ಸಾರಾಂಶ
- ಉರುಸ್ ಗಂಧ ಮೆರವಣಿಗೆ ವಿಚಾರಕ್ಕೆ ಶನಿವಾರ ರಾತ್ರಿ ನಡೆದಿರುವ ಪ್ರಕರಣ
- ನ್ಯಾಮತಿ ಪೊಲೀಸ್ ಠಾಣೆಯಲ್ಲಿ ದೂರು- ಪ್ರತಿದೂರು ದಾಖಲು - - - ನ್ಯಾಮತಿ: ತಾಲೂಕಿನ ಚೀಲೂರು ಗ್ರಾಮದ ಮುಸ್ಲಿಂ ಕಾಲೋನಿಯಲ್ಲಿ ಉರುಸ್ ಗಂಧದ ಮೆರವಣಿಗೆ ವಿಚಾರವಾಗಿ ಮುಸ್ಲಿಂ ಸಮುದಾಯದ ಎರಡು ಗುಂಪುಗಳ ನಡುವೆ ನಡೆದ ಗಲಾಟೆಯಲ್ಲಿ ಇಬ್ಬರಿಗೆ ಚಾಕುವಿನಿಂದ ಇರಿದು, ಮಾರಣಾಂತಿಕ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿರುವ ಘಟನೆ ಶನಿವಾರ ನಡೆದಿದೆ.ಸಾದಿಕ್ ಬಾಷಾ ಹಾಗೂ ಪುತ್ರ ಮಹಮದ್ ಸಾಕೀಬ್ ಚಾಕು ಇರಿತದಿಂದ ಗಾಯಗೊಂಡು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆದಿದ್ದಾರೆ.
ಚೀಲೂರು ಗ್ರಾಮದ ಮುಸ್ಲಿಂ ಕಾಲೋನಿಯಲ್ಲಿ ಉರುಸ್ ಮೆರವಣಿಗೆ ವಿಚಾರವಾಗಿ ರಾತ್ರಿ ಸುಮಾರು 8 ಗಂಟೆ ಹೊತ್ತಿಗೆ, ಗ್ರಾಮಸ್ಥರ ಮಧ್ಯಸ್ಥಿಕೆಯಲ್ಲಿ ಚರ್ಚಿಸಿ, ಒಂದು ಗುಂಪು ಮೆರವಣಿಗೆ ಬೇಡ ಎಂದು ನಿರ್ಧರಿಸಿದ್ದರು ಎನ್ನಲಾಗಿದೆ. ಈ ಕಾರಣಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ಈ ವೇಳೆ ಸಾದಿಕ್ ಬಾಷಾ, ಮಹಮದ್ ಸಾಕೀಬ್‌ಗೆ ಚಾಕು ಇರಿಯಲಾಗಿದೆ.ಮೊಹಮ್ಮದ್ ಇಬ್ರಾಹಿಂ, ಶಫಿ, ರೋಷನ್, ಯಾಸೀನ್, ಮುಜಾಹಿದ್, ಸುಬೀಲ್, ಅಪ್ಸರ್, ರಾಹುಲ್, ಜಾಹೀದ್ ಸೇರಿದಂತೆ 14ಕ್ಕೂ ಹೆಚ್ಚು ಜನರ ಗುಂಪು ಸಾದಿಕ್ ಮತ್ತು ಸಾಕೀಬ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಲ್ಲದೇ, ಚಾಕುವಿನಿಂದ ಇರಿಯಲಾಗಿದೆ ಎಂದು ಸಭಿಲ್ ಅಹಮ್ಮದ್, ಅಪ್ಸರ್ ಅಲಿ, ಗೌಸ್‌ಪೀರ್ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರತಿ ದೂರು:ಚೀಲೂರು ಮುಸ್ಲಿಂ ಕಾಲೋನಿಯ ಸಾದಿಕ್ ಬಾಷ ಹಾಗೂ ಅವರ ಪುತ್ರ ಮಹಮ್ಮದ್ ಸಾಕೀಬ್ ಎಂಬುವರೇ ಉರುಸ್ ಮೆರವಣಿಗೆ ಸಂಬಂಧ ವಿವಾದ ಸೃಷ್ಟಿಸಿದ್ದಾರೆ. ಅದೇ ಗ್ರಾಮದ ಮೊಹಮ್ಮದ್ ಇಬ್ರಾಹಿಂ, ಶಫೀ, ರೋಷನ್, ಯಾಸೀನ್ ಸೇರಿದಂತೆ ಇತರರ ವಿರುದ್ಧ ದುರುದ್ದೇಶದಿಂದ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಪ್ರತಿ ದೂರು ದಾಖಲಿಸಿದ್ದಾರೆ. ಎರಡೂ ಗುಂಪುಗಳ ದೂರುಗಳನ್ನು ನ್ಯಾಮತಿ ಪೊಲೀಸ್ ಠಾಣೆ ಪೊಲೀಸರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
- - - (ಸಾಂದರ್ಭಿಕ ಚಿತ್ರ)