ಸಾರಾಂಶ
ಹಾವೇರಿ: ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಸದಸ್ಯರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸಲು ರಾಜ್ಯ ಸರ್ಕಾರ ಆರೋಗ್ಯ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸಿದ್ದು, ಜಿಲ್ಲೆಯಲ್ಲಿರುವ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದವರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಲ್ಲೇಶ ಕರಿಗಾರ ತಿಳಿಸಿದ್ದಾರೆ.ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಅ.೧ರಿಂದಲೇ ಜಾರಿಗೊಳಿಸಲಾಗಿದೆ. ಪತಿ-ಪತ್ನಿ ಸರ್ಕಾರಿ ನೌಕರರಾಗಿದ್ದಲ್ಲಿ ಒಬ್ಬರು ಮಾತ್ರ ವೇತನದಲ್ಲಿ ವಂತಿಕೆಯನ್ನು ನೀಡಬೇಕು. ರಾಜ್ಯ ಸರ್ಕಾರದ ಅಧಿಕಾರಿ ಅಥವಾ ನೌಕರರ ತಂದೆ-ತಾಯಿ ಪಿಂಚಣಿದಾರರಾಗಿದ್ದಲ್ಲಿ ಅವರ ಮಾಸಿಕ ಆದಾಯದ ಮಿತಿಯನ್ನು ೧೭ ಸಾವಿರ ರು.ಗಳಿಂದ ೨೭ ಸಾವಿರ ರು.ಗಳಿಗೆ ಹೆಚ್ಚಳ ಮಾಡಿದೆ. ವಿವಾಹಿತ ಮಹಿಳಾ ನೌಕರರ ತಂದೆ-ತಾಯಿಯೂ ಸಹ ಈ ಯೋಜನೆಯ ವ್ಯಾಪ್ತಿಗೆ ಒಳಪಡಲಿದ್ದಾರೆ. ಮಾಸಿಕ ವಂತಿಕೆಯನ್ನು ನೀಡಲು ಇಚ್ಛಿಸದೇ ಇರುವ ನೌಕರರು ಲಿಖಿತವಾಗಿ ಅ.೧೮ರೊಳಗೆ ಸಂಬಂಧಿಸಿದ ಡಿ.ಡಿ.ಓ ಗಳಿಗೆ ನೀಡಬೇಕು. ಈ ಯೋಜನೆಯ ಸೌಲಭ್ಯ ಪಡೆಯಲು ರಾಜ್ಯ ಸರ್ಕಾರದ ಅಧಿಕಾರಿ-ನೌಕರರು ಪ್ರತಿ ತಿಂಗಳು ಸರ್ಕಾರ ನಿರ್ದಿಷ್ಟಪಡಿಸಿರುವ ವಂತಿಕೆಯನ್ನು ಈ ತಿಂಗಳಿನಿಂದ ನೀಡಬೇಕು. ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ೫.೨೫ ಲಕ್ಷ ಸರ್ಕಾರಿ ನೌಕರರು ಹಾಗೂ ೨೫ ಲಕ್ಷ ಕುಟುಂಬ ಸದಸ್ಯರು ಈ ಯೋಜನೆಯ ಲಾಭ ಪಡೆಯಲಿದ್ದಾರೆ. ರಾಜ್ಯ ಸರ್ಕಾರದ ಎಲ್ಲ ಅಧಿಕಾರಿ, ನೌಕರರು ಎಚ್‌ಆರ್‌ಎಂಎಸ್-೧ರಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ ಲಾಭವನ್ನು ಜಿಲ್ಲೆಯ ಎಲ್ಲಾ ಸರ್ಕಾರಿ ನೌಕರರು ಪಡೆದುಕೊಳ್ಳಬೇಕು. ಯೋಜನೆ ಜಾರಿಗೊಳಿಸಿದ ರಾಜ್ಯ ಸರ್ಕಾರಕ್ಕೆ ಹಾಗೂ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಕ್ಷರಿ ಅವರಿಗೆ ಕೃತಜ್ಞತೆ ತಿಳಿಸುತ್ತೇವೆ ಎಂದು ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ಮಲ್ಲೇಶ ಕರಿಗಾರ ಹೇಳಿದರು.