ಹೆಬ್ರಿ: ಈ ಸಾಲಿನ ಎಸ್ಸೆಸ್ಸೆಲ್ಸಿ ಪರಿಕ್ಷೆಯಲ್ಲಿ ಇಲ್ಲಿನ ಅಮೃತ ಭಾರತಿ ವಿದ್ಯಾಲಯದ ಎಸ್‌ಎಸ್‌ಎಲ್‌ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಶೇಕಡಾ 100 ಫಲಿತಾಂಶ ದಾಖಲಾಗಿದ್ದು, ಸಂಸ್ಥೆ ಗಮನಾರ್ಹ ಸಾಧನೆ ಮಾಡಿದೆ.

ಹೆಬ್ರಿಯ ಪಿ.ಆರ್.ಎನ್. ಅಮೃತ ಭಾರತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 2025–26ನೇ ಸಾಲಿನ 10ನೇ ತರಗತಿ ಪಬ್ಲಿಕ್ ಪರೀಕ್ಷೆಗೆ ಒಟ್ಟು 100 ವಿದ್ಯಾರ್ಥಿಗಳು ಹಾಜರಾಗಿದ್ದು, ಎಲ್ಲರೂ ಉತ್ತೀರ್ಣರಾಗುವ ಮೂಲಕ ಶೇ.100 ಫಲಿತಾಂಶ ಸಾಧಿಸಲಾಗಿದೆ.

ಈ ಪೈಕಿ 625ರಲ್ಲಿ 612 ಅಂಕಗಳನ್ನು ಪಡೆದು ಲಾವಣ್ಯ ಎಚ್.ವಿ. ಪ್ರಥಮ ಸ್ಥಾನ ಪಡೆದಿದ್ದಾರೆ. 610 ಅಂಕಗಳೊಂದಿಗೆ ಸೃಜನ್ ಭಟ್ ದ್ವಿತೀಯ ಸ್ಥಾನ, 606 ಅಂಕಗಳೊಂದಿಗೆ ಪ್ರಣಮ್ಯ ಕೆ. ತೃತೀಯ ಸ್ಥಾನ ಮತ್ತು 605 ಅಂಕಗಳೊಂದಿಗೆ ಶ್ರಾವ್ಯ ಹೆಗ್ಡೆ ಚತುರ್ಥ ಸ್ಥಾನ ಪಡೆದಿದ್ದಾರೆ.ವಿಷಯವಾರು ಸಾಧನೆಯಲ್ಲಿ ಸಂಸ್ಕೃತ ಪ್ರಥಮ ಭಾಷೆಯಲ್ಲಿ 10 ವಿದ್ಯಾರ್ಥಿಗಳು, ಕನ್ನಡ ಪ್ರಥಮ ಭಾಷೆಯಲ್ಲಿ 1 ವಿದ್ಯಾರ್ಥಿ, ದ್ವಿತೀಯ ಭಾಷೆ ಇಂಗ್ಲಿಷ್‌ನಲ್ಲಿ 2 ವಿದ್ಯಾರ್ಥಿಗಳು, ತೃತೀಯ ಭಾಷೆ ಹಿಂದಿಯಲ್ಲಿ 1 ವಿದ್ಯಾರ್ಥಿ ಹಾಗೂ ತೃತೀಯ ಭಾಷೆ ಕನ್ನಡದಲ್ಲಿ 6 ವಿದ್ಯಾರ್ಥಿಗಳು ಪೂರ್ಣಾಂಕ ಪಡೆದಿರುವುದು ವಿಶೇಷ.

ಒಟ್ಟು 38 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದು, 56 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಈ ಸಾಧನೆಗೆ ಅಮೃತ ಭಾರತಿ ಟ್ರಸ್ಟಿನ ಅಧ್ಯಕ್ಷ ಸಿಎ ಎಂ. ರವಿರಾವ್, ಕಾರ್ಯದರ್ಶಿ ಹೆಚ್. ಗುರುದಾಸ್ ಶೆಣೈ, ವಿದ್ಯಾಲಯದ ಅಧ್ಯಕ್ಷ ಶೈಲೇಶ್ ಕಿಣಿ, ಮುಖ್ಯೋಪಾಧ್ಯಾಯಿನಿ ಅಪರ್ಣಾ ಆಚಾರ್, ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿಗಳನ್ನು ಅಭಿನಂದಿಸಿ ಸಂತೋಷ ವ್ಯಕ್ತಪಡಿಸಿದ್ದಾರೆ.