ಪೌರಕಾರ್ಮಿಕರ ಸಮಸ್ಯೆ ಪರಿಹಾರಕ್ಕೆ ಕಾರ್ಯಕ್ರಮ: ನಗರಸಭೆ ಆಯುಕ್ತ ಎಸ್.ವಿ.ರಾಮದಾಸ್

| Published : Aug 27 2024, 01:31 AM IST

ಪೌರಕಾರ್ಮಿಕರ ಸಮಸ್ಯೆ ಪರಿಹಾರಕ್ಕೆ ಕಾರ್ಯಕ್ರಮ: ನಗರಸಭೆ ಆಯುಕ್ತ ಎಸ್.ವಿ.ರಾಮದಾಸ್
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರ ನಿರ್ದೇಶನದ ಮೇರೆಗೆ ನಗರಸಭೆ ವ್ಯಾಪ್ತಿಯ ಪೌರಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಿ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಕುಂದುಕೊರತೆ ಹಾಗೂ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ನಗರಸಭೆ ಆಯುಕ್ತ ಎಸ್.ವಿ.ರಾಮದಾಸ್ ಹೇಳಿದರು. ಚಾಮರಾಜನಗರದಲ್ಲಿ ಪೌರಕಾರ್ಮಿಕರ ಕುಂದುಕೊರತೆ, ಸಂವಾದ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರ ಸಮಸ್ಯೆ, ಅಹವಾಲುಗಳನ್ನು ಆಲಿಸಿ ಮಾತನಾಡಿದರು.

ಪೌರಕಾರ್ಮಿಕರ ಕುಂದುಕೊರತೆ, ಆರೋಗ್ಯ ತಪಾಸಣೆ ಕಾರ್ಯಕ್ರಮ । ನಗರಸಭೆ ಪೌರಾಯುಕ್ತರಿಂದ ಆಯೋಜನೆ । ಅಹವಾಲು ಆಲಿಕೆ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರ ನಿರ್ದೇಶನದ ಮೇರೆಗೆ ನಗರಸಭೆ ವ್ಯಾಪ್ತಿಯ ಪೌರಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಿ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಕುಂದುಕೊರತೆ ಹಾಗೂ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪೌರಕಾರ್ಮಿಕರು ತಮ್ಮ ಕುಂದುಕೊರತೆ ಪರಿಹರಿಸಿಕೊಳ್ಳಲು ಇದು ಉತ್ತಮ ವೇದಿಕೆಯಾಗಿದೆ ಎಂದು ನಗರಸಭೆ ಆಯುಕ್ತ ಎಸ್.ವಿ.ರಾಮದಾಸ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ನಗರಭಿವೃದ್ಧಿ ಕೋಶ ಹಾಗೂ ನಗರಸಭೆ ಸಹಯೋಗದಲ್ಲಿ ನಗರದ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಆಯೋಜಿಸಲಾಗಿದ್ದ ಪೌರಕಾರ್ಮಿಕರ ಕುಂದುಕೊರತೆ, ಸಂವಾದ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರ ಸಮಸ್ಯೆ, ಅಹವಾಲುಗಳನ್ನು ಆಲಿಸಿ ಮಾತನಾಡಿದರು.

ನಗರ ಸ್ವಚ್ಛತಾ ಕಾರ್ಯದಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೂ ತೊಡಗಿಸಿಕೊಳ್ಳುವ ಪೌರಕಾರ್ಮಿಕರು ಶ್ರಮಜೀವಿಗಳಾಗಿದ್ದಾರೆ. ನಗರದ ಸ್ವಚ್ಛತೆಗಾಗಿ ಪೌರಕಾರ್ಮಿಕರಿಗೆ ಸಾರ್ವಜನಿಕರ ಸಹಕಾರವು ಅಗತ್ಯವಾಗಿದೆ. ಪೌರಕಾರ್ಮಿಕರು ನಿತ್ಯದ ಕಾಯಕದ ಜತೆಗೆ ತಮ್ಮ ವೈಯಕ್ತಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಸಂವಾದ ಕಾರ್ಯಕ್ರಮದ ಭಾಗವಾಗಿ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ. ಪೌರಕಾರ್ಮಿಕರು ಶಿಬಿರದ ಸದುಪಯೋಗ ಪಡೆಯಬೇಕು ಎಂದು ತಿಳಿಸಿದರು.

ಪೌರಕಾರ್ಮಿಕರಾದ ನಾಗರಾಜು ಮಾತನಾಡಿ, ನಗರಸಭೆ ವತಿಯಿಂದ ಕಾಯಂ, ನೇರ ವೇತನ, ಗುತ್ತಿಗೆ ಪೌರಕಾರ್ಮಿಕರಿಗೆ ಪ್ರತಿ ತಿಂಗಳು 5ನೇ ತಾರೀಖಿನೊಳಗೆ ವೇತನ ನೀಡಬೇಕು. ಸಂಕಷ್ಟ ಭತ್ಯೆಯನ್ನು ವೇತನದ ಜೊತೆಗೆ ಪ್ರತಿ ತಿಂಗಳು ಪಾವತಿಸಬೇಕು. ನಗರಸಭೆಯಲ್ಲಿ 120 ಪೌರಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದು, ಸಮಾನ ಕೆಲಸಕ್ಕೆ ಸಮಾನ ವೇತನದಡಿ ಪೌರಕಾರ್ಮಿಕರನ್ನು ಕಾಯಂ ಸಕ್ರಮಗೊಳಿಸಲು ಕ್ರಮ ವಹಿಸಬೇಕು. 29ನೇ ವಾರ್ಡ್ ಪೌರಕಾರ್ಮಿಕರ ಕಾಲೋನಿಗೆ ರಸ್ತೆ, ಕುಡಿಯುವ ನೀರು, ಒಳಚರಂಡಿ ಸೌಲಭ್ಯವನ್ನು ಒದಗಿಸಬೇಕು. ಗೃಹಭಾಗ್ಯ ಯೋಜನೆಯಡಿ 24 ಕಾಯಂ ಪೌರಕಾರ್ಮಿಕರಿಗೆ ಮನೆ ನಿರ್ಮಿಸಿಕೊಡಬೇಕು ಎಂದು ಮನವಿ ಮಾಡಿದರು.

ಗುತ್ತಿಗೆ ಕಾರ್ಮಿಕರ ಕೆಲಸನಿರ್ವಹಿಸುತ್ತಿರುವ ಜೆ.ಸಿ.ಬಿ ವಾಹನ ಚಾಲಕ, ಕ್ಲೀನರ್‌ಗಳನ್ನು ಕಾಯಂಗೊಳಿಸಬೇಕು. ಹೊಸದಾಗಿ ನೇಮಕವಾಗಿರುವ 24 ಜನ ಕಾಯಂ ಪೌರಕಾರ್ಮಿಕರಿಗೆ ಎನ್‌ಪಿಎಸ್ ಪ್ರಾನ್ ಸಂಖ್ಯೆ ನೀಡಬೇಕು. ಕಾಯಂ ಮತ್ತು ನೇರ ಪಾವತಿ ಪೌರಕಾರ್ಮಿಕರಿಗೆ ತುರ್ತು ಸಂದರ್ಭದಲ್ಲಿ ಆರೋಗ್ಯದ ಸಮಸ್ಯೆ ಮತ್ತು ಅನಾಹುತಗಳು ಸಂಭವಿಸಿದಲ್ಲಿ ತಕ್ಷಣವೇ ಬಿಲ್ಲುಗಳನ್ನು ಪಾವತಿಸಬೇಕು ಎಂದು ನಗರಸಭೆ ಆಯುಕ್ತರಿಗೆ ನಾಗರಾಜು ಅಹವಾಲು ಸಲ್ಲಿಸಿದರು.

ಪೌರಕಾರ್ಮಿಕರ ಕುಂದುಕೊರತೆ ಆಲಿಸಿ ಮಾತನಾಡಿದ ನಗರಸಭೆ ಪೌರಾಯುಕ್ತ ಎಸ್.ವಿ.ರಾಮದಾಸ್, ತಾಂತ್ರಿಕ ಕಾರಣಗಳನ್ನು ಸರಿಪಡಿಸಿ ಸಕಾಲದಲ್ಲಿ ವೇತನ ಪಾವತಿಸಲಾಗುವುದು. ಮುಂದಿನ ದಿನಗಳಲ್ಲಿ ಇದು ಮರುಕಳಿಸದಂತೆ ನೋಡಿಕೊಳ್ಳಲಾಗುವುದು. ಸಮಾನ ಕೆಲಸಕ್ಕೆ ಸಮಾನ ವೇತನ ಬೇಡಿಕೆ ಸರ್ಕಾರದ ಬಳಿಯಿದೆ. 2024ರ ಮೇ ಮಾಹೆವರೆಗೆ ಸಂಕಷ್ಟ ಭತ್ಯೆಯನ್ನು ನೀಡಲಾಗಿದ್ದು, ಸರ್ಕಾರದಿಂದ ಹಣ ಬಿಡುಗಡೆ ಆಗಬೇಕು. ಎಸ್‌ಎಫ್‌ಸಿ ಅನುದಾನ ಬಿಡುಗಡೆ ಬಳಿಕ ವೇತನದ ಜೊತೆಯೇ ನೀಡಲಾಗುವುದು. 35 ಪೌರಕಾರ್ಮಿಕರಿಗೆ ಮನೆ ನಿರ್ಮಿಸಲಾಗಿದೆ. ಇನ್ನು 24 ಮಂದಿಗೆ ಮನೆ ನಿರ್ಮಾಣಕ್ಕೆ 24 ಗುಂಟೆ ಭೂಮಿ ಮಂಜೂರಾಗಿದೆ. ಇತರೆ ಬೇಡಿಕೆಗಳನ್ನು ಪ್ರಾಮಾಣಿಕವಾಗಿ ಪರಿಹರಿಸಲು ಪ್ರಯತ್ನಿಸಲಾಗುವುದು ಎಂದರು.

ಪೌರಕಾರ್ಮಿಕರ ಸಂವಾದ ಕಾರ್ಯಕ್ರಮದ ಅಂಗವಾಗಿ ಪೌರಕಾರ್ಮಿಕರಿಗೆ ಆರೋಗ್ಯ ಶಿಬಿರ ಏರ್ಪಡಿಸಲಾಗಿತ್ತು. ಶಿಬಿರದಲ್ಲಿ ಪೌರಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಿ ಔಷಧಗಳನ್ನು ವಿತರಿಸಲಾಯಿತು.

ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ರಾಜು, ಹಿರಿಯ ವೈದ್ಯಾಧಿಕಾರಿ ಡಾ.ಮಹದೇವ್, ಆರೋಗ್ಯ ಇಲಾಖೆಯ ವೈದ್ಯ ಡಾ.ರಂಜಿತಾ, ನಗರ ಆರೋಗ್ಯ ಕೇಂದ್ರದ ವೈದ್ಯೆ ಡಾ.ರಿಯಾ ದಿಶಾನಿ ರೇ, ಶೇಖರ್, ನಗರಸಭೆ ಲೆಕ್ಕ ಅಧೀಕ್ಷಕ ರುದ್ರಮುನಿಸ್ವಾಮಿ, ಯೋಜನಾಧಿಕಾರಿ ವೆಂಕಟನಾಯಕ್ ಹಾಜರಿದ್ದರು.