ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಸ್ವದೇಶ ದರ್ಶನ 2.0 ಯೋಜನೆಯಡಿ, ಹಂಪಿ ಮತ್ತು ಮೈಸೂರಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ಕುರಿತು ಲೋಕಸಭೆಯಲ್ಲಿ ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್ ಸಂಸತ್ತಿನಲ್ಲಿ ಪ್ರಶ್ನೆ ಕೇಳಿದ್ದರು. ಈ ಯೋಜನೆಯಡಿ ಹಂಪಿಯಲ್ಲಿ 26.30 ಕೋಟಿ ರು.ಗಳ ವೆಚ್ಚದಲ್ಲಿ ಪ್ರವಾಸಿಗರ ಅತಿಥಿ ಗೃಹ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ. ಮೈಸೂರಿನಲ್ಲಿ ಕುದುರೆ ಜಟಕಾ ಸವಾರಿ ಸೌಲಭ್ಯಕ್ಕೆ 4.12 ಕೋಟಿ ರು.ಗಳು ಹಾಗೂ ಮೈಸೂರಿನಲ್ಲಿ ಪ್ರಕೃತಿ ಸವಿಯುವ ತಾಣ ನಿರ್ಮಿಸಲು 18.36 ಕೋಟಿ ರು.ಗಳ ಅನುದಾನ ಮಂಜೂರು ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಲಿಖಿತ ಉತ್ತರದಲ್ಲಿ ತಿಳಿಸಿದೆ.ಚಾಮುಂಡೇಶ್ವರಿ ದೇವಾಲಯ ಅಭಿವೃದ್ಧಿಪ್ರಸಾದ್ ಯೋಜನೆಯಡಿ ಮೈಸೂರಿನ ಶ್ರೀ ಚಾಮುಂಡೇಶ್ವರಿ ದೇವಿ ದೇವಸ್ಥಾನಕ್ಕೆ 2023-24 ನೇ ಸಾಲಿನಲ್ಲಿ 45.71 ಕೋಟಿ ರು.ಗಳನ್ನು ನೀಡಿ, ಮೂಲಸೌಕರ್ಯ ಅಭಿವೃದ್ಧಿಗೆ ನೆರವು ಕಲ್ಪಿಸಲಾಗಿದೆ. ಪ್ರವಾಸೋದ್ಯಮವನ್ನು ಉತ್ತೇಜಿಸಲು ಎಲ್ಲ ಪ್ರವಾಸಿ ತಾಣಗಳಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಹಾಗೂ ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿ ಮಾಡುವ ಯೋಜನೆಗಳನ್ನು ನೀಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಕನ್ನಡ ಅಭಿವೃದ್ಧಿಗೆ ಪ್ರೋತ್ಸಾಹಕನ್ನಡ ಭಾಷಾ ಬೆಳವಣಿಗೆಗೆ ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳ ಕುರಿತು ಸಂಸದ ಡಾ.ಕೆ.ಸುಧಾಕರ್ ಪ್ರಶ್ನೆ ಕೇಳಿದ್ದು, ಅದಕ್ಕೆ ಕೇಂದ್ರ ಸರ್ಕಾರ ಉತ್ತರ ನೀಡಿದೆ. ಮೈಸೂರಿನಲ್ಲಿರುವ ಭಾರತೀಯ ಭಾಷೆಗಳ ಸಂಸ್ಥೆಯಲ್ಲಿ ಕನ್ನಡ ಸೇರಿದಂತೆ ಎಲ್ಲ ಭಾಷೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಇಲ್ಲಿ ಶಾಲಾ ಶಿಕ್ಷಕರಿಗಾಗಿ 10 ತಿಂಗಳ ಕನ್ನಡ ಕಲಿಕೆ ಕೋರ್ಸ್ ಲಭ್ಯವಿದೆ. ಪ್ರೌಢಶಾಲಾ ಶಿಕ್ಷಕರಿಗೆ ಕನ್ನಡ ಶಾಸ್ತ್ರೀಯ ಭಾಷೆಯ ಅಧ್ಯಯನಕ್ಕಾಗಿ ತರಬೇತಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಕೇಂದ್ರ ಸರ್ಕಾರ ಆರಂಭಿಸಿರುವ ದೀಕ್ಷಾ ಪೋರ್ಟಲ್‌ನಲ್ಲಿ ಕನ್ನಡ ಸೇರಿದಂತೆ 38 ಭಾರತೀಯ ಭಾಷೆಗಳ ಪಠ್ಯಪುಸ್ತಕ ಲಭ್ಯವಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.ಕೇಂದ್ರ ಸರ್ಕಾರ ಜಾರಿ ಮಾಡಿದ ರಾಷ್ಟ್ರೀಯ ಶಿಕ್ಷಣ ನೀತಿ-2020 ಅಡಿಯಲ್ಲಿ, ಕನಿಷ್ಠ 5 ಅಥವಾ 8 ನೇ ತರಗತಿವರೆಗೆ ಸ್ಥಳೀಯ ಭಾಷಾ ಮಾಧ್ಯಮದಲ್ಲಿ ಕಲಿಕೆಗೆ ಒತ್ತು ನೀಡಲಾಗಿದೆ. ಕನ್ನಡ ಮಾತ್ರವಲ್ಲದೆ, ಕರ್ನಾಟಕದ ಭಾಷೆಗಳಾದ ಕೊಡವ ಹಾಗೂ ತುಳು ಭಾಷಾ ಕಲಿಕೆಗೂ ಈ ನೀತಿಯಡಿ ಪ್ರೋತ್ಸಾಹ ನೀಡಲಾಗಿದೆ. ಇದಕ್ಕಾಗಿ ರಾಜ್ಯಗಳಿಗೆ ಸಮಗ್ರ ಶಿಕ್ಷಾ ಯೋಜನೆಯಡಿ ಅನುದಾನ ಕಲ್ಪಿಸಿರುವುದಾಗಿ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ ಎಂದು ಸಂಸದ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ
ಸಿಕೆಬಿ-1 ಸಂಸದ ಡಾ.ಕೆ.ಸುಧಾಕರ್