ಸಾಲದ ಹೊರೆ ತಗ್ಗಿಸಲು ಪ್ರಯತ್ನಿಸಲಾಗಿದೆ: ಎಂ.ಬಿ. ದೇವಯ್ಯ

| Published : Feb 12 2025, 12:30 AM IST

ಸಾರಾಂಶ

ಸಂಘಕ್ಕೆ ಹಿರಿಯರು ಮಾಡಿ ಕೊಟ್ಟಿರುವ ಭಾರಿ ಬೆಲೆ ಬಾಳುವ ಸ್ಥಿರಾಸ್ಥಿಗಳು ಹುಣಸೂರು, ಹೆಬ್ಬಾಲೆಗಳಲ್ಲಿ ಇದೆ. ಈ ಹಿಂದೆ ಇದರಲ್ಲಿನ ಒಂದಷ್ಟು ಜಾಗವನ್ನು ಮಾರಾಟ ಮಾಡಿ, ಸಾಲದಿಂದ ಮುಕ್ತರಾಗುವ ಪ್ರಯತ್ನ ನಡೆಯಿತಾದರು, ಅಷ್ಟು ದೊಡ್ಡ ಮಟ್ಟದ ಹಣವನ್ನು ನೀಡಿ ಖರೀದಿಸಲು ಯಾರು ಮುಂದೆ ಬಾರದ ಹಿನ್ನೆಲೆಯಲ್ಲಿ ಅವುಗಳ ಮಾರಾಟ ಮಾಡಲಿಲ್ಲ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಸಾಲದ ಹೊರೆಯಿಂದ ತೀವ್ರ ಸಂಕಷ್ಟದಲ್ಲಿದ್ದ ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘವನ್ನು ಅದರಿಂದ ಹೊರ ತರುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಗಳನ್ನು ತನ್ನ ಅಧಿಕಾರದ ಅವಧಿಯಲ್ಲಿ ನಡೆಸಲಾಗಿದೆ ಎಂದು ಸಂಘದ ಮಾಜಿ ಅಧ್ಯಕ್ಷ ಎಂ.ಬಿ. ದೇವಯ್ಯ ತಿಳಿಸಿದ್ದಾರೆ.

ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಘದ ಕೆಲ ಸದಸ್ಯರು ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, ತನ್ನ ಅಧಿಕಾರದ ಅವಧಿಯಲ್ಲಿ ಏನನ್ನೂ ಮಾಡಿಲ್ಲ ಎನ್ನುವ ಆರೋಪ ಸಮರ್ಥನೀಯವಲ್ಲ. ತಾನು ಸಂಘದಲ್ಲಿ ಸುಮಾರು ೧೭ ವರ್ಷಗಳ ಕಾಲ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ. ತನ್ನ ಅಧಿಕಾರದ ಆರಂಭಿಕ ಅವಧಿಯಲ್ಲಿ ಸಂಘ ೨೫ ಕೋಟಿಯಷ್ಟು ಸಾಲದ ಹೊರೆಯನ್ನು ಹೊಂದಿತ್ತು. ಇದನ್ನು ಹಲವಾರು ಉಪ ಕ್ರಮಗಳೊಂದಿಗೆ ೧೨ ಕೋಟಿ ರು.ಗಳಿಗೆ ಇಳಿಸಲಾಗಿದೆ ಮತ್ತು ಸಂಘವನ್ನು ಪ್ರಗತಿಯ ಪಥದತ್ತ ತಂದು ನಿಲ್ಲಿಸುವ ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ತಾನು ಅಧ್ಯಕ್ಷನಾಗಿ ಅಧಿಕಾರಕ್ಕೆ ಬರುವ ಸಂದರ್ಭ ಸಂಘಕ್ಕೆ ಸೇರಿದ ಹುಣಸೂರು, ಹೆಬ್ಬಾಲೆ ಕ್ಯೂರಿಂಗ್ ವರ್ಕ್ಸ್ ಮತ್ತು ಅದರ ಜಾಗ ಪಾಳು ಬಿದ್ದಿತ್ತು. ಇವುಗಳನ್ನು ಇಂದು ಪುನಶ್ಚೇತನಗೊಳಿಸಿ, ಕಾಫಿ ಕ್ಯೂರಿಂಗ್‌ಗೆ ಹೊಸ ಯಂತ್ರಗಳ ಅಳವಡಿಕೆ ಕಾರ್ಯ ಮಾಡಲಾಗಿದೆ. ಪೆಟ್ರೋಲ್ ಬಂಕ್‌ಗಳನ್ನು ತೆರೆದು ವಹಿವಾಟನ್ನು ಮಾಡಲಾಗುತ್ತಿದೆ. ಈ ಹಿಂದೆ ಸಂಘದ ಸಿಬ್ಬಂದಿಗಳಿಗೆ ವೇತನ ಪಾವತಿಯೇ ಸಾಧ್ಯವಾಗದ ಸ್ಥಿತಿ ಇತ್ತಾದರೆ, ಪ್ರಸ್ತುತ ಹಳೆಯ ಸಾಲವನ್ನು ಹೊರತು ಪಡಿಸಿದರೆ ಇತ್ತೀಚಿನ ವರ್ಷಗಳಲ್ಲಿ ಸಂಘ ಲಾಭದಲ್ಲೆ ಮುನ್ನಡೆಯುತ್ತಿರುವುದಾಗಿ ತಿಳಿಸಿದರು.

ಸಂಘಕ್ಕೆ ಹಿರಿಯರು ಮಾಡಿ ಕೊಟ್ಟಿರುವ ಭಾರಿ ಬೆಲೆ ಬಾಳುವ ಸ್ಥಿರಾಸ್ಥಿಗಳು ಹುಣಸೂರು, ಹೆಬ್ಬಾಲೆಗಳಲ್ಲಿ ಇದೆ. ಈ ಹಿಂದೆ ಇದರಲ್ಲಿನ ಒಂದಷ್ಟು ಜಾಗವನ್ನು ಮಾರಾಟ ಮಾಡಿ, ಸಾಲದಿಂದ ಮುಕ್ತರಾಗುವ ಪ್ರಯತ್ನ ನಡೆಯಿತಾದರು, ಅಷ್ಟು ದೊಡ್ಡ ಮಟ್ಟದ ಹಣವನ್ನು ನೀಡಿ ಖರೀದಿಸಲು ಯಾರು ಮುಂದೆ ಬಾರದ ಹಿನ್ನೆಲೆಯಲ್ಲಿ ಅವುಗಳ ಮಾರಾಟ ಮಾಡಲಿಲ್ಲ. ಇರುವ ಸ್ಥಿರಾಸ್ಥಿಗಳ ಮಾರಾಟದಿಂದಲೇ ಸಂಘದ ಎಲ್ಲ ಸಮಸ್ಯೆಗಳಿಗೂ ಪರಿಹಾರ ದೊರಕಿ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸಂಘ ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದ ಹಂತಗಳಲ್ಲಿ ಯಾವುದೇ ಸರ್ಕಾರಗಳು ಸಂಘಕ್ಕೆ ಅಗತ್ಯ ನೆರವನ್ನು ಒದಗಿಸಲಿಲ್ಲ. ಭಾರೀ ಪ್ರಮಾಣದ ಸಾಲದ ಹಿನ್ನೆಲೆಯಲ್ಲಿ ಮತ್ತೆ ಸಾಲ ಮಾಡುವ ಸಾಧ್ಯತೆಗಳು ಸಂಘಕ್ಕಿರಲಿಲ್ಲ. ಇಷ್ಟೆಲ್ಲ ಸಂಕಷ್ಟಗಳ ನಡುವೆಯೂ ಸಂಘವನ್ನು ಸಾಕಷ್ಟು ಪರಿಶ್ರಮದಿಂದ ಅಭಿವೃದ್ಧಿಯ ಪಥದೆಡೆಗೆ ಮುನ್ನಡೆಸುವ ಕಾರ್ಯ ನಡೆದಿದೆ. ಪ್ರಸ್ತುತ ಕೊಡಗು ಜಿಲ್ಲಾ ಸಹಕಾರ ಕೇಂದ್ರ‍ ಬ್ಯಾಂಕ್‌ಗೆ ಪ್ರತಿ ತಿಂಗಳು ೩.೧೧ ಲಕ್ಷ ರು.ಗಳನ್ನು ಸಾಲದ ಬಾಪ್ತು ಸಂಘದಿಂದ ಪಾವತಿಸಲಾಗುತ್ತಿದೆ. ಇಷ್ಟೆಲ್ಲ ಶ್ರಮದಿಂದ ನಡೆಸಿರುವ ಕಾರ್ಯಗಳನ್ನು ಬದಿಗೆ ಸರಿಸಿ, ಇವರು ಏನನ್ನೂ ಮಾಡಿಲ್ಲ ಎನ್ನುವುದು ಸರಿಯಲ್ಲ ಎಂದು ಹೇಳಿದರು.ಸಂಘದ ಮಾಜಿ ಉಪಾಧ್ಯಕ್ಷ ಎಸ್.ಬಿ. ಪೊನ್ನಪ್ಪ ಮಾತನಾಡಿ, ಸಂಘದಲ್ಲಿ ೬ ಸಾವಿರಕ್ಕೂ ಹೆಚ್ಚಿನ ಸದಸ್ಯರಿದ್ದಾರೆ. ನಿಯಮಗಳಂತೆ ಇವರು ಮತದಾನಕ್ಕೆ ಅರ್ಹರಾಗಿರಬೇಕಾದರೆ, ತಮ್ಮ ಷೇರು ಹಣವನ್ನು ಪೂರ್ಣಗೊಳಿಸಬೇಕು. ಕಡ್ಡಾಯವಾಗಿ ವಾರ್ಷಿಕ ೨ ಸಾವಿರ ರು.ಗಳ ವಹಿವಾಟನ್ನು ಸಂಘದೊಂದಿಗೆ ಮಾಡಬೇಕು ಮತ್ತು ಸಂಘದ ಮಹಾಸಭೆಗಳಿಗೆ ಪಾಲ್ಗೊಳ್ಳುವುದು ಅಗತ್ಯವಾಗಿರುತ್ತದೆ. ಇವುಗಳ ಪಾಲನೆಯಾಗದ ಹಿನ್ನೆಲೆ ಮತದಾರರ ಹಕ್ಕನ್ನು ಬಹುತೇಕ ಸದಸ್ಯರು ಕಳೆದುಕೊಂಡಿದ್ದಾರೆ ಎಂದು ತಿಳಿಸಿದರು.

ಸಂಘದ ಮಾಜಿ ನಿರ್ದೇಶಕ ನಾಪಂಡ ರವಿ ಕಾಳಪ್ಪ ಮಾತನಾಡಿ, ಸಂಘದ ಹಳೆಯ ಸಾಲವನ್ನು ಹೊರತುಪಡಿಸಿದಲ್ಲಿ ಪ್ರಸ್ತುತ ಸಂಘ ವಾರ್ಷಿಕ ೨೪ ಲಕ್ಷ ಲಾಭದಲ್ಲಿ ಮುನ್ನಡೆಯುತ್ತಿದೆ ಎಂದು ಹೇಳಿದರು.

೧೧ ಮಂದಿ ಅವಿರೋಧ ಆಯ್ಕೆ:ಸಂಘ ಒಟ್ಟು ೧೫ ನಿರ್ದೇಶಕ ಸ್ಥಾನಗಳನ್ನು ಹೊಂದಿದ್ದು, ಇದರಲ್ಲಿ ೧೧ ಸ್ಥಾನಗಳ ಅವಿರೋಧ ಆಯ್ಕೆಯಾಗಿದೆ. ಮಡಿಕೇರಿ ಸಾಮಾನ್ಯ ಕ್ಷೇತ್ರದ ೩ ಸ್ಥಾನ ಮತ್ತು ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ ಮೀಸಲು ೧ ಸ್ಥಾನಕ್ಕೆ ಫೆ.೧೬ರಂದು ಚುನಾವಣೆ ನಡೆಯಲಿದೆ.

ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದ ಮಾಜಿ ನಿರ್ದೇಶಕ ಮಹೇಶ್ ಸುದ್ದಿಗೋಷ್ಠಿಯಲ್ಲಿದ್ದರು.