ಸಾರಾಂಶ
ಹೊಸಪೇಟೆ: ಲೋಕಸಭೆ ಚುನಾವಣೆಯಲ್ಲಿ ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವು ₹300 ಕೋಟಿಗೂ ಅಧಿಕ ಹಣವನ್ನು ಖರ್ಚು ಮಾಡಿದೆ ಎಂದು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಆರೋಪಿಸಿದರು.
ನಗರದ ಬಿಜೆಪಿ ಕಾರ್ಯಾಲಯದಲ್ಲಿ ಸೋಮವಾರ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.ಲೋಕಸಭಾ ಚುನಾವಣೆ ವೇಳೆ ಗ್ಯಾರಂಟಿ ಹೆಸರಿನಲ್ಲಿ ಮಹಿಳೆಯರಿಗೆ ಒಂದೇ ಸಲಕ್ಕೆ ₹೬ ಸಾವಿರ ಅವರ ಖಾತೆಗೆ ಹಾಕಿದ್ದಾರೆ. ಆದರೂ ಕಾಂಗ್ರೆಸ್‌ಗೆ ಮತ ಬೀಳುವುದಿಲ್ಲ ಎಂಬ ಕಾರಣಕ್ಕೆ ಪ್ರತಿ ಮತಕ್ಕೆ ಹಣ ನೀಡಿ ಆಮಿಷ ಒಡ್ಡಿದ್ದಾರೆ. ಕೆಲ ಕ್ಷೇತ್ರದಲ್ಲಿ ₹೩೦೦ ಕೋಟಿ ಖರ್ಚು ಮಾಡಿರುವ ಮಾಹಿತಿ ಸಿಕ್ಕಿದೆ. ಇಷ್ಟಾದರೂ ಕಾಂಗ್ರೆಸ್‌ಗಿಂತ ಬಿಜೆಪಿಯೇ ಅತಿಹೆಚ್ಚು ಕ್ಷೇತ್ರದಲ್ಲಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಯಾವುದೇ ಕಾರಣಕ್ಕೂ ಕಾಂಗ್ರೆಸ್‌ಗೆ ಮತ ಹಾಕದಂತೆ ನೋಡಿಕೊಂಡು ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್ ಅವರನ್ನು ಗೆಲ್ಲಿಸುವ ಕೆಲಸ ಮಾಡೋಣ ಎಂದು ಮನವಿ ಮಾಡಿದರು.ಮಾಜಿ ಸಚಿವ ಬಿ.ಶ್ರೀರಾಮುಲು ಮಾತನಾಡಿ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಲ್ಲಿ ಸಾವಿರಾರು ಕೋಟಿ ಅನುದಾನ ಇದೆ. ಆ ಅನುದಾನ ಕೇವಲ ಎರಡ್ಮೂರು ಜಿಲ್ಲೆಗೆ ಬಳಕೆಯಾಗುತ್ತಿದೆ. ಅದನ್ನು ತಪ್ಪಿಸಿ ಕಕ ಭಾಗದ ಎಲ್ಲ ಜಿಲ್ಲೆಗಳಿಗೂ ಸಮನವಾಗಿ ಹಂಚಿಕೆಯಾಗುವಂತೆ ಮಾಡುವ ಮೂಲಕ ಈ ಭಾಗವನ್ನು ಉದ್ಧಾರ ಮಾಡಲು ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್ ಗೆಲ್ಲಿಸೋಣ ಎಂದರು.
ಪದವೀಧರ ಕ್ಷೇತ್ರದ ಅಭ್ಯರ್ಥಿ ಅಮರನಾಥ ಪಾಟೀಲ್ ಮಾತನಾಡಿ, ಈ ಬಾರಿ ತಾವೆಲ್ಲ ಇಡೀ ಕ್ಷೇತ್ರದಲ್ಲಿ ಪ್ರವಾಸ ಮಾಡಿ ಪ್ರಥಮ ಪ್ರಾಶಸ್ತ್ಯದ ಮತ ಹಾಕಿಸಿ ಗೆಲ್ಲಿಸಬೇಕೆಂದು ಮನವಿ ಮಾಡಿಕೊಂಡರು.ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್ ಮಾತನಾಡಿ, ಪಕ್ಷದ ಅಭ್ಯರ್ಥಿ ಅಮರನಾಥ ಪಾಟೀಲ್ ಅವರನ್ನು ಗೆಲ್ಲಿಸಿ ವಿಧಾನ ಪರಿಷತ್‌ಗೆ ಕಳುಹಿಸಬೇಕು. ಜಿಲ್ಲೆಯ ಎಲ್ಲ ತಾಲೂಕುಗಳಿಗೆ ತಂಡಗಳಾಗಿ ತೆರಳಿ ಅಭ್ಯರ್ಥಿಗೆ ಪ್ರಥಮ ಪ್ರಾಶಸ್ತ್ಯದ ಮತ ಹಾಕಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗೋಣ ಎಂದು ಮನವಿ ಮಾಡಿದರು.
ಮುಖಂಡರಾದ ಬಂಗಾರು ಹನುಮಂತು, ಅಯ್ಯಾಳಿ ತಿಮ್ಮಪ್ಪ, ವಿಭಾಗ ಸಂಘಟನಾ ಕಾರ್ಯದರ್ಶಿ ಎಚ್.ಪೂಜಪ್ಪ, ಚಂದ್ರಶೇಖರ ಪಾಟೀಲ ಹಲಗೇರಿ, ಓದೋಗಂಗಪ್ಪ, ಸಂಜೀವರೆಡ್ಡಿ, ಬಲ್ಲಾಹುಣ್ಸಿ ರಾಮಣ್ಣ, ಕಿಚಿಡಿ ಕೊಟ್ರೇಶ್, ಕೆ.ಎಲ್. ಮಹೇಶ್ವರಸ್ವಾಮಿ, ಸಿದ್ಧಾರ್ಥ ಸಿಂಗ್, ಜಿಲ್ಲಾ ಮಾಧ್ಯಮ ಸಂಚಾಲಕ ಬಸವರಾಜ ಕರ್ಕಿಹಳ್ಳಿ, ಸಹ ಸಂಚಾಲಕ ಬಿ. ಶಂಕರ್, ಮಂಡಲ ಅಧ್ಯಕ್ಷ ಶಂಕರ್ ಮೇಟಿ, ಸಾಲಿ ಸಿದ್ದಯ್ಯಸ್ವಾಮಿ ಹಾಗೂ ಶಿವಶಂಕರ್ ಇತರರಿದ್ದರು.