ಹಾವೇರಿ: ಹಾನಗಲ್ಲ ತಾಲೂಕು ನರೇಗಲ್‌ ಗ್ರಾಮದಲ್ಲಿ ಸೋಮವಾರ ಕಾರ ಹುಣ್ಣಿಮೆ ಸಂದರ್ಭದಲ್ಲಿ ನಡೆದ ಗಲಾಟೆ ಹಿನ್ನೆಲೆಯಲ್ಲಿ 26 ಜನ ಹಿಂದೂಗಳ ಮೇಲೆ ಪ್ರತಿದೂರು ದಾಖಲಾಗಿದೆ.

ಗುಲಾಬಜಾನ್ ಅನ್ವರಸಾಬ ಯತ್ನಳ್ಳಿ ಎಂಬವರು ನೀಡಿದ ದೂರಿನ ಮೇರೆಗೆ ಆಡೂರು ಪೊಲೀಸ್ ಠಾಣೆಯಲ್ಲಿ ಪ್ರವೀಣ ಮಾಲತೇಶ ಭಟ್ಟಿ, ವಿರಾಜ ಹನುಮಂತಪ್ಪ ಕುರುಬರ ಹಾಗೂ ಇನ್ನು 24 ಜನರ ಮೇಲೆ ಕೇಸ್ ದಾಖಲಾಗಿದೆ.

ನರೇಗಲ್ಲ ಗ್ರಾಮದ ಗ್ರಾಪಂ ಹತ್ತಿರ ಇರುವ ಮಸೀದಿಯ ಮುಂದೆ ಹೋರಿ ಬೆದರಿಸುತ್ತಾ ಬಂದು ಪಟಾಕಿ ಹಚ್ಚಿ ಮಸೀದಿ ಕಂಪೌಂಡಿನೊಳಗೆ ಹಾಕಿದ್ದಾರೆ. ಅದನ್ನು ನೋಡಿದ ಗಾಯಾಳು ಖ್ವಾಜಾಮೋಹಿದ್ದೀನ ಭಾಷಾಸಾಬ ಗೌಂಡಿ ಪಟಾಕಿಯನ್ನು ಮಸೀದಿ ಕಂಪೌಂಡಿನೊಳಗೆ ಯಾಕೆ ಹಾಕಿದ್ದೀರಾ ಅಂತ ಕೇಳಿದ್ದಕ್ಕೆ ಆರೋಪಿತರೆಲ್ಲರೂ ಸೇರಿಕೊಂಡು ಆತನ ಮೇಲೆ ಬಡಿಗೆಯಿಂದ ಹಲ್ಲೆ ಮಾಡಿದ್ದಾರೆ. ಅಲ್ಲದೆ ನಂತರ ಗಾಯಾಳುಗಳು ತಮ್ಮ ಮನೆಯಲ್ಲಿ ಇದ್ದಾಗ ಗುಂಪುಕಟ್ಟಿಕೊಂಡು ಬಡಿಗೆ, ಕಲ್ಲು, ಕಂದ್ಲಿಗಳನ್ನು ಹಿಡಿದುಕೊಂಡು ಬಂದು ಮನೆಯೊಳಗೆ ನುಗ್ಗಿ ಹೋಗಿ ಗಾಯಾಳುಗಳನ್ನು ಹೊರಗೆ ಎಳೆದುಕೊಂಡು ಬಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಇದರಿಂದ ಖ್ವಾಜಾಮೋಹಿದ್ದೀನ ಇವನ ತಲೆ, ಕಾಲು, ಕಿವಿಯ ಹತ್ತಿರ ಒಡೆದು ಭಾರೀ ಗಾಯಪೆಟ್ಟುಗೊಳಿಸಿದ್ದು ಅಲ್ಲದೆ ಭಾಷಾಸಾಬ ಎಂಬಾತನಿಗೆ ಹೊಡೆದು ಗಾಯಗೊಳಿಸಿದ್ದಾರೆ. ನಿಮ್ಮನ್ನು ಕೊಲ್ಲು ತನಕ ಬಿಡಂಗಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.