ಹಿರೇಕೆರೂರು: ಬೆಳೆ ಹಾನಿಯಾದರೂ ಹಿರೇಕೆರೂರು ಹಾಗೂ ರಟ್ಟಿಹಳ್ಳಿ ತಾಲೂಕಿನ ಹಲವು ರೈತರಿಗೆ, ವಿಮೆ ಹಣ ಬಂದಿಲ್ಲ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ ರೈತರು, ಕಾರ್ಯಕ್ರಮ ನಡೆಸಲು ಬಂದಿದ್ದ ಕೃಷಿ ಇಲಾಖೆ ಅಧಿಕಾರಿಗಳಿಗೆ ಫೇರಾವ್ ಹಾಕಿದರು.

ತಾಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ಕೃಷಿ ಇಲಾಖೆಯಿಂದ ಅರಿವು ಕಾರ್ಯಕ್ರಮ ನಿಗದಿಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ರೈತರು ಬಂದಿದ್ದರು. ಕಾರ್ಯಕ್ರಮಕ್ಕೂ ಮುನ್ನವೇ ಸ್ಥಳದಲ್ಲಿದ್ದ ರೈತರು, ಕೃಷಿ ಅಧಿಕಾರಿಗಳನ್ನು ತಡೆದು ತಮಗಾದ ಸಮಸ್ಯೆಗಳನ್ನು ಹೇಳಿಕೊಂಡು ಆಕ್ರೋಶ ವ್ಯಕ್ತಪಡಿಸಿದರು.

ರೈತ ಮುಖಂಡ ನವೀನ ಬಿ. ಹುಲ್ಲತ್ತಿ ಮಾತನಾಡಿ, ಬೆಳೆ ವಿಮೆಯಲ್ಲಿ ರೈತರಿಗೆ ಸಾಕಷ್ಟು ಅನ್ಯಾಯವಾಗಿದೆ. ಜನಪ್ರಧಿನಿಧಿಗಳು, ಅಧಿಕಾರಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ. ವಿಮೆ ಕಂಪನಿ ಜತೆಯಲ್ಲಿ ಶಾಮೀಲಾಗಿ ಮೌನವಾಗಿದ್ದಾರೆ ಎಂದು ಆರೋಪಿಸಿದರು.

ಒಂದು ತಿಂಗಳಿನಿಂದ ರೈತರಿಗೆ ಬೀಜ, ಗೊಬ್ಬರ ನೀಡುತ್ತಿಲ್ಲ. ಮುಂಗಾರು ಪ್ರವೇಶದ ಆನಂತರ ಬೀಜ, ಗೊಬ್ಬರ ಕೊಟ್ಟರೆ ರೈತರು ಬಿತ್ತನೆ ಮಾಡುವುದು ಹೇಗೆ? ಎಫ್‌ಐಡಿ ಮೂಲಕ ಒಂದು ಎಕರೆಗೆ ಒಂದೇ ಚೀಲ ಗೊಬ್ಬರ ನೀಡಿದರೆ ಏನು ಪ್ರಯೋಜನ? ರೈತರ ಜೀವನದ ಜತೆ ಸರ್ಕಾರಗಳು ಆಟ ಆಡುತ್ತಿವೆ ಎಂದು ದೂರಿದರು. ರೈತರಿಗೆ ಅನುಕೂಲ ಕಲ್ಪಿಸುವ ವರೆಗೂ ಹಾಗೂ ರೈತರ ಸಮಸ್ಯೆಗಳನ್ನು ಈಡೇರಿಸುವ ವರೆಗೂ ನಾವು ಹೋರಾಟ ಮಾಡುತ್ತೇವೆ. ಈಗ ಕೃಷಿ ಇಲಾಖೆ ಕಾರ್ಯಕ್ರಮ ತಡೆದು, ಅಧಿಕಾರಿಗಳಿಗೆ ಫೇರಾವ್ ಹಾಕಿದ್ದೇವೆ. ಮುಂದಿನ ದಿನಗಳಲ್ಲಿ ಯಾವುದೇ ಸರ್ಕಾರಿ ಕಾರ್ಯಕ್ರಮ ನಡೆದರೂ ಜನಪ್ರತಿನಿಧಿಗಳಿಗೆ ಫೇರಾವ್ ಹಾಕಿ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಸ್ಥಳಕ್ಕೆ ಬಂದಿದ್ದ ಹಿರೇಕೆರೂರು ಠಾಣೆ ಪೊಲೀಸರು, ರೈತರನ್ನು ಸಮಾಧಾನಪಡಿಸಿದರು. ಆನಂತರ, ಬೆಳೆ ವಿಮೆ ಪರಿಹಾರಕ್ಕಾಗಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.


ಈ ವೇಳೆ ಮುಖಂಡರಾದ ಶಂಕ್ರಪ್ಪ ಮಕ್ಕಳಿ, ಚಂದ್ರಪ್ಪ ಬಂಗೇರ, ಸಚಿನ್ ಹುಲ್ಲತ್ತಿ, ಪವನ ಮಾಳಗಿ, ಬೊಮ್ಮನಗೌಡ ಶಿತಿಕೊಂಡ, ಬಸನಗೌಡ ಬಂಗೇರ, ಬಾಬುಸಾಬ್, ಶೇಕಸನದಿ, ಶಂಕ್ರಪ್ಪ ಹುಲ್ಲತ್ತಿ, ನಿಂಗಪ್ಪ ಕಾಟ್ಟೆಹಳ್ಳಿ ಹಾಗೂ ರೈತ ಮುಖಂಡರು ಇದ್ದರು.