ, ಡಾ.ಎಚ್.ಎಸ್. ಅಂಬಿಕಾ, ಆರ್.ಜೆ. ಪ್ರತಿಭಾ, ಡಾ.ಎನ್. ಮಹೇಶ್ವರಿ, ಆರ್.ಎಸ್. ಕುಮಾರ್, ಡಿ.ಎಸ್. ಅಂಬಿಕಾ, ಕೆ.ಜಿ. ವಿನುತಾ, ಡಾ. ಪ್ರಿಯದರ್ಶಿನಿ, ಎಚ್.ಎಸ್. ಮಾನಸ ಅವರು ನಿವೃತ್ತರ ಪರಿಚಯವನ್ನು ನಡೆಸಿಕೊಟ್ಟರು. ಕಾನೂನು ಕಾಲೇಜು ವಿದ್ಯಾರ್ಥಿಗಳಾದ ತೇಜಸ್ ಎಚ್. ಬಡಾಲ ಮತ್ತು ಕೃತಿ ಕೈಲಾರ್ ಪ್ರಾರ್ಥಿಸಿದರು. ಪ್ರೊ.ಆರ್. ಮೂಗೇಶಪ್ಪ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಡಾ.ಪಿ. ಶಿವಾನಂದ ಭಾರತಿ ವಂದಿಸಿದರು. ಡಾ.ಎಸ್. ನಟರಾಜು ನಿರೂಪಿಸಿದರು.