ಸಾರಾಂಶ
। ಜಾನುವಾರು, ಕೃಷಿ ಪರಿಕರಗಳೊಂದಿಗೆ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಮಂಡ್ಯಸರ್ಕಾರಿ ಗೋಮಾಳಗಳನ್ನು ಅನಧಿಕೃತವಾಗಿ ಒತ್ತುವರಿ ಮಾಡಿರುವ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ದೌರ್ಜನ್ಯ ಪ್ರತಿಬಂಧಕ ಕಾಯ್ದೆ ಅನ್ವಯ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ, ನಮ್ಮ ಭೂಮಿ ನಮ್ಮ ಹಕ್ಕು ಹೋರಾಟ ಸಮಿತಿ (ಅಂಬೇಡ್ಕರ್ ವಾದ) ಕಾರ್‍ಯಕರ್ತರು ಜಾನುವಾರು, ಕೃಷಿ ಪರಿಕರಗಳೊಂದಿಗೆ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಮಳವಳ್ಳಿಯಿಂದ ವಾಹನಗಳಲ್ಲಿ ನಗರಕ್ಕೆ ಆಗಮಿಸಿದ ಪ್ರತಿಭಟನಾಕಾರರು, ಜಿಲ್ಲಾಧಿಕಾರಿ ಕಚೇರಿ ಬಳಿ ಜಾನುವಾರುಗಳೊಂದಿಗೆ ಧರಣಿ ನಡೆಸಿ ಅಪರ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.50, 53, 57ರಲ್ಲಿ ಅರ್ಜಿ ಸಲ್ಲಿಸಿರುವ ಪರಿಶಿಷ್ಟ ಜಾತಿ ಜನರಿಗೆ ಮಂಜೂರಾತಿಗೆ ಕ್ರಮ ವಹಿಸಬೇಕು. ಜೀತ ವಿಮುಕ್ತರಿಗೆ ಉಳುಮೆ ಮಾಡಲು ಸೂಕ್ತ ಭೂಮಿ ಮಂಜೂರಾತಿ ಮಾಡಿಕೊಡಬೇಕು. ಈಗಾಗಲೇ ಮನವಿ ಸಲ್ಲಿಸಿರುವ ಜೀತ ವಿಮುಕ್ತರಿಗೆ ಪ್ರತ್ಯೇಕ ಆರ್‌ಟಿಸಿ ನಮೂದಿಸಿಕೊಡಬೇಕು ಎಂದು ಆಗ್ರಹಿಸಿದರು.
ಪರಿಶಿಷ್ಟ ಜಾತಿಯವರಿಗೆ ಮಂಜೂರಾತಿಯಾಗಿ ಅನುಮತಿ ಇಲ್ಲದೆ ಮಾರಾಟವಾಗಿರುವ ಜಮೀನುಗಳಿಗೆ ಜಿಲ್ಲಾಡಳಿತವೇ ಸುಮೋಟ ಪ್ರಕರಣ ದಾಖಲಿಸಿ ನೊಂದ ಪರಿಶಿಷ್ಟಜಾತಿ ಮತ್ತು ಪಂಗಡದವರಿಗೆ ಪುನಃ ನೀಡಬೇಕು ಎಂದು ಒತ್ತಾಯಿಸಿದರು.ಅರಣ್ಯ ಹಕ್ಕು ಕಾಯ್ದೆ 2006 ತಿದ್ದುಪಡಿ 2018ರನ್ವಯ ಪ.ಜಾತಿ ಮತ್ತು ಪಂಗಡದ ತಳವಾರ, ನೀರುಗಂಟಿಗಳ ಜಮೀನುಗಳನ್ನು ಮರು ಮಂಜೂರಾತಿ ಮಾಡಿಕೊಡಬೇಕು. ಮಳವಳ್ಳಿ ತಾಲೂಕು ಕಸಬಾ ಮತ್ತು ಬಿಜಿಪುರ ಹೋಬಳಿ ಕಾಡಂಚಿನ ಗ್ರಾಮಗಳ ಜಮೀನುಗಳಿಗೆ ಪೋಡಿ ದುರಸ್ತಿ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಭೂಮಿ ಕೋರಿ ಅರ್ಜಿ ಸಲ್ಲಿಸಿರುವ ಎಲ್ಲಾ ನಿವೃತ್ತ ಯೋಧರಿಗೆ ಕೋಷ್ಠಕ 5ರಲ್ಲಿ ಕಾಯ್ದಿರಿಸಿರುವಂತೆ ಎಲ್ಲಾ ಗೋಮಾಳಗಳಲ್ಲಿ ಕಾಯ್ದಿರಿಸಬೇಕು. ಹಲಗೂರು ಹೋಬಳಿ ಬ್ಯಾಡರಹಳ್ಳಿ ಗ್ರಾಮದ ಗಿಂಡಿಕೆರೆ ಅರಣ್ಯ ಜಮೀನಿನಲ್ಲಿ ತಲತಲಾಂತರಗಳಿಂದ ಬೇಸಾಯ ಮಾಡಿಕೊಂಡು ಬರುತ್ತಿರುವ ಪರಿಶಿಷ್ಟ ಜಾತಿ, ಜನಾಂಗದವರಿಗೆ ಭೂಮಿ ಮಂಜೂರಾತಿ ಮಾಡಿ ಅವರ ಹೆಸರಿಗೆ ಆರ್‌ಟಿಸಿ ನಮೂದು ಮಾಡಿಸಿಕೊಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಮುಖಂಡರಾದ ಗೋವಿಂದರಾಜ ಪಟ್ಲಿ, ಶಿವಣ್ಣ, ವೀರಭದ್ರಯ್ಯ, ಮರಿಸ್ವಾಮಿ, ರಮಾನಂದ್, ದೇವರಾಜು ದ್ರಾವಿಡ, ರಾಜೇಂದ್ರ, ಅನಂತಕುಮಾರ್, ಚಿಕ್ಕಹನುಮಮ್ಮ, ಸಾವಿತ್ರಮ್ಮ ಸೇರಿದಂತೆ ಹಲವರು ಭಾಗವಹಿಸಿದ್ದರು.