ಉಡುಪಿ: ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆ ಶೇ 98.18 ಫಲಿತಾಂಶ ಸಾಧಿಸಿದ್ದು ರಾಜ್ಯಕ್ಕೆ 2ನೇ ಸ್ಥಾನ ಪಡೆದುಕೊಂಡಿದೆ. ಕಳೆದ ವರ್ಷ ಶೇ 89.96 ಸಾಧನೆಯೊಂದಿಗೆ ದ್ವಿತೀಯ ಸ್ಥಾನದಲ್ಲಿತ್ತು. ಸರ್ಕಾರದಿಂದ ಮೌಲ್ಯಮಾಪನದಲ್ಲಿ ಸಡಿಲ ನೀತಿಯಿಂದಾಗಿ ಈ ಬಾರಿ ಜಿಲ್ಲೆಯ ಫಲಿತಾಂಶದಲ್ಲಿ ಶೇ 8.22ರಷ್ಟು ಹೆಚ್ಚಳವಾಗಿದೆ. ಜಿಲ್ಲೆಯಲ್ಲಿ ಒಟ್ಟು 13373 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅವರಲ್ಲಿ 13129 (ಶೇ 98.18) ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 6822 ಹುಡುಗರಲ್ಲಿ 6648 (ಶೇ 97.44) ಮಂದಿ ಮತ್ತು 6551 ಹುಡುಗಿಯರಲ್ಲಿ 6481 (ಶೇ 98.93) ಮಂದಿ ತೇರ್ಗಡೆಯಾಗಿದ್ದಾರೆ. ಪ್ರತಿಬಾರಿಯಂತೆ ಹುಡುಗಿಯರೇ ಉತ್ತಮ ಫಲಿತಾಂಶ ಸಾಧಿಸಿದ್ದಾರೆ. ಕನ್ನಡ ಮಾಧ್ಯಮದಲ್ಲಿ 5444 ವಿದ್ಯಾರ್ಥಿಗಳಲ್ಲಿ 5262 (ಶೇ 96.66) ಮತ್ತು ಆಂಗ್ಲ ಮಾಧ್ಯಮದಲ್ಲಿ 7929 ವಿದ್ಯಾರ್ಥಿಗಳಲ್ಲಿ 7867 (ಶೇ 99.22) ಮಂದಿ ತೇರ್ಗಡೆಯಾಗಿದ್ದು, ಆಂಗ್ಲ ಮಾಧ್ಯಮದ ಸಾಧನೆಯೇ ಉತ್ತಮವಾಗಿದೆ. ಗ್ರಾಮೀಣ ಪ್ರದೇಶದ 10,448 ವಿದ್ಯಾರ್ಥಿಗಳಲ್ಲಿ 10256 (ಶೇ 98.16) ಮತ್ತು ನಗರ ಪ್ರದೇಶದ 2925 ವಿದ್ಯಾರ್ಥಿಗಳಲ್ಲಿ 2873 (ಶೇ 98.22) ಮಂದಿ ತೇರ್ಗಡೆಯಾಗಿದ್ದು, ಶೇಕಡವಾರು ನಗರಪ್ರದೇಶದ ವಿದ್ಯಾರ್ಥಿಗಳು ಮುಂದಿದ್ದಾರೆ. ಇನ್ನು ಒಟ್ಟು 179 ಪ್ರೌಢ ಶಾಲೆಗಳು ಶೇ 100 ಫಲಿತಾಂಶ ಗಳಿಸಿದ್ದು, ಅವುಗಳಲ್ಲಿ 70 ಸರ್ಕಾರಿ ಶಾಲೆಗಳಾಗಿವೆ. ಸರ್ಕಾರಿ ಶಾಲೆಗಳು ಒಟ್ಟಾರೇ 97.61, ಅನುದಾನಿತ ಶಾಲೆಗಳು ಶೇ 97.24 ಮತ್ತು ಅನುದಾನರಹಿತ ಶಾಲೆಗಳು ಶೇ 99.39 ಫಲಿತಾಂಶ ಸಾಧಿಸಿವೆ. ತಾಲೂಕುವಾರು ಕಾರ್ಕಳ ಶೇ 99.02, ಕುಂದಾಪುರ ಶೇ 98.59, ಬ್ರಹ್ಮಾವರ ಶೇ 98.26, ಬೈಂದೂರು ಶೇ 97.91 ಮತ್ತು ಉಡುಪಿ ಶೇ 97.21 ಫಲಿತಾಂಶ ಸಾಧನೆಯಾಗಿದೆ.ಉಡುಪಿ ಜಿಲ್ಲೆ ಸಾಧನೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಶ್ಲಾಘನೆಬೆಂಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇಕಡ 98.18 ರಷ್ಟು ಫಲಿತಾಂಶ ಪಡೆಯುವ ಮೂಲಕ ಕರ್ನಾಟಕಕ್ಕೆ ಎರಡನೇ ಸ್ಥಾನ ಪಡೆದ ಉಡುಪಿ ಜಿಲ್ಲೆಯ ಸಾಧನೆಗೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.ಕರಾವಳಿ ಜಿಲ್ಲೆ ಉಡುಪಿ ಶೈಕ್ಷಣಿಕವಾಗಿ ಮುಂದಿರುವ ಜಿಲ್ಲೆ, ಜಿಲ್ಲೆಯ ಹೊರಭಾಗಗಳಿಂದಲೂ ಬಂದು ಇಲ್ಲಿ ವ್ಯಾಸಂಗ ಮಾಡುತ್ತಾರೆ. ಉಡುಪಿ ಜಿಲ್ಲೆಯ ಸಾಧನೆ ನಿಜಕ್ಕೂ ಮೆಚ್ಚುವಂಥದ್ದು ಎಂದು ಸಚಿವರು ತಿಳಿಸಿದ್ದಾರೆ.ಜಿಲ್ಲೆ ಎರಡನೇ ಸ್ಥಾನ ಪಡೆಯಲು ಕಾರಣಿಭೂತರಾದ ಶಿಕ್ಷಣ ಇಲಾಖೆಯ ಸಿಬ್ಬಂದಿ ವರ್ಗದವರಿಗೆ, ಎಲ್ಲಾ ಕಾಲೇಜುಗಳಿಗೆ, ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ವಿದ್ಯಾರ್ಥಿಗಳ ಜೀವನ ಉಜ್ವಲವಾಗಿರಲಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಪ್ರೀತಮ್‌ಗೆ ಅಭಿನಂದನೆ: ಪರೀಕ್ಷೆಯಲ್ಲಿ 625 ಕ್ಕೆ 625 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕುಂದಾಪುರದ ಶಂಕರನಾರಾಯಣ ಮದರ್ ಥೆರೇಸಾ ಮೆಮೋರಿಯಲ್ ಸ್ಕೂಲ್‌ನ ಪ್ರೀತಮ್ ಜಿ. ಪೂಜಾರಿ ಅವರನ್ನು ಸಚಿವರು ಅಭಿನಂದಿಸಿದ್ದಾರೆ.
ಉಡುಪಿ ಜಿಲ್ಲೆ: ಫಲಿತಾಂಶ ಹೆಚ್ಚಳ, 2ನೇ ಸ್ಥಾನ
udupi, sslc, exam, goverment, state, district,
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.