ಉಡುಪಿ: ಫೆಲೋಶಿಪ್ ಆಫ್ ಉಡುಪಿ ಚರ್ಚಸ್ ಇದರ ವತಿಯಿಂದ ಆಯೋಜಿಸಲಾದ 3 ದಿನಗಳ ಮೋಹನ್ ಸಿ. ಲಾಝರಸ್ ನೇತೃತ್ವದಲ್ಲಿ ನಗರದ ಮಿಷನ್ ಕಾಂಪೌಂಡಿನಲ್ಲಿ ‘ಸಮಾಧಾನ ಮಹೋತ್ಸವ’ವು ಭಾನುವಾರ ಸಂಜೆ ಯಶಸ್ವಿಯಾಗಿ ಸಮಾಪನಗೊಂಡಿತು.ಈ ಭಕ್ತಿ ಸಂಜೀವನ ಕೂಟದಲ್ಲಿ ಜಿಲ್ಲೆಯ 12 ಸಾವಿರಕ್ಕೂ ಅಧಿಕ ಮಂದಿ ಭಕ್ತರು ಭಾಗವಹಿಸಿ ದೈವಿಕ ಅನುಭವ ಪಡೆದರು. ಮೋಹನ್ ಸಿ.ಲಾಝರಸ್ ಮೂರು ದಿನಗಳ ಕಾಲ ಶಿಲುಬೆಯ ಧ್ಯಾನವನ್ನು ವ್ಯವಸ್ಥಿತವಾಗಿ ನಡೆಸುವುದರೊಂದಿಗೆ ದೇವರ ವಾಕ್ಯದ ಮೇಲೆ ವಿಶೇಷ ಪ್ರವಚನಗಳನ್ನು ನೀಡಿದರು. ಈ ಸಂದರ್ಭದಲ್ಲಿ ದೇಶ ಮತ್ತು ರಾಜ್ಯದಲ್ಲಿ ಶಾಂತಿ ನೆಲೆಸುವಂತೆ ಹಾಗೂ ಸಮಾಧಾನ ಮಹೋತ್ಸವಕ್ಕೆ ವಿರೋಧ ಮಾಡಿದವರ ಮನ ಪರಿವರ್ತನೆಗೊಳ್ಳಲಿ ಎಂದು ಬಹಿರಂಗ ಪ್ರಾರ್ಥನೆ ಸಲ್ಲಿಸಿದರು.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕರ್ನಾಟಕ ಕ್ರೈಸ್ತ ಅಭಿವೃದ್ಧಿ ನಿಗಮದ ಪ್ರಶಾಂತ್ ಜತ್ತನ್ನ ಮಾತನಾಡಿ ಮೂರು ದಿನಗಳ ಸಮಾಧಾನ ಮಹೋತ್ಸವ ಅತ್ಯುತ್ತಮವಾಗಿ ಮೂಡಿಬಂದಿದೆ. ಕಾರ್ಯಕ್ರಮ ನಡೆಸಲು ವಿರೋಧ ಬಂದಾಗ ಸಾಂಗವಾಗಿ ನಡೆಯಲು ಅನುಮತಿ ನೀಡಿದ ರಾಜ್ಯ ಹೈಕೋರ್ಟ್ ಗೆ ಹಾಗೂ ಶಾಂತಿ ಸುವ್ಯವಸ್ಥೆಗೆ ಸಹಕರಿಸಿದ ಪೊಲೀಸ್ ಇಲಾಖೆಗೆ ಧನ್ಯವಾದ ಸಲ್ಲಿಸಿದರು.ಉಡುಪಿ ಧರ್ಮಪ್ರಾಂತ್ಯದ ವಂ. ಹೆರಾಲ್ಡ್ ಪಿರೇರಾ, ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ರೋಯ್ ಕ್ಯಾಸ್ತಲಿನೋ, ಕಥೊಲಿಕ್ ಸಭಾ ಉಡುಪಿ ಪ್ರದೇಶದ ಅಧ್ಯಕ್ಷ ಮೆಲ್ವಿನ್ ಆರಾನ್ಹಾ, ಕರ್ನಾಟಕ ಸದರ್ನ್ ಡಯೋಸಿಸ್ ವಲಯಾಧ್ಯಕ್ಷ ವಂ. ಕಿಶೋರ್ ಕುಮಾರ್ ಆಗಮಿಸಿ ಶುಭ ಹಾರೈಸಿದರು.
ಚರ್ಚ್ ಆಫ್ ಫೆಲೋಶಿಪ್ ಸಂಚಾಲಕ ಡಾ. ಸುಶೀಲ್ ಜತ್ತನ್ನ, ಕಾರ್ಯದರ್ಶಿ ಸೆಲ್ವಕುಮಾರ್, ಕೋಶಾಧಿಕಾರಿ ಸೆಲಿನಾ ಕರ್ಕಡಾ, ಉಪಾಧ್ಯಕ್ಷರಾದ ವರ್ಗಿಸ್, ಪಾವ್ಲೋಸ್, ಸ್ಟೀಫನ್ ಜಮಖಂಡಿ, ಚಂದ್ರ ಶೇಖರ್, ಸುಧಾಕರ್ ಗೋಝರ್ ಮತ್ತಿತರರಿದ್ದರು.