ಸವಿತಾ ಸಮಾಜದ ಜನರು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಿ: ತಾಪಂ ಇಒ ಶ್ರೀನಿವಾಸ್

| Published : Feb 12 2025, 12:30 AM IST

ಸವಿತಾ ಸಮಾಜದ ಜನರು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಿ: ತಾಪಂ ಇಒ ಶ್ರೀನಿವಾಸ್
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರಿ ಶಾಲೆಗಳು ಉಳಿದರೆ ಮಾತ್ರ ಹಿಂದುಳಿದ ಸಮುದಾಯದ ವಿದ್ಯಾರ್ಥಿಗಳಿಗೆ ಶಿಕ್ಷಣ ಸಿಗಲು ಸಾಧ್ಯ. ಅಕ್ಷರ ಕಲಿತರೇ ಮಾತ್ರ ಬದುಕನ್ನು ರೂಪಿಸಿಕೊಳ್ಳಬಹುದು. ಪ್ರತಿಯೊಂದು ವೃತ್ತಿಯೂ ತಮ್ಮದೇ ಆದ ಪಾವಿತ್ರ್ಯತೆಯನ್ನು ಹೊಂದಿದೆ. ಅದರ ಗೌರವವನ್ನು ಕಾಪಾಡಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಮೂಲ ವೃತ್ತಿ ಮುಂದುವರಿಸುವ ಜೊತೆಗೆ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಲು ಪೋಷಕರು ಮುಂದಾಗಬೇಕು ಎಂದು ತಾಪಂ ಇಒ ಶ್ರೀನಿವಾಸ್ ತಿಳಿಸಿದರು.

ಪಟ್ಟಣದ ತಾಲೂಕು ಕಚೇರಿಯಲ್ಲಿ ನಡೆದ ಸವಿತ ಮಹರ್ಷಿ ಜಯಂತಿಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜಕ್ಕೆ ಶೃಂಗರ ಎಂಬ ಪದವನ್ನು ಕಲಿಸಿಕೊಟ್ಟ ಕೊಡುಗೆ ಸವಿತ ಸಮಾಜಕ್ಕೆ ಸೇರುತ್ತದೆ. ವೃತ್ತಿ ಪರಂಪರೆಯನ್ನು ಮುಂದುವರಿಸದಿದ್ದರೇ ಪ್ರತಿಯೊಬ್ಬರು ಸುಂದರವಾಗಿ ಕಾಣಲು ಸಾಧ್ಯವಾಗುತ್ತಿರಲ್ಲಿಲ್ಲ ಎಂದರು.

ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ಕೊಟ್ಟ ನಂತರ ಯಾರು ಬೇಕಾದರೂ ಯಾವ ವೃತ್ತಿಯನ್ನು ಅವಲಂಬಿಸಿ ಬದುಕಬಹುದು ಎಂದ ಅವರು, ಸರ್ಕಾರಿ ಶಾಲೆಗಳು ಉಳಿದರೆ ಮಾತ್ರ ಹಿಂದುಳಿದ ಸಮುದಾಯದ ವಿದ್ಯಾರ್ಥಿಗಳಿಗೆ ಶಿಕ್ಷಣ ಸಿಗಲು ಸಾಧ್ಯ. ಅಕ್ಷರ ಕಲಿತರೇ ಮಾತ್ರ ಬದುಕನ್ನು ರೂಪಿಸಿಕೊಳ್ಳಬಹುದು. ಪ್ರತಿಯೊಂದು ವೃತ್ತಿಯೂ ತಮ್ಮದೇ ಆದ ಪಾವಿತ್ರ್ಯತೆಯನ್ನು ಹೊಂದಿದೆ. ಅದರ ಗೌರವವನ್ನು ಕಾಪಾಡಿಕೊಳ್ಳಬೇಕೆಂದು ಸಲಹೆ ನೀಡಿದರು.

ಶಿಕ್ಷಕ ಮಹದೇವ್ ಮಾತನಾಡಿ, ಸವಿತ ಮಹರ್ಷಿ ಸಮಾಜದ ಮೂಲ ಪುರುಷರು. ಮಹರ್ಷಿಗಳು ದೇವಾನು ದೇವತೆಗಳಿಗೆ ಕ್ಷೌರ ಮಾಡುತ್ತಿದ್ದರು ಎನ್ನುವ ನಂಬಿಕೆ ಇದೆ. ಶಿವನ ದಿವ್ಯ ದೃಷ್ಟಿಯಲ್ಲಿ ಜನ್ಮತಾಳಿದ ಸವಿತಾ ಮಹರ್ಷಿಗಳು ಬ್ರಹ್ಮಜ್ಞಾನವನ್ನು ಹೊಂದಿದ್ದರು. ಚುತುರ್ವೇದಗಳಲ್ಲಿ ಒಂದಾದ ಸಮಾವೇದ ಬರೆದಿದ್ದಾರೆ. ಸವಿತ ಮಹರ್ಷಿಯ ಪುತ್ರಿ ಗಾಯಿತ್ರಿ ದೇವಿಯೂ ಗಾಯಿತ್ರಿ ಮಂತ್ರವನ್ನು ಬರೆದಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.

ಸವಿತ ಸಮಾಜದ ಜಿಲ್ಲಾ ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷ ಕೆಂಪರಾಜು ಮಾತನಾಡಿ, ಸವಿತ ಸಮಾಜದ ಸಮುದಾಯವು ಕ್ಷೌರ ವೃತ್ತಿಯ ಜೊತೆಗೆ ಆರ್ಯುವೇದ ಚಿಕಿತ್ಸೆ ನೀಡುತ್ತಾ ಬಂದಿದ್ದಾರೆ. ರಾಜಕೀಯವಾಗಿ ಹಿಂದುಳಿದಿರುವ ಸಮುದಾಯಕ್ಕೆ ಸರ್ಕಾರ ಶಕ್ತಿ ತುಂಬುವ ಕೆಲಸ ಮಾಡಬೇಕು. ಹಲಗೂರಿನಲ್ಲಿ ಪ್ರತ್ಯೇಕವಾಗಿ ಸ್ಮಶಾನ ನೀಡಬೇಕೆಂದು ಮನವಿ ಮಾಡಿದರು.

ಇದೇ ವೇಳೆ ಸವಿತ ಸಮಾಜದ ಉಪಾಧ್ಯಕ್ಷ ಕುನ್ನಪ್ಪ, ಗ್ರೇಡ್ 2 ತಹಸೀಲ್ದಾರ್ ಕುಮಾರ್, ಕಾರ್ಮಿಕ ಇಲಾಖೆ ಅಧಿಕಾರಿ ಅನಿತಾ, ಮುಖಂಡರಾದ ವೆಂಕಟೇಶ್,ನಾಗೇಂದ್ರ, ಬಸವರಾಜು, ಮಂಟೇಲಿಂಗಪ್ಪ, ಶಂಕರಮೂರ್ತಿ ಸೇರಿದಂತೆ ಇತರೆ ಮುಖಂಡರು ಇದ್ದರು.