ತುಂಗಭದ್ರಾ ಅಣೆಗೆ ಶೂನ್ಯ ಒಳಹರಿವು

| Published : May 21 2024, 12:31 AM IST

ಸಾರಾಂಶ

ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು, ರಾಜ್ಯದ ವಿವಿಧ ಜಲಾಶಯಗಳಲ್ಲಿ ನೀರಿನ ಒಳಹರಿವು ಹೆಚ್ಚಳವಾಗುತ್ತಿದ್ದರೆ ಇಲ್ಲಿನ ತುಂಗಭದ್ರಾ ಜಲಾಶಯಕ್ಕೆ ಇನ್ನೂ ಆ ಭಾಗ್ಯವಿಲ್ಲ.

ಪ್ರಸಕ್ತ ಸಾಲಿನಲ್ಲಿ ಜಲಾಶಯಕ್ಕೆ ಭಾರಿ ನೀರಿನ ಕೊರತೆ

ಕೇವಲ 3.3 ಟಿಎಂಸಿ ನೀರು ಸಂಗ್ರಹ, ಹೆಚ್ಚಿದ ಆತಂಕಎಸ್.ನಾರಾಯಣ

ಕನ್ನಡಪ್ರಭ ವಾರ್ತೆ ಮುನಿರಾಬಾದ್‌

ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು, ರಾಜ್ಯದ ವಿವಿಧ ಜಲಾಶಯಗಳಲ್ಲಿ ನೀರಿನ ಒಳಹರಿವು ಹೆಚ್ಚಳವಾಗುತ್ತಿದ್ದರೆ ಇಲ್ಲಿನ ತುಂಗಭದ್ರಾ ಜಲಾಶಯಕ್ಕೆ ಇನ್ನೂ ಆ ಭಾಗ್ಯವಿಲ್ಲ.

ಪ್ರಸಕ್ತ ಸಾಲಿನಲ್ಲಿ ಇದುವರೆಗೆ ಜಲಾಶಯಕ್ಕೆ ಒಂದು ಹನಿ ನೀರಿನ ಒಳಹರಿವು ಇಲ್ಲ. ತುಂಗಭದ್ರಾ ಜಲಾಶಯ ಅಕ್ಷರಶಃ ಕೆರೆಯಂತಾಗಿದೆ. ತನ್ನ ಒಡಲಲ್ಲಿ 105 ಟಿಎಂಸಿ ನೀರನ್ನು ಇಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದ್ದರೂ ಇಂದಿನ ನೀರಿನ ಮಟ್ಟ 1577.53 ಅಡಿಗೆ ಇಳಿದಿದೆ. ಜಲಾಶಯದಲ್ಲಿ 3.3 ಟಿಎಂಸಿ ನೀರು ಸಂಗ್ರಹವಿದೆ. ಜಲಾಶಯದಲ್ಲಿ ನೀರಿನ ಅಭಾವ ಇದ್ದ ಹಿನ್ನೆಲೆ ರೈತರ ಒಂದು ಬೆಳೆಗೆ ಮಾತ್ರ ನೀರು ನೀಡಲಾಗಿದೆ.

ಕಳೆದ ವರ್ಷ ಮೇ 12ರಿಂದಲೇ ತುಂಗಭದ್ರಾ ಜಲಾಶಯಕ್ಕೆ ನೀರಿನ ಒಳಹರಿವು ಪ್ರಾರಂಭವಾಯಿತು. ಆದರೆ, ಈ ವರ್ಷ ಬೇಸಿಗೆಯಲ್ಲಿ ಉತ್ತಮ ಮಳೆಯಾದರೂ ತುಂಗಭದ್ರಾ ಜಲಾಶಯಕ್ಕೆ ಒಂದು ಹನಿ ನೀರೂ ಬಂದಿಲ್ಲ. ಇದು ರೈತರನ್ನು ಆತಂಕಕ್ಕೆ ದೂಡಿದೆ.

ಸಂಪೂರ್ಣವಾಗಿ ಬತ್ತಿದ ನದಿ:

ರಾಜ್ಯದಲ್ಲಿ ಉತ್ತಮ ಮಳೆಯಾಗಿ ವಿವಿಧ ನದಿಗಳು ಹಳ್ಳ, ಕೊಳ್ಳ, ಕೆರೆಗಳ ಒಳ ಹರಿವು ಹೆಚ್ಚುತ್ತಿದೆ. ಆದರೆ ತುಂಗಭದ್ರಾ ಜಲಾಶಯ ಹಾಗೂ ನದಿ ನೀರಿನ ಕೊರೆತೆಯಿಂದ ಬತ್ತಿ ಹೋಗಿದೆ.

ನದಿ ಪಾತ್ರದಲ್ಲಿ ಪುಣ್ಯ ಕ್ಷೇತ್ರಗಳಾದ ಹುಲಿಗೆಮ್ಮ ದೇವಿ, ಶಿವಪುರ ಮಾರ್ಕೆಂಡೇಶ್ವರ ಸ್ವಾಮಿ, ಹಂಪೆಯ ಶ್ರೀ ವಿರೂಪಾಕ್ಷ ಸ್ವಾಮಿ, ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ, ಇವುಗಳ ಪಕ್ಕದಲ್ಲಿ ಹರಿದುಹೋಗುತ್ತಿರುವ ತುಂಗಭದ್ರಾ ನದಿಯು ಸಂಪೂರ್ಣವಾಗಿ ಬತ್ತಿಹೋದ ಹಿನ್ನೆಲೆಯಲ್ಲಿ ಈ ಮೇಲಿನ ಪುಣ್ಯ ಕ್ಷೇತ್ರಗಳಿಗೆ ಆಗಮಿಸುತ್ತಿರುವ ಸಹಸ್ರಾರು ಭಕ್ತರಿಗೆ ನದಿ ಸ್ನಾನ ಮಾಡಲು ಸಾಧ್ಯವಾಗುತ್ತಿಲ್ಲ.

ತುಂಗಭದ್ರಾ ಜಲಾಶಯದಲ್ಲಿ ನೀರಿನ ಒಳಹರಿವು ಹೆಚ್ಚಳವಾದರೆ ಸುದ್ದಿಯಾಗುತ್ತದೆ. 2020-21ರಲ್ಲಿ ಜಲಾಶಯದ ಇತಿಹಾಸದಲ್ಲಿ 1,33,000 ಕ್ಯುಸೆಕ್‌ ನೀರು ಹರಿದು ಬಂದಿತ್ತು. ಆದರೆ ಪ್ರಸಕ್ತ ಸಾಲಿನಲ್ಲಿ ಜಲಾಶಯದ ಒಳಹರಿವು ಶೂನ್ಯವಾಗಿದ್ದು, ಇದು ಅಚ್ಚುಕಟ್ಟು ಪ್ರದೇಶದ ರೈತರ ನಿದ್ದೆಗೆಡಿಸಿದೆ. ಈ ಭಾಗದ ರೈತರು ವರುಣನ ಕೃಪೆಗಾಗಿ ಕಾಯುತ್ತಿದ್ದಾರೆ.

ಹಿಂಗಾರು ಬೆಳಗೆ ನೀರಿನ ಕೊರತೆ:

ತುಂಗಭದ್ರಾ ಜಲಾಶಯದಲ್ಲಿ 28 ಟಿಎಂಸಿಯಷ್ಟು ಹೂಳು ತುಂಬಿದ ಹಿನ್ನೆಲೆ ನೀರಿನ ಶೇಖರಣೆ ಮಟ್ಟ 133 ಟಿಎಂಸಿಯಿಂದ 105 ಟಿಎಂಸಿಗೆ ಕುಸಿದಿದೆ. ಇದರಿಂದ ಪ್ರತಿವರ್ಷ ಅಚ್ಚುಕಟ್ಟು ಪ್ರದೇಶದ ರೈತರ ಹಿಂಗಾರು ಬೆಳಗೆ ನೀರಿನ ಕೊರತೆ ಉಂಟಾಗುತ್ತಿದೆ. ಇದಕ್ಕೆ ಕೃಷ್ಣ ಮತ್ತು ತುಂಗಭದ್ರ ನದಿಗಳ ಜೋಡಣೆಯೇ ಏಕೈಕ ಪರಿಹಾರ ವಾಗಿದೆ. ಆದರೆ ಮಾತ್ರ ರೈತರ ಗದ್ದೆಗಳಿಗೆ ಹಿಂಗಾರು ಬೆಳಗೆ ನೀರಿನ ಕೊರತೆ ಇರುವುದಿಲ್ಲ ಎಂದು ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಅಮರೇಶ್ ಚಾಗ್ಭಾವಿ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.