ಸಾರಾಂಶ
ಹಾನಗಲ್ಲ: ಸಂಗೀತ ಹಾಗೂ ಸಾಹಿತ್ಯಕ್ಕೆ ಸತ್ವಯುತವಾದ ಬದುಕಿಗೆ ಶಕ್ತಿ ತುಂಬುವ ಎಲ್ಲ ಲಕ್ಷಣಗಳಿದ್ದು, ಅರ್ಥಪೂರ್ಣವಾಗಿ ಇವನ್ನು ಬಳಸಿಕೊಳ್ಳುವ ಇಚ್ಛಾಶಕ್ತಿ ಈಗ ಬೇಕಾಗಿದೆ. ಹಾನಗಲ್ಲು ಗಾನಗಂಗೆಯ ಪುಣ್ಯಭೂಮಿ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲಿಂಗಯ್ಯ ಹಿರೇಮಠ ತಿಳಿಸಿದರು.ಸೋಮವಾರ ಹಾನಗಲ್ಲಿನ ಶ್ರೀ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಸಾಹಿತಿ ಕಲಾವಿದರ ಬಳಗ ಸಂಯುಕ್ತವಾಗಿ ಆಯೋಜಿಸಿದ ಸುವರ್ಣ ಕರ್ನಾಟಕ ಸಂಭ್ರಮಾಚರಣೆ-೭ ಕಾರ್ಯಕ್ರಮದ ಅಂಗವಾಗಿ ನಡೆದ ಗಾನ ಲೋಕ ವಿಸ್ತರಿಸಿದ ಗಾನ ಗಂಧರ್ವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ, ಸಂಗೀತ ಕಲೆಗಳ ಸರಿಯಾದ ಇತಿಹಾಸವನ್ನು ತಿಳಿಯಬೇಕಾಗಿದೆ. ಮನಸ್ಸು ಬುದ್ಧಿ ವಿವೇಕಗಳಿಗೆ ಶಕ್ತಿ ತುಂಬುವ ಸಂಗೀತ, ಸಾಹಿತ್ಯ, ಕಲೆ ನಮ್ಮ ಜೀವನದ ಭಾಗವಾಗಬೇಕು ಎಂದರು.ಸಾಹಿತಿ ಸತೀಶ ಕುಲಕರ್ಣಿ ಮುಖ್ಯ ಅತಿಥಿಯಾಗಿ ಮಾತನಾಡಿ, ಉತ್ತಮ ಕೆಲಸ ಮಾಡಿದವರು, ಸಮಾಜದ ನಡುವೆ ಸಾಧಕರಾದವರು ಹಾಗೂ ಪ್ರತಿಭಾವಂತರನ್ನು ಪ್ರಶಂಶಿಸಿ ಪ್ರೋತ್ಸಾಹಿಸುವ ಅಗತ್ಯವಿದೆ. ನಮ್ಮ ನೆಲದ ಸಾಹಿತ್ಯ, ಸಂಸ್ಕೃತಿಯ ಸತ್ವ ಹಾಗೂ ಶಕ್ತಿಯನ್ನು ಬರುವ ಪೀಳಿಗೆಗೆ ಸರಿಯಾಗಿ ತಿಳಿಸಿಕೊಡುವ ಕಾರ್ಯ ನಡೆಯಬೇಕು. ಶಾಲೆ ಕಾಲೇಜುಗಳು ಸಾಂಸ್ಕೃತಿ ಕ ಕೇಂದ್ರಗಳಂತೆ ತೆರೆದುಕೊಳ್ಳಬೇಕು ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಡಾ.ಎನ್. ಸದಾಶಿವಪ್ಪ, ಮೌಲ್ಯಯುತ ಜೀವನದ ಮಾರ್ಗದರ್ಶನಕ್ಕೆ ಸಾಹಿತ್ಯವನ್ನು ವಿಫುಲವಾಗಿ ಬಳಸಿಕೊಳ್ಳಬೇಕು. ಸಮಾಜ ಸೇವೆಯಲ್ಲಿಯೇ ಇಡೀ ಬದುಕನ್ನು ಸಾರ್ಥಕ ಮಾಡಿಕೊಂಡ ಮಹಾತ್ಮರ ಪರಿಚಯ ಈಗಿನ ಪೀಳಿಗೆಗೆ ಮಾಡಿಸಬೇಕು. ಇಂದಿನ ಸಮಾಜದಲ್ಲಿ ಮಾರ್ಗದರ್ಶನ ಹಾಗೂ ಒಳ್ಳೆಯ ಮಾರ್ಗದರ್ಶಕರ ಕೊರತೆ ಇದೆ ಎಂದರು.ಶಿಕ್ಷಕ ನಿರಂಜನ ಗುಡಿ ಸಂಗೀತದ ಆದಿಪುರುಷ ಪಂ.ಪಂಚಾಕ್ಷರಿ ಗವಾಯಿಗಳವರ ದಿವ್ಯ ಸಂಗೀತ ಸಾಧನೆಯನ್ನು ತಿಳಿಸಿದರು. ಸಾಹಿತಿ ಪ್ರೊ. ಮಾರುತಿ ಶಿಡ್ಲಾಪೂರ ಗಾನಲೋಕ ವಿಸ್ತರಿಸಿದ ಪಂ.ಪುಟ್ಟರಾಜರು ನಾಡು ಕಂಡ ಸಂಗೀತದ ಶಕ್ತಿ. ತ್ರಿಕಾಲ ಪೂಜೆಯ ನಿಷ್ಠರು ಎಂದರು. ಸಾಹಿತಿ ದೀಪಾ ಗೋನಾಳ, ಗಾನಗಂಗೆ ಗಂಗೂಬಾಯಿ ಹಾನಗಲ್ಲ ದಿವ್ಯ ಕಂಠದಿಂದ ಇಡೀ ಜಗತ್ತನ್ನು ಸೆಳೆದ ಸಂಗೀತಗಾರ್ತಿ ಎಂದರು.ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಎಸ್.ಎಸ್. ಬೇವಿನಮರದ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಕೋಶಾಧ್ಯಕ್ಷ ಎಸ್.ಎನ್. ದೊಡ್ಡಗೌಡರ, ಡಾ. ವಿಶ್ವನಾಥ ಬೊಂದಾಡೆ, ರಾಜೇಶ್ವರಿ ತಿರುಮಲೆ, ಬಿ.ಆರ್. ಪಾಟೀಲ, ಶಂಕರ ತುಮ್ಮಣ್ಣನವರ, ಕೆ.ಎಲ್. ದೇಶಪಾಂಡೆ, ಉದಯ ನಾಶಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಅನ್ನಪೂರ್ಣ ಸುಣಗಾರ ಹಾಗೂ ನಂದಿನಿ ಜೋಗಿ ಪ್ರಾರ್ಥನೆ ಹಾಡಿದರು. ಅಮೃತಾ ಸ್ವಾಗತಿಸಿದರು. ಪವಿತ್ರಾ ಹೀರೂರು, ನಾಗಲಕ್ಷ್ಮೀ ಬೇವಿನಮರದ ಕಾರ್ಯಕ್ರಮ ನಿರೂಪಿಸಿದರು.