ಸಾರಾಂಶ
ಎಸ್.ಎಲ್. ಭೈರಪ್ಪ ಅವರಿಗೂ ಉಡುಪಿಯ ಅಷ್ಟಮಠಗಳಿಗೆ ಅವಿನಾಭಾವ ಸಂಬಂಧವಿತ್ತು. ಉಡುಪಿ ಕೃಷ್ಣಮಠಕ್ಕೆ ಅವರು ವೈಯಕ್ತಿಕವಾಗಿ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅನೇಕ ಬಾರಿ ಬಂದಿದ್ದರು.
ಕನ್ನಡಪ್ರಭ ವಾರ್ತೆ ಉಡುಪಿ
ಕೃಷ್ಣನನ್ನು ಪುರಾಣಗಳಲ್ಲಿ ಮನರಂಜನೆಯ ಪವಾಡಪುರುಷನನ್ನಾಗಿ ತೋರಿಸಲಾಗಿದೆ. ಆದರೆ ಕೇವಲ ಪವಾಡ ಪುರುಷನ್ನಾಗಿರಲಿಲ್ಲ, ಆತನೊಬ್ಬ ರಾಜತಾಂತ್ರಿಕ, ತತ್ವಜ್ಞಾನಿ, ಮಹಾದಾರ್ಶನಿಕನಾಗಿದ್ದಾನೆ, ಭಾರತಕ್ಕೆ ಇಂದು ಆತನ ಈ ಆದರ್ಶಗಳ ಅತ್ಯಗತ್ಯವಿದೆ, ಆತನ ಈ ಆದರ್ಶಗಳು ಅಧ್ಯಯನ ಮಾಡಬೇಕು ಮತ್ತು ಅದರಂತೆ ನಡೆದುಕೊಳ್ಳುವವರು ಬೇಕು ಎಂದು ಖ್ಯಾತ ಕಾದಂಬರಿಕಾರ ಪದ್ಮಭೂಷಣ ಎಸ್.ಎಲ್. ಭೈರಪ್ಪ 2024ರ ಆ.24ರಂದು ಉಡುಪಿಯ ಕೃಷ್ಣಮಠದ ರಾಜಾಂಗಣದಲ್ಲಿ ಹೇಳಿದ್ದರು.ಹಾಲಿ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗಣೇಂದ್ರ ತೀರ್ಥ ಶ್ರೀಪಾದರ ಆಹ್ವಾನದ ಮೇರೆಗೆ ಭೈರಪ್ಪ ಅವರು ಶ್ರೀ ಕೃಷ್ಣ ಜನ್ಮಾಷ್ಟಮಿ ಸಪ್ತೋತ್ಸವದ ಸಮಾರೋಪದಲ್ಲಿ ಭಾಗವಹಿಸಿದ್ದರು. ಅಂದು ಅವರು ಕೃಷ್ಣ ಮತ್ತು ಭಗವದ್ಗೀತೆಯ ಬಗ್ಗೆ ಮಾತನಾಡಿದ್ದರು.ಭೈರಪ್ಪ ಅವರಿಗೂ ಉಡುಪಿಯ ಅಷ್ಟಮಠಗಳಿಗೆ ಅವಿನಾಭಾವ ಸಂಬಂಧವಿತ್ತು. ಉಡುಪಿ ಕೃಷ್ಣಮಠಕ್ಕೆ ಅವರು ವೈಯಕ್ತಿಕವಾಗಿ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅನೇಕ ಬಾರಿ ಬಂದಿದ್ದರು.2002ರಲ್ಲಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು 4ನೇ ಪರ್ಯಾಯೋತ್ಸವದಲ್ಲಿ ಭೈರಪ್ಪ ಅವರಿಗೆ ಸನ್ಮಾನ ನಡೆಸಲಾಗಿತ್ತು, ಶ್ರೀಗಳ 5ನೇ ಪರ್ಯಾಯೋತ್ಸವ 2016ರಲ್ಲಿಯೂ ಭೈರಪ್ಪ ಉಡುಪಿಗೆ ಬಂದು ರಾಜಾಂಗಣದಲ್ಲಿ ಸಾಹಿತ್ಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿದ್ದರು.ಕನ್ನಡನಾಡಿನ ಸರ್ವಶ್ರೇಷ್ಠ ಕೋಟ ಶಿವರಾಮ ಕಾರಂತರ ನೆನಪಿನಲ್ಲಿ ಕೋಟತಟ್ಟು ಗ್ರಾ.ಪಂ. ನೀಡುವ ಕಾರಂತ ಹುಟ್ಟೂರು ಪ್ರಶಸ್ತಿಗೂ ಭೈರಪ್ಪ ಭಾಜನರಾಗಿದ್ದಾರೆ. 2020ರಲ್ಲಿ ಈ ಪ್ರಶಸ್ತಿಯನ್ನು ಕೋವಿಡ್ ಕಾರಣಕ್ಕೆ ಮೈಸೂರಿನಲ್ಲಿರುವ ಭೈರಪ್ಪನವರ ಸ್ವಗೃಹದಲ್ಲಿ ಪ್ರದಾನ ಮಾಡಲಾಗಿತ್ತು.ಉಡುಪಿಯಲ್ಲಿ ಭೈರಪ್ಪ ಅವರು ಕಾದಂಬರಿಗಳಿಗೆ ಭಾರೀ ಸಂಖ್ಯೆಯ ಓದುಗರಿದ್ದಾರೆ, ಜೊತೆಗೆ ಅವರ ಕಾದಂಬರಿಗಳನ್ನು ತಾತ್ವಿಕವಾಗಿ ವಿರೋಧಿಸುವ ಪ್ರಗತಿಪರರೂ ಇದ್ದಾರೆ, ಅವರ ವಿವಾದಿತ ಆವರಣ ಕಾದಂಬರಿಯ ವಿರುದ್ಧ ಪ್ರತಿಭಟನೆಗಳೂ ಉಡುಪಿಯಲ್ಲಿ ನಡೆದಿದ್ದವು.