ಉಡುಪಿ ನಗರ: ನಾಮಫಲಕಗಳಲ್ಲಿ ಕನ್ನಡ ಕಡ್ಡಾಯಕ್ಕೆ ಕರವೇ ಮನವಿ

| Published : Feb 09 2024, 01:46 AM IST / Updated: Feb 09 2024, 03:54 PM IST

ಸಾರಾಂಶ

ಕನ್ನಡದ ಉಳಿವಿಗಾಗಿ ಸದಾ ಮುಂದಿರುವ ಕರ್ನಾಟಕ ರಕ್ಷಣಾ ವೇದಿಕೆಯು ಉಡುಪಿ ಜಿಲ್ಲೆಯಾದ್ಯಂತ ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಕನ್ನಡವನ್ನು ಕಡ್ಡಾಯಗೊಳಿಸುವ ಎಚ್ಚರಿಕೆಯ ಸಂದೇಶ ನೀಡಲು ಒಂದು ವಾಹನಕ್ಕೆ ಧ್ವನಿವರ್ಧಕ ಅಳವಡಿಸಿಕೊಂಡು ಜಾಗರೂಕತೆ ಮೂಡಿಸುವ ಕಾರ್ಯವನ್ನು ಶೀಘ್ರದಲ್ಲೇ ಹಮ್ಮಿಕೊಳ್ಳಲಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ ನಗರದಲ್ಲಿ ನಾಮಫಲಕಗಳಲ್ಲಿ ಕನ್ನಡವನ್ನು ಕಡ್ಡಾಯಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ನಗರಸಭೆಯ ಪೌರಾಯುಕ್ತ ರಾಯಪ್ಪ ಅವರಿಗೆ ಮನವಿ ಸಲ್ಲಿಸಿತು.

ಈ ಸಂದರ್ಭ ವೇದಿಕೆಯ ಜಿಲ್ಲಾಧ್ಯಕ್ಷ ಸುಜಯ್ ಪೂಜಾರಿ, ರಾಜ್ಯದ ಎಲ್ಲ ಅಂಗಡಿ ಮುಂಗಟ್ಟುಗಳ ನಾಮಫಲಕದಲ್ಲಿ ಕಡ್ಡಾಯವಾಗಿ ಶೇ 60ರಷ್ಟು ಕನ್ನಡವನ್ನು ಹಾಗೂ ಅನ್ಯ ಭಾಷೆಯನ್ನು ಶೇ.40 ಮಾತ್ರ ಬಳಸಬೇಕೆಂದು ಸರ್ಕಾರವೇ ಆದೇಶಿಸಿದೆ. 

ಆದರೂ ಉಡುಪಿ ಜಿಲ್ಲೆಯಲ್ಲಿ ಇದು ಜಾರಿ ಬಂದಿಲ್ಲ. ಈ ಆದೇಶದ ಬಗ್ಗೆ ಉಡುಪಿ ನಗರಸಭೆಯ ಅಧಿಕಾರಿಗಳು ಯಾವುದೇ ರೀತಿಯ ಎಚ್ಚರಿಕೆಯ ಕ್ರಮ ಕೈಗೊಳ್ಳದೇ ಇರುವುದು ವಿಷಾದದ ಸಂಗತಿ ಎಂದರು.

ಆದ್ದರಿಂದ ಕನ್ನಡದ ಉಳಿವಿಗಾಗಿ ಸದಾ ಮುಂದಿರುವ ಕರ್ನಾಟಕ ರಕ್ಷಣಾ ವೇದಿಕೆಯು ಉಡುಪಿ ಜಿಲ್ಲೆಯಾದ್ಯಂತ ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಕನ್ನಡವನ್ನು ಕಡ್ಡಾಯಗೊಳಿಸುವ ಎಚ್ಚರಿಕೆಯ ಸಂದೇಶ ನೀಡಲು ಒಂದು ವಾಹನಕ್ಕೆ ಧ್ವನಿವರ್ಧಕ ಅಳವಡಿಸಿಕೊಂಡು ಜಾಗರೂಕತೆ ಮೂಡಿಸುವ ಕಾರ್ಯವನ್ನು ಶೀಘ್ರದಲ್ಲೇ ಹಮ್ಮಿಕೊಳ್ಳಲಾಗುವುದು. ನಗರಸಭೆ ಸಂಪೂರ್ಣ ಬೆಂಬಲ ನೀಡಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕರವೇ ಜಿಲ್ಲಾಗೌರವಾಧ್ಯಕ್ಷರಾದ ಸುಂದರ ಎ.ಬಂಗೇರ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗೀತಾ ಪಾಂಗಳ, ಜಿಲ್ಲಾ ಸಾಂಸ್ಕೃತಿಕ ಕಾರ್ಯದರ್ಶಿ ಕೃಷ್ಣ ಕೆ., ಮಹಿಳಾ ಉಪಾಧ್ಯಕ್ಷ ದೇವಕಿ ಬಾರ್ಕೂರ್, ಮಹಿಳಾ ಉಪಾಧ್ಯಕ್ಷೆ ಶಾಲಿನಿ ಸುರೇಂದ್ರ, ಮಹಿಳಾ ಕಾರ್ಯದರ್ಶಿ ಚಂದ್ರಕಲಾ. ಹಾಗೂ ಜಿಲ್ಲಾ ಸದಸ್ಯರಾದ ವಿಜಯ, ಶ್ರೀನಿವಾಸ, ಶ್ಯಾಮಲ ಮತ್ತಿತರು ಉಪಸ್ಥಿತರಿದ್ದರು.

ಪರೀಕ್ಷೆ ಸಮಯ ವಿದ್ಯುತ್ ಕಡಿತ ಬೇಡ: ಸಚಿವರಿಗೆ ಯಶಪಾಲ್ ಮನವಿ

ಉಡುಪಿ: ಪ್ರಸ್ತುತ ವಿದ್ಯಾರ್ಥಿಗಳ ಪರೀಕ್ಷಾ ಸಮಯದಲ್ಲಿ ರಾಜ್ಯದಲ್ಲಿ ವಿದ್ಯುತ್ ಲೋಡ್ ಶೆಡ್ಡಿಂಗ್ ಮಾಡದಂತೆ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರಿಗೆ ಶಾಸಕ ಯಶ್‌ಪಾಲ್ ಸುವರ್ಣ ಮನವಿ ಸಲ್ಲಿಸಿದರು.ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಗೆ ಪೂರ್ವ ಸಿದ್ಧತಾ ಪರೀಕ್ಷೆಗಳು ಫೆ 23 ರಿಂದ ಆರಂಭವಾಗಲಿದ್ದು, ಎಸ್.ಎಸ್.ಎಲ್.ಸಿ. ಅಂತಿಮ ಪರೀಕ್ಷೆ, ಪದವಿ ಪೂರ್ವ, ಪದವಿ ಹಾಗೂ ಸ್ನಾತಕೋತ್ತರ ಪರೀಕ್ಷೆಗಳು ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ನಡೆಯಲಿದೆ.

ಈ ಪರೀಕ್ಷೆಗಳು ವಿದ್ಯಾರ್ಥಿಗಳ ಜೀವನದಲ್ಲಿ ಒಂದು ಪ್ರಮುಖ ಘಟ್ಟವಾಗಿದೆ. ಅಂತಿಮ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ತಯಾರಿ ನಡೆಸುತ್ತಿದ್ದು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಅಭ್ಯಾಸಕ್ಕೆ ಅನುಕೂಲವಾಗುವಂತೆ, ವಿದ್ಯುತ್ ಲೋಡ್ ಶೆಡ್ಡಿಂಗ್ ಮಾಡದಂತೆ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಶಾಸಕರು ಸಚಿವರಿಗೆ ಆಗ್ರಹಿಸಿದರು.