ಕನ್ನಡಪ್ರಭ ವಾರ್ತೆ ಉಡುಪಿ ಕರ್ನಾಟಕ ಮತ್ತು ಗೋವಾದ ನೌಕಾಪಡೆಯ ಎನ್‌ಸಿಸಿ ಕೆಡೆಟ್‌ಗಳು ಸ್ವಚ್ಛ ಭಾರತ ಅಭಿಯಾನದಂಗವಾಗಿ ಸಾಗರ ನೌಕಾಯಾನ ಸಾಹಸಯಾತ್ರೆ ಶಿಬಿರ ಮತ್ತು ತರಬೇತಿ ಚಟುವಟಿಕೆಗಳನ್ನು ಆಯೋಜಿಸಲಾಯಿತು.

ಈ ಸಾಗರ ನೌಕಾಯಾನ ಸಾಹಸಯಾತ್ರೆಯಲ್ಲಿ ಕರ್ನಾಟಕ ಮತ್ತು ಗೋವಾದ 72 ಎನ್‌ಸಿಸಿ ಕೆಡೆಟ್‌ಗಳು ನಗರದ ಶಾರದಾ ವಸತಿ ಶಾಲೆಯ ಪರಿಸರ ಮತ್ತು ಮಲ್ಪೆ ಬೀಚಿನಲ್ಲಿ ಶ್ರಮದಾನದ ಮೂಲಕ ಸ್ವಚ್ಛತಾ ಚಟುವಟಿಕೆಗಳನ್ನು ಕೈಗೊಂಡರು. ಇದು ಈ ಕೆಡೆಟ್‌ಗಳಲ್ಲಿ ಸ್ವಚ್ಛತೆಯ ಉತ್ತೇಜನ, ಸಮುದಾಯದಲ್ಲಿ ಭಾಗವಹಿಸುವಿಕೆ, ಪರಿಸರವನ್ನು ಕಾಪಾಡುವ ಬಗ್ಗೆ ಜಾಗೃತಿಗೆ ಸಹಾಯಕವಾಗಿದೆ. ಹಾಗೆಯೇ ಮಲ್ಪೆ ಪರಿಸರದಲ್ಲಿ ರೂಟ್‌ ಮಾರ್ಚ್ ಮೂಲಕ ಸಾರ್ವಜನಿಕರಿಗೆ ಸ್ವಚ್ಛತೆಯ ಸಂದೇಶ ನೀಡಲಾಯಿತು.15 ದಿನ ನಡೆದ ಈ ಶಿಬಿರದ ಚಟುವಟಿಕೆಗಳ ಭಾಗವಾಗಿ ಉದ್ಯಾವರ ನದಿಯ ಬೋಟ್ ಪೂಲ್‌ನಲ್ಲಿ ಸೈಲ್ ಬೋಟ್ ನಿರ್ವಹಣೆ ಮತ್ತು ರಿಗ್ಗಿಂಗ್ ಕುರಿತು ತರಬೇತಿಯನ್ನು ನೀಡಲಾಯಿತು. ಕರ್ನಾಟಕ ಮತ್ತು ಗೋವಾ ಎನ್‌ಸಿಸಿ ನಿರ್ದೇಶನಾಲಯದ ಸಮಗ್ರ ಮಾರ್ಗದರ್ಶನದಲ್ಲಿ ಉಡುಪಿಯ ಎನ್‌ಸಿಸಿ ನಂಬರ್ ೬ ಕರ್ನಾಟಕ ನೌಕಾ ಘಟಕದಿಂದ ಆಯೋಜಿಸಲ್ಪಟ್ಟ ಈ ಶಿಬಿರವನ್ನು ಕರ್ನಲ್ ವಿರಾಜ್ ಕಾಮತ್ ನೇತೃತ್ವದಲ್ಲಿ ಉಡುಪಿಯ ಎನ್‌ಸಿಸಿ ಕಮಾಂಡಿಂಗ್ ಆಫೀಸರ್ ಕಮಾಂಡರ್ ಅಶ್ವಿನ್ ಎಂ. ರಾವ್ ನಡೆಸಿಕೊಟ್ಟರು.