ಯುಪಿಎಂಸಿ: ನಶಾ ಮುಕ್ತ ಯುವ ಫಾರ್‌ ವಿಕಸಿತ ಭಾರತ ಕಾರ್ಯಕ್ರಮ

| Published : Sep 25 2025, 01:02 AM IST

ಸಾರಾಂಶ

ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ‘ನಶಾ ಮುಕ್ತ ಯುವ ಫಾರ್ ವಿಕಸಿತ ಭಾರತ್’ ಅಂಗವಾಗಿ ಮಾದಕ ದ್ರವ್ಯ ವ್ಯಸನದ ದುಷ್ಪರಿಣಾಮಗಳ ಬಗೆಗಿನ ಅರಿವು ಮೂಡಿಸುವ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು.

ಉಡುಪಿ: ಆನಂದ ಪಡೆಯುವುದೇ ಎಲ್ಲರ ಜೀವನದ ಉದ್ದೇಶ. ಆದರೆ ಆನಂದ ಪಡೆಯಲು ಮಾದಕ ಪದಾರ್ಥಗಳ ಮೊರೆ ಹೋದರೆ ಜೀವನವೇ ನಾಶವಾದಂತೆ ಎಂದು ಬ್ರಹ್ಮಕುಮಾರಿಸ್ ಮಣಿಪಾಲ ಪಟಕದ ಧ್ಯಾನ ಶಿಕ್ಷಕಿ ಬಿ.ಕೆ.ಸೌರಭ ಹೇಳಿದ್ದಾರೆ.

ನಗರ ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಪ್ರಧಾನ ಮಂತ್ರಿಗಳ ‘ನಶಾ ಮುಕ್ತ ಯುವ ಫಾರ್ ವಿಕಸಿತ ಭಾರತ್’ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಲಾಗಿದ್ದ ಮಾದಕ ದ್ರವ್ಯ ವ್ಯಸನದ ದುಷ್ಪರಿಣಾಮಗಳ ಬಗೆಗಿನ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಭಾಗವಹಿಸಿದ್ದರು.

ಮಾದಕ ಪದಾರ್ಥ ಸೇವನೆಯನ್ನು ಯಾವುದೇ ಕಾರಣಕ್ಕಾಗಿ ಆರಂಬಿಸಿದರೂ ಕ್ರಮೇಣ ಅದು ಚಟವಾಗಿ ಬೆಳೆದು ಅದರ ಸೇವನೆಯ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗಿ ಆ ವ್ಯಕ್ತಿಯ ಜೀವನವನ್ನೆ ಸರ್ವನಾಶ ಮಾಡುತ್ತದೆ ಹಾಗಾಗಿ ಧ್ಯಾನ ಹಾಗೂ ಇನ್ನಿತರ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಇಂತಹ ದುಶ್ಚಟಗಳಿಂದ ಪಾರಾಗಬೇಕು ಎಂಬುದಾಗಿ ಅವರು ತಿಳಿಸಿದರು.

ಮದ್ಯ ಹಾಗೂ ಮಾದಕ ದ್ರವ್ಯ ವ್ಯಸನಿಗಳಾಗದಂತೆ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದ ಅವರು, ಸ್ವದೇಶಿ ವಸ್ತುಗಳನ್ನು ಮಾತ್ರ ಉಪಯೋಗಿಸುವೆವೆಂಬುದಾಗಿಯೂ ಸಹ ವಿದ್ಯಾರ್ಥಿಗಳಿಂದ ಪ್ರತಿಜ್ಞೆ ಮಾಡಿಸಿದರು.

ಉಡುಪಿಯ ಖ್ಯಾತ ಜಾದೂಗಾರರಾದ ಪ್ರೊಫೆಸರ್ ಶಂಕರ್ ಜಾದೂ ಪ್ರದರ್ಶನದ ಮೂಲಕ ವಿದ್ಯಾರ್ಥಿಗಳಲ್ಲಿ ಮಾದಕ ದ್ರವ್ಯಗಳ ದುಪ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿದರು.

ಕಾಲೇಜಿನ ಪ್ರಾಚಾರ್ಯೆ ಆಶಾ ಕುಮಾರಿ ಅಧ್ಯಕ್ಷತೆ ವಹಿಸಿದ್ದರು, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ರಾಜೇಶ್ ಕುಮಾರ್ ಉಪಸ್ಥಿತರಿದ್ದರು. ಸಹಯೋಜನಾಧಿಕಾರಿ ಚಂದ್ರಶೇಖರ್ ಸ್ವಾಗತಿಸಿದರು. ಸನ್ನಿಧಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.