ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಯುವ ಜನತೆ ಸುಶಿಕ್ಷಿತರಾಗಿ ಉತ್ತಮ ಕೆಲಸ ಹಾಗೂ ಉತ್ತಮ ವೇತನ ಪಡೆಯುವ ಜತೆಗೆ ಉನ್ನತ ಆದರ್ಶಗಳನ್ನು ಹೊಂದಿ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿ, ಉತ್ತಮ ನಾಗರಿಕರಾಗುವ ಅಗತ್ಯವಿದೆ ಎಂದು ಪಶ್ಚಿಮ ಬಂಗಾಳದ ರಾಮಕೃಷ್ಣ ಮಠ ಹಾಗೂ ರಾಮಕೃಷ್ಣ ಮಿಷನ್ ಉಪಾಧ್ಯಕ್ಷ ಶ್ರೀಮತ್ ಸ್ವಾಮಿ ಸುಹಿತಾನಂದಜಿ ಮಹಾರಾಜ್ ಕರೆ ನೀಡಿದ್ದಾರೆ.ಮಂಗಳೂರಿನ ರಾಮಕೃಷ್ಣ ಮಿಷನ್ ಅಮೃತ ಮಹೋತ್ಸವ ಪ್ರಯುಕ್ತ ಶನಿವಾರ ನಡೆದ ‘ಪ್ರಜ್ಞಾ’- ವೃತ್ತಿಪರ ವಿದ್ಯಾರ್ಥಿಗಳ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.ಮಂಗಳೂರು ರಾಮಕೃಷ್ಣ ಮಠವು ಸ್ವಚ್ಛತೆಯ ಜತೆಗೆ ಜನರಲ್ಲಿ ಉತ್ತಮ ಚಿಂತನೆಗಳನ್ನು ಮೂಡಿಸುವ ಮೂಲಕ ಹೊಸ ಆಯಾಮ ನೀಡಿದೆ. ವಿದ್ಯಾರ್ಥಿಗಳು, ಪೋಷಕರು, ಸಮಾಜದ ಗಣ್ಯ ವ್ಯಕ್ತಿಗಳನ್ನೊಳಗೊಂಡಂತೆ ಸಜ್ಜನ ನಾಗರಿಕರನ್ನು ಗಮನದಲ್ಲಿಟ್ಟುಕೊಂಡು ಹಲವಾರು ಕಾರ್ಯಗಳನ್ನು ಮಾಡಿದೆ. ಈ ಕಾರ್ಯಗಳು ಇದೇ ರೀತಿ ಮುಂದುವರಿಯಲಿ ಎಂದು ಆಶಿಸಿದರು.
ಮುಖ್ಯ ಅತಿಥಿ, ಎಂಆರ್‌ಪಿಎಲ್- ಒಎನ್‌ಜಿಸಿ ಕಾರ್ಯ ನಿರ್ವಾಹಕ ನಿರ್ದೇಶಕ ಬಿ.ಎಚ್.ವಿ. ಪ್ರಸಾದ್ ಮಾತನಾಡಿ, ಧನಾತ್ಮಕ ಮನೋಭಾವ ಮತ್ತು ಧನಾತ್ಮಕ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ಇದು ನಮ್ಮ ಜೀವನವನ್ನು ನಿರ್ಧರಿಸುತ್ತದೆ. ಯಶಸ್ವಿ ವ್ಯಕ್ತಿಗಳ ಜೀವನವನ್ನು ನೋಡಿದಾಗ ಅವರ ಯಶಸ್ಸಿನ ರಹಸ್ಯ ಇದೇ ಆಗಿರುತ್ತದೆ. ಸ್ವಚ್ಛ ಮಂಗಳೂರು ಅಭಿಯಾನವು ಎಂಆರ್‌ಪಿಎಲ್ ಸಂಸ್ಥೆಯ ಸಹಯೋಗದೊಂದಿಗೆ ಅತ್ಯಂತ ಯಶಸ್ವಿಯಾಗಿ ನಡೆದಿದೆ, ಇದರ ಕೀರ್ತಿ ರಾಮಕೃಷ್ಣ ಮಿಷನ್‌ಗೆ ಸಲ್ಲಬೇಕು ಎಂದು ಹೇಳಿದರು.ಉದ್ಘಾಟನಾ ಸಮಾರಂಭದ ನಂತರ ಸಂಪನ್ಮೂಲ ವ್ಯಕ್ತಿಗಳಿಂದ ಭಾಷಣ ಹಾಗೂ ಸಂವಾದ ನಡೆಯಿತು. ಮೈಸೂರಿನ ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆ ಸಂಚಾಲಕ ಸ್ವಾಮಿ ಮಹಾಮೇಧಾನಂದಜಿ ಮೊದಲ ಅವಧಿಯನ್ನು ನಡೆಸಿಕೊಟ್ಟರು. ಎರಡನೇ ಅವಧಿಯಲ್ಲಿ ಬೆಂಗಳೂರಿನ ಮನಸ್ ತರಬೇತಿ ಕೇಂದ್ರದ ನಿರ್ದೇಶಕ ಪ್ರೊ.ಕೆ. ರಘೋತ್ತಮ ರಾವ್ ಮಾತನಾಡಿದರು. “ವೃತ್ತಿಜೀವನದ ಯಶಸ್ಸನ್ನು ಸಮುದಾಯ ಸೇವೆಯೊಂದಿಗೆ ಸಮತೋಲನಗೊಳಿಸುವುದು” ಎಂಬ ವಿಷಯದ ಕುರಿತಾಗಿ ನಡೆದ ಸಂವಾದದಲ್ಲಿ ಮಂಗಳೂರಿನ ಸೆಂಟರ್ ಫಾರ್ ಅಡ್ವಾನ್ಸ್ಡ್ ಲರ್ನಿಂಗ್‌ನ ಸಂಶೋಧನಾ ನಿರ್ದೇಶಕಿ ಡಾ.ಸ್ಮಿತಾ ಹೆಗ್ಡೆ, ಮಂಗಳೂರಿನ ಬಿಎಎಸ್‌ಎಫ್ ಇಂಡಿಯಾ ಪ್ರೈ.ಲಿ. ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಸಂತೋಷ್ ಪೈ, ಎಸ್ ಕ್ಯೂಬ್ ಗ್ರೂಪ್ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಶಶಾಂಕ್ ಶೆಟ್ಟಿ ಭಾಗವಹಿಸಿದ್ದರು.
ಸ್ವಚ್ಛ ಮಂಗಳೂರು ಅಭಿಯಾನದ ಮುಖ್ಯ ಸಂಯೋಜಕ ರಂಜನ್ ಬೆಳ್ಳರ್ಪ್ಪಾಡಿ ಸಂವಾದ ಕಾರ್ಯಕ್ರಮ ನಿರ್ವಹಿಸಿದರು. ನಿವೃತ್ತ ಯೋಧ ಕ್ಯಾ.ಗಣೇಶ್ ಕಾರ್ಣಿಕ್ ಸ್ವಾಗತಿಸಿದರು. ಭಾರತೀಯ ಸೇನೆಯ ನಿವೃತ್ತ ಯೋಧ ಬೆಳ್ಳಾಲ ಗೋಪಿನಾಥ್ ರಾವ್ ವಂದಿಸಿದರು. ರೆಜಿನಾ ದಿನೇಶ್ ನಿರೂಪಿಸಿದರು.ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗದಿಂದ 10 ಕಾಲೇಜುಗಳ ಸುಮಾರು 700ಕ್ಕೂ ಹೆಚ್ಚು ಸ್ನಾತಕೋತ್ತರ ವಿದ್ಯಾರ್ಥಿಗಳು ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು.