ಸಾರಾಂಶ
ರಾಜ್ಯದ 80 ಉದ್ಯಮಗಳು ಭಾಗಿ । ಸುಮಾರು 500 ಮಂದಿ ಉಗ್ಯೋಗದ ಭರವಸೆಕನ್ನಡಪ್ರಭ ವಾರ್ತೆ ಉಡುಪಿಉಡುಪಿ ನಗರಸಭೆ ವತಿಯಿಂದ 2ನೇ ವರ್ಷದ ಉದ್ಯೋಗ ಮೇಳವು, ಮಲ್ಪೆಯ ಶ್ರೀಜ್ಞಾನ ಜ್ಯೋತಿ ಭಜನಾ ಮಂದಿರ ಸುವರ್ಣ ಸಂಭ್ರಮ ಸಮಿತಿ ಹಾಗೂ ಬೆಂಗಳೂರಿನ ಮೆಸರ್ಸ್ ಯಶಸ್ ಮ್ಯಾನೇಜ್ಮೆಂಟ್ ಸೊಲ್ಯೂಷನ್ಸ್ ಸಹಭಾಗಿತ್ವದಲ್ಲಿ ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ನಡೆಯಿತು.ಈ ಉದ್ಯೋಗ ಮೇಳದಲ್ಲಿ ರಾಜ್ಯದ ಸುಮಾರು 80 ಉದ್ಯಮಗಳು ಭಾಗವಹಿಸಿದ್ದವು. ಉಡುಪಿ ಮಾತ್ರವಲ್ಲದೇ ದ.ಕ., ಉ.ಕ., ಕೊಡಗು, ಹಾವೇರಿ, ಚಿಕ್ಕಮಗಳೂರು ಮುಂತಾದ ಜಿಲ್ಲೆಗಳ 2000ಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದರು. ಸುಮಾರು 500 ಮಂದಿ ಉಗ್ಯೋಗದ ಭರವಸೆ ಪಡೆದರು.ಉದ್ಯಮಿ ಶ್ಯಾಮಿಲಿ ನವೀನ್, ಉದ್ಯೋಗ ಮೇಳ ಉದ್ಘಾಟಿಸಿ, ಜಿಲ್ಲೆಯಲ್ಲಿ ಉದ್ಯೋಗಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ, ಜೊತೆಗೆ ಉದ್ಯಮಗಳಲ್ಲಿಯೂ ಒಳ್ಳೆಯ ಉದ್ಯೋಗಿಗಳ ಅವಶ್ಯಕತೆ ಹೆಚ್ಚುತ್ತಿದೆ. ಆದ್ದರಿಂದ ಉದ್ಯೋಗ ಮೇಳಗಳು ಉದ್ಯೋಗಾರ್ಥಿ ಮತ್ತು ಉದ್ಯೋಗದಾತರಿಗೂ ಸಹಾಯಕವಾಗಿವೆ ಎಂದರು.ಮುಖ್ಯ ಅತಿಥಿಯಾಗಿದ್ದ ಮಾಹೆ ವಿವಿ ಸಹಕುಲಾಧಿಪತಿ ಡಾ. ಎಚ್.ಎಸ್.ಬಲ್ಲಾಳ್ ಮಾತನಾಡಿ, ಭಾರತದಲ್ಲಿ ಶೇ.60ರಷ್ಟು ೨೫ ವರ್ಷದೊಳಗಿನವರಿದ್ದಾರೆ. ಅವರೆಗೆಲ್ಲ ಉದ್ಯೋಗ ನೀಡುವುದು ಆಡಳಿತ ವ್ಯವಸ್ಥೆಗೆ ಬಹುದೊಡ್ಡ ಸವಾಲಾಗಿದೆ. ಆದ್ದರಿಂದ ಖಾಸಗಿ ಸಂಸ್ಥೆಗಳು ಉದ್ಯೋಗದಾತರಾಗಬೇಕಾಗಿದೆ. ಮಣಿಪಾಲ ಶಿಲ್ಪಿ ಡಾ. ಟಿ.ಎಂ.ಎ.ಪೈ ಅವರು ಸ್ಥಾಪಿಸಿದ ಶಿಕ್ಷಣ, ಆರೋಗ್ಯ ಸಂಸ್ಥೆಗಳು ಲಕ್ಷಾಂತರ ಮಂದಿಗೆ ಉದ್ಯೋಗ ನೀಡಿದೆ ಎಂದು ಹೇಳಿದರು.ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಪ್ರಾಸ್ತಾವಿಕ ಮಾತುಗಳನ್ನಾಡಿ, ಜಿಲ್ಲೆಯ ಪದವೀಧರರು ಊರಲ್ಲಿಯೇ ಉದ್ಯೋಗ ಪಡೆದು ಹೆತ್ತವರ ಮತ್ತು ಕುಟುಂಬದವರ ಜತೆಗಿರಬೇಕು ಎಂಬ ಉದ್ದೇಶ ಕೂಡ ಈ ಉದ್ಯೋಗ ಮೇಳ ಹಿಂದೆ ಇದೆ ಎಂದರು.ಬಿಲ್ಲಾಡಿ ಐಟಿಐ ಪ್ರಿನ್ಸಿಪಾಲ್ ರೂಪೇಶ್ ಕುಮಾರ್, ಪಡುಬಿದ್ರಿ ವಿಶೇಷ ಆರ್ಥಿಕ ವಲಯದ ಮುಖ್ಯಸ್ಥ ಅಶೋಕ ಕುಮಾರ್, ಮಲ್ಪೆ ಶ್ರೀ ಜ್ಞಾನ ಜ್ಯೋತಿ ಭಜನಾ ಮಂದಿರ ಸುವರ್ಣ ಸಮಿತಿಯ ಪಾಂಡುರಂಗ ಮಲ್ಪೆ, ಜ್ಞಾನೇಶ್ವರ ಕೋಟ್ಯಾನ್, ಹರಿಯಪ್ಪ ಕೋಟ್ಯಾನ್, ನಗರಸಭೆ ಉಪಾಧ್ಯಕ್ಷ ರಜನಿ ಹೆಬ್ಬಾರ್, ಅಜ್ಜರಕಾಡು ಡಾ. ಜಿ. ಶಂಕರ್ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಿನ್ಸಿಪಾಲ್ ಪ್ರೊ. ಸೋಜನ್, ನಗರಸಭೆ ಪೌರಾಯುಕ್ತ ಮಹಾಂತೇಶ ಹಂಗರಗಿ, ಕೆನರಾ ಬ್ಯಾಂಕ್ ಎಜಿಎಂ ಸಂಜೀವ ಕುಮಾರ್, ನಗರಸಭೆ ಸದಸ್ಯೆ ರಶ್ಮಿ ಸಿ. ಭಟ್ ಉಪಸ್ಥಿತರಿದ್ದರು. ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಸ್ವಾಗತಿಸಿದರು. ಬೆಂಗಳೂರಿನ ಮೆಸರ್ಸ್ ಯಶಸ್ ಮ್ಯಾನೇಜ್ಮೆಂಟ್ ಸೊಲ್ಯೂಷನ್ಸ್ ಸಂಸ್ಥೆಯ ನವೀನ್ ಕುಮಾರ್ ಉದ್ಯೋಗ ಮೇಳದ ಕುರಿತು ಮಾಹಿತಿ ನೀಡಿದರು.