ಉಡುಪಿ: ಸಾಫಲ್ಯ ಟ್ರಸ್ಟ್‌ನಿಂದ ಸಾಂಸ್ಕೃತಿಕ, ಸನ್ಮಾನ ಕಾರ್ಯಕ್ರಮ

| Published : May 21 2024, 12:31 AM IST

ಉಡುಪಿ: ಸಾಫಲ್ಯ ಟ್ರಸ್ಟ್‌ನಿಂದ ಸಾಂಸ್ಕೃತಿಕ, ಸನ್ಮಾನ ಕಾರ್ಯಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಶೇ.100 ಫಲಿತಾಂಶ ಬಂದ ಉಡುಪಿಯ ಮಹಿಳಾ ಕಾಲೇಜಿನ ಮುಖ್ಯಸ್ಥೆ ಇಂದಿರಾ ಅವರನ್ನು ಸನ್ಮಾನಿಸಲಾಯಿತು. ನಂತರ ಸಾಫಲ್ಯ ಯಕ್ಷಗಾನ ಮಹಿಳಾ ಬಳಗದವರಿಂದ ರುದ್ರಕೋಪ ಯಕ್ಷಗಾನ ಪ್ರದರ್ಶನ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ಸಾಫಲ್ಯ ಟ್ರಸ್ಟ್ ವತಿಯಿಂದ ಉಡುಪಿಯ ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಯೋಗಸಾಧಕರಿಗೆ ಸನ್ಮಾನ ಸಮಾರಂಭ ಶನಿವಾರ ನಡೆಯಿತು. ಕಾರ್ಯಕ್ರಮವನ್ನು ಹಿರಿಯ ಯೋಗ ಶಿಕ್ಷಕಿ ಶೋಭಾ ಸುರೇಶ್ ಶೆಟ್ಟಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಸರಿಯಾದ ಕ್ರಮ ಅನುಸರಿಸಿ ಯೋಗವನ್ನು ದಿನಚರಿಯಲ್ಲಿ ಅಳವಡಿಸಿಕೊಂಡರೆ ಉತ್ತಮ ಆರೋಗ್ಯ ಜೀವನ ನಡೆಸಬಹುದು ಎಂದು ಅನೇಕ ಉದಾಹರಣೆಗಳ ಮೂಲಕ ವಿವರಿಸಿದರು. ಸಾಫಲ್ಯ ಟ್ರಸ್ಟ್ ಸಾಮಾಜಿಕ ಚಿಂತನೆ ಮತ್ತು ಅಗತ್ಯವಿರುವವರಿಗೆ ಮಾಡುವ ಸಹಾಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಟ್ರಸ್ಟ್ ಅಧ್ಯಕ್ಷೆ ರತ್ನ ಅಶೋಕ್ ಶೆಟ್ಟಿ ಮಾತನಾಡಿ, ತಮಗೆ ಯೋಗ ಕಲಿಸಿದ ಯೋಗ ಗುರು ಶೋಭಾ ಎಸ್. ಶೆಟ್ಟಿ ಅವರಿಗೆ ಸನ್ಮಾನಿಸಿರುವುದರಿಂದ ಜೀವನ ಸಾರ್ಥಕವಾಯಿತು ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರಂಜನಾ ಶ್ರೀಧರ್ ಶೆಟ್ಟಿ ಮಾತನಾಡಿ, ಸುಮಾರು 40 ಸಮಾನ ಮನಸ್ಕ ಮಹಿಳೆಯರಿಂದ ಪ್ರಾರಂಭವಾದ ಸಾಫಲ್ಯ ಟ್ರಸ್ಟ್ ಇಲ್ಲಿಯವರೆಗೆ ಸುಮಾರು 500ಕ್ಕೂ ಅಧಿಕ ಸಮಾಜಮುಖಿ ಕೆಲಸಗಳನ್ನು ಮಾಡಿರುವ ಬಗ್ಗೆ ಎಲ್ಲ ಸದಸ್ಯರಿಗೂ ಅಭಿನಂದನೆ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಶೇ.100 ಫಲಿತಾಂಶ ಬಂದ ಉಡುಪಿಯ ಮಹಿಳಾ ಕಾಲೇಜಿನ ಮುಖ್ಯಸ್ಥೆ ಇಂದಿರಾ ಅವರನ್ನು ಸನ್ಮಾನಿಸಲಾಯಿತು. ನಂತರ ಸಾಫಲ್ಯ ಯಕ್ಷಗಾನ ಮಹಿಳಾ ಬಳಗದವರಿಂದ ರುದ್ರಕೋಪ ಯಕ್ಷಗಾನ ಪ್ರದರ್ಶನ ನಡೆಯಿತು.

ಈ ಕಾರ್ಯಕ್ರಮದಲ್ಲಿ ಸಾಫಲ್ಯ ಟ್ರಸ್ಟ್‌ ಖಜಾಂಚಿ ಕಲಾ ಅಶೋಕ್ ಹೆಗ್ಡೆ, ಟ್ರಸ್ಟ್ ಪ್ರವರ್ತಕರಾದ ನಿರುಪಮಾ ಪ್ರಸಾದ್ ಶೆಟ್ಟಿ, ಶಮಿಳಾ ಹೆಗ್ಡೆ, ಟ್ರಸ್ಟ್ ಸಾರ್ವಜನಿಕ ಸಂಪರ್ಕಾಧಿಕಾರಿ ಕವಿತಾ ನವೀನ್ ಬಲ್ಲಾಳ್, ತಾರಾದೇವಿ, ಆಶಾ ಪಿ. ಶೆಟ್ಟಿ, ಅನುರಿತಾ ಕೀರ್ತಿ ಹೆಗ್ಡೆ ಉಪಸ್ಥಿತರಿದ್ದರು.