ಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಸಭಾ ಉಜಿರೆ ವಲಯದ ನೇತೃತ್ವದಲ್ಲಿ ಶ್ರೀ ಜನಾರ್ದನ ದೇವಸ್ಥಾನದ ಸಹಯೋಗದೊಂದಿಗೆ ಶ್ರೀ ಸ್ವಾಮಿ ಸನ್ನಿಧಿಯಲ್ಲಿ ಲೋಕಕಲ್ಯಾಣಾರ್ಥ ಶಿವಪಂಚಾಕ್ಷರಿ ಯಾಗವು ಭಾನುವಾರ ತಾಲೂಕಿನ ಶಿವಳ್ಳಿ ವಿಪ್ರ ಬಂಧುಗಳ ಪಾಲ್ಗೊಳ್ಳುವಿಕೆಯೊಂದಿಗೆ ಏಕಕಾಲದಲ್ಲಿ 11 ಕುಂಡಗಳಲ್ಲಿ ವೇದಮೂರ್ತಿ ಶ್ರೀಪತಿ ಎಳಚಿತ್ತಾಯರ ಪ್ರಧಾನ ಪೌರೋಹಿತ್ಯದಲ್ಲಿ ಇತರ ಪುರೋಹಿತರ ಸಹಕಾರದೊಂದಿಗೆ ಸಂಪನ್ನಗೊಂಡಿತು.

ಶ್ರೀ ಜನಾರ್ದನ ಸ್ವಾಮಿ ಸನ್ನಿಧಿಯಲ್ಲಿ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯರ ನೇತೃತ್ವದಲ್ಲಿ ತಾಲೂಕು ತುಳು ಶಿವಳ್ಳಿ ಸಭಾ ಅಧ್ಯಕ್ಷ ರಾಜಪ್ರಸಾದ್ ಪೋಲ್ನಾಯ, ಉಜಿರೆ ವಲಯಾಧ್ಯಕ್ಷ ಗಿರಿರಾಜ ಬಾರಿತ್ತಾಯ, ಮಹಿಳಾ ಘಟಕ ಹಾಗೂ ಯುವ ವಿಪ್ರ ವೇದಿಕೆ ಪದಾಧಿಕಾರಿಗಳು ಸಾಮೂಹಿಕವಾಗಿ ಲೋಕ ಕಲ್ಯಾಣ ಹಾಗೂ ಸಮಾಜದ ಸಂಘಟನೆಯ ಒಗ್ಗಟ್ಟಿಗಾಗಿ ಪ್ರಾರ್ಥಿಸಿ, ರುದ್ರ ಪಾರಾಯಣ ನಡೆಸಿದರು. 11 ಕುಂಡಗಳಲ್ಲಿ ತಲಾ 15 ವಿಪ್ರ ಸಹಕಾರಿಗಳು 5 ಲಕ್ಷ ಪಂಚಾಕ್ಷರಿ ಮಂತ್ರಪಠಣದೊಂದಿಗೆ ಶಿವಪಂಚಾಕ್ಷರಿ ಯಾಗ ಪೂರ್ಣಾಹುತಿ ನಡೆಯಿತು. ಬಳಿಕ ವೇದಮೂರ್ತಿ ಶಿವಪ್ರಸಾದ್ ಬಾರಿತ್ತಾಯ ಶಿವಪಂಚಾಕ್ಷರಿ ಯಾಗದ ಮಹತ್ವ ಮತ್ತು ಅದರ ಫಲಾಫಲಗಳನ್ನು ತಿಳಿಸಿದರು. ನಮ್ಮ ಜನ್ಮ ಸಾರ್ಥಕ್ಯಕ್ಕೆ ಧರ್ಮ ಸಾಧನವೇ ಪ್ರಧಾನ. ಪೂರ್ವಾರ್ಜಿತ ಕರ್ಮಫಲ, ಭಗವಂತನ ಮೇಲಿನ ಭಕ್ತಿ, ಜ್ಞಾನ,ಮೋಕ್ಷ ಸಾಧನೆಗೆ ರುದ್ರ ದೇವರ ಅನುಗ್ರಹ ಅವಶ್ಯ. ಬ್ರಹ್ಮೋಪದೇಶದಲ್ಲಿ ವಟುವಿಗೆ ಪ್ರಧಾನವಾಗಿ ಗಾಯತ್ರಿ ಮಂತ್ರ, ಅಷ್ಟಾಕ್ಷರಿ ಮಂತ್ರ ಹಾಗೂ ಪಂಚಾಕ್ಷರಿ ಮಂತ್ರಗಳನ್ನು ಉಪದೇಶಿಸಲಾಗುತ್ತದೆ. ಪಂಚಾಕ್ಷರಿ ಯಜ್ಞದ ಮೂಲಕ ರುದ್ರನ ಆರಾಧನೆ ನಡೆಸಲಾಗುತ್ತದೆ. ನಿತ್ಯ ರುದ್ರ ದೇವರ ಸ್ಮರಣೆಯಿಂದ ಸನಾತನ ಧರ್ಮ ಉಳಿಯುವುದು. ಜಪಾನುಷ್ಠಾನ,ಸಂಧ್ಯಾವಂದನೆ ನಡೆಸುವುದರಿಂದ ನಮ್ಮಲ್ಲಿ ವಿಪ್ರತ್ವ ಉಳಿಯುವುದು. ಒಗ್ಗಟಿನಲ್ಲಿ ಯಜ್ಞ,ಯಾಗವನ್ನು ಮಾಡುವುದರಿಂದ ಅನಂತಫಲ ದೊರೆಯುತ್ತಿದೆ ಎಂದರು.

ತಾಲೂಕು ಪ್ರಧಾನ ಕಾರ್ಯದರ್ಶಿ ಮುರಳಿಕೃಷ್ಣ ಆಚಾರ್ ಕಾರ್ಯಕ್ರಮ ಸಂಯೋಜಿಸಿ, ಉಜಿರೆ ವಲಯ ಕಾರ್ಯದರ್ಶಿ ಹರ್ಷಕುಮಾರ್ ಸಹಕರಿಸಿದರು. ಮದ್ಯಾಹ್ನ ಮಹಿಳಾ ಘಟಕದ ಸಹಕಾರರೊಂದಿಗೆ ವಿಶೇಷವಾಗಿ ಆಟಿ ಖಾದ್ಯಗಳ ಸವಿಭೋಜನ ವ್ಯವಸ್ಥೆ ಮಾಡಲಾಗಿತ್ತು. 11 ಯಾಗ ಕುಂಡಗಳಿಗೆ ರುದ್ರದೇವರ ಹೆಸರು

ಎರಡು ವರ್ಷದ ಹಿಂದೆ ದಿ. ವಿಜಯರಾಘವ ಪಡುವೆಟ್ನಾಯರ ಮಾರ್ಗದರ್ಶನದಲ್ಲಿ ತುಳು ಶಿವಳ್ಳಿ ಸಭಾ ಸಹಯೋಗದೊಂದಿಗೆ ಬ್ರಾಹ್ಮಣ್ಯದ ಸಂಕೇತವಾಗಿ ಒಂದು ಲಕ್ಷ ಸಂಖ್ಯೆಯಲ್ಲಿ ಗಾಯತ್ರಿ ಯಾಗ, ಕಳೆದ ವರ್ಷ ಮೂರು ಲಕ್ಷ ಸಂಖ್ಯೆಯಲ್ಲಿ ಅಷ್ಟಾಕ್ಷರಿ ಯಾಗ ನಡೆಸಲಾಗಿತ್ತು. ಮುಂದಿನ ವರ್ಷ ಕೃಷ್ಣಾಕ್ಷರ ಮಂತ್ರ ಯಾಗ ನಡೆಸ ಬೇಕೆಂಬ ಸಂಕಲ್ಪ ಪ್ರಸ್ತಾಪಗೊಂಡಿತು. ಶಿವಪಂಚಾಕ್ಷರಿ ಯಾಗದ 11 ಯಾಗ ಕುಂಡಗಳಿಗೆ ರುದ್ರದೇವರ ಹೆಸರನ್ನಿರಿಸಲಾಗಿರುವುದು ವಿಶೇಷ.