ಸೋಮರಡ್ಡಿ ಅಳವಂಡಿ ಕೊಪ್ಪಳ
ಹುಲಿಕೇರಿ ಒತ್ತುವರಿ ತೆರವು ಯಾವಾಗ ಎನ್ನುವುದು ಈಗ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಪ್ರಶ್ನೆ. ವಿಧಾನಪರಿಷತ್‌ನಲ್ಲಿ ಕೂಡಲೇ ತೆರವು ಮಾಡಲಾಗುವುದು ಎಂದು ಸಚಿವರೇ ಭರವಸೆ ನೀಡಿದ್ದರೂ ಅದು ಜಾರಿಯಾಗಿಲ್ಲ.ಹೌದು, ಇತ್ತೀಚಿಗೆ ಹುಲಿಕೆರೆಯಲ್ಲಿ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದು ವಿವಾದಕ್ಕೆ ಕಾರಣವಾಗಿತ್ತು. ಅಲ್ಲದೆ, ಈಗ ಕೆರೆ ಒತ್ತುವರಿ ತೆರವಿಗೆ ಸರ್ಕಾರವೇ ಮುಂದಾಗಿದೆ. ಜಿಲ್ಲಾಡಳಿತ ಕೆರೆ ಒತ್ತುವರಿಗೆ ದಾಖಲೆ ಸಂಗ್ರಹ ಕಾರ್ಯ ಶುರು ಮಾಡಿದೆ. ಆದರೂ ಅನುಷ್ಠಾನಕ್ಕೆ ಬರುವ ಯಾವುದೇ ಲಕ್ಷಣ ಕಾಣುತ್ತಿಲ್ಲ.
ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ಅವರು, ಕೆರೆಯಲ್ಲಿ ಅಕ್ರಮವಾಗಿ ರಸ್ತೆ ನಿರ್ಮಾಣ ಮಾಡಲಾಗುತ್ತಿತ್ತು. ನಾವು ಹೋರಾಟ ಮಾಡಿದ ಮೇಲೆ ರಸ್ತೆ ನಿರ್ಮಾಣ ಕಾರ್ಯ ಸ್ಥಗಿತ ಮಾಡಲಾಗಿದೆ. ಆದರೆ, ರಸ್ತೆ ನಿರ್ಮಾಣಕ್ಕೆ ಹಾಕಿದ ಮಣ್ಣಿನ ಗುಡ್ಡೆ ತೆಗೆದು ಹಾಕುತ್ತಿಲ್ಲ. ಅಷ್ಟೇ ಅಲ್ಲ, ಈ ಕೆರೆ ದಾಖಲೆಯಲ್ಲಿ ಬರೋಬ್ಬರಿ 81 ಎಕರೆ ಇದೆ. ವಾಸ್ತವದಲ್ಲಿ 50 ಎಕರೆಯೂ ಉಳಿದಿಲ್ಲ. ಬಹುತೇಕ ಒತ್ತುವರಿಯಾಗಿದೆ ಎಂದು ಸದನದ ಗಮನಕ್ಕೆ ತಂದಿದ್ದರು. ಇದನ್ನು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಗಂಭೀರವಾಗಿ ಪರಿಗಣಿಸಿದರು. ಕೆರೆಯ ಒತ್ತುವರಿ ಮಾಡುವುದು ಅಲ್ಲದೆ, ಅದರಲ್ಲಿ ಅಕ್ರಮವಾಗಿ ರಸ್ತೆ ನಿರ್ಮಾಣ ಮಾಡುವುದು ಸರಿಯಲ್ಲ. ಸರ್ಕಾರ ಕೂಡಲೇ ಕ್ರಮವಹಿಸುವಂತೆ ಸೂಚಿಸಿದ್ದರು. ಇದಕ್ಕೆ ಉತ್ತರಿಸಿದ್ದ ಸಚಿವರು, ತಕ್ಷಣ ಈ ಕುರಿತು ಕ್ರಮ ವಹಿಸಲಾಗುವುದು ಮತ್ತು ಕೆರೆ ಒತ್ತುವರಿ ತೆರವು ಮಾಡಲಾಗುವುದು ಎಂದು ಭರವಸೆ ನೀಡಿದ್ದರು.ಆದರೆ, ಇದುವರೆಗೂ ಅದ್ಯಾವುದೂ ಕಾರ್ಯಗತವಾಗಿಲ್ಲ. ಕೆರೆಯ ಸರ್ವೆ ನಡೆಸಿ, ಒತ್ತುವರಿ ತೆರವು ಮಾಡುವ ದಿಸೆಯಲ್ಲಿ ಜಿಲ್ಲಾಡಳಿತ ಕ್ರಮವಹಿಸಬೇಕಾಗಿದೆ. ಜಿಲ್ಲಾಡಳಿತ ಈಗಾಗಲೇ ಕೆರೆಯ ಸರ್ವೆ ಸಹ ಮಾಡಿಸಿದ್ದು, ಅದನ್ನು ಜಾರಿ ಮಾಡಬೇಕಾಗಿದೆ.
ಕೊಪ್ಪಳ ಹುಲಿಕೆರೆ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಎಂಥ ಬಿರುಬೇಸಿಗೆಯಲ್ಲಿಯೂ ನೀರು ತುಂಬಿಕೊಂಡಿರುವ ಕೆರೆಯಾಗಿತ್ತು. ಒಂದು ಕಾಲಕ್ಕೆ ಕೆರೆ ಕುಡಿಯುವ ನೀರಿಗೆ ಆಸರೆಯಾಗಿತ್ತು. ಈಗ ಕೆರೆ ತುಂಬಿಸುವ ಯೋಜನೆಯಲ್ಲಿ ತುಂಗಭದ್ರಾ ನದಿಯಿಂದ ನೀರು ತುಂಬಿಸುತ್ತಿರುವುದರಿಂದ ರಮಣೀಯ ತಾಣವಾಗಿ ಮಾರ್ಪಟ್ಟಿದೆ. ಕೆರೆಯ ಅಭಿವೃದ್ಧಿ ಮಾಡಿ, ದೋಣಿ ವಿಹಾರ, ಜಲಕ್ರೀಡೆಗಳಿಗೆ ವ್ಯವಸ್ಥೆ ಮಾಡಬೇಕು ಎನ್ನುವ ಪ್ರಯತ್ನ ನಡೆದಿದೆ. ಪಿಪಿಪಿ ಯೋಜನೆಯಲ್ಲಿ ಟೆಂಡರ್ ಕರೆಯಲಾಯಿತಾದರೂ ಅದು ಕಾರ್ಯಗತವಾಗಿಲ್ಲ. ಇಂಥದ್ದೊಂದು ಕೆರೆಯಲ್ಲಿ ಈಗ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದರಿಂದ ವಿವಾದಕ್ಕೆ ತಿರುಗಿತು. ಅದರ ವಿರುದ್ಧ ದೊಡ್ಡ ಹೋರಾಟವೇ ನಡೆದು ಹೋಗಿದೆ. ಈಗ ಕೆರೆಯಲ್ಲಿ ನಿರ್ಮಾಣ ಮಾಡಿರುವ ರಸ್ತೆ ತೆರವು ಮಾಡುವುದು ಅಷ್ಟೇ ಅಲ್ಲ, ಅದರ ಒತ್ತುವರಿ ತೆರವು ಮಾಡುವಂತೆ ಸರ್ಕಾರವೇ ಸೂಚಿಸಿದೆ. ಸದನದಲ್ಲಿಯೂ ಚರ್ಚೆಯಾಗಿದ್ದರೂ ಅದು ಜಾರಿಯಾಗದೆ ಇರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಹುಲಿಕೆರೆಯಲ್ಲಿ ರಸ್ತೆ ನಿರ್ಮಾಣ ಮಾಡಿದ್ದನ್ನು ಪ್ರಶ್ನೆ ಮಾಡಿ, ಹೋರಾಟ ಮಾಡಿದ್ದು ಅಲ್ಲದೆ ಸದನದಲ್ಲಿ ಈ ಕುರಿತು ಪ್ರಶ್ನೆ ಮಾಡಲಾಗಿದೆ. ಕೆರೆ ಒತ್ತುವರಿಯನ್ನು ಸಹ ತೆರವು ಮಾಡುವ ಭರವಸೆ ಸಿಕ್ಕಿದ್ದು, ಅದು ಕಾರ್ಯಗತವಾಗಬೇಕಾಗಿದೆ ಎಂದು ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ತಿಳಿಸಿದ್ದಾರೆ.