ವಿರೂಪಾಕ್ಷೇಶ್ವರ, ಪಂಪಾದೇವಿ, ಶ್ರೀ ಕೃಷ್ಣ ದೇವಸ್ಥಾನ, ಭುವನೇಶ್ವರಿ ದೇಗುಲ ದರ್ಶನ,ಎದುರು ಬಸವಣ್ಣ, ಸಾಲು ಮಂಟಪ, ಮಹಾನವಮಿ ದಿಬ್ಬ ಸೇರಿ ಸ್ಮಾರಕಗಳ ವೀಕ್ಷಣೆ


ಕನ್ನಡಪ್ರಭ ವಾರ್ತೆ ಹೊಸಪೇಟೆ

ಯುನೆಸ್ಕೋ ತಜ್ಞರ ತಂಡವು ಸೋಮವಾರ ಬೆಳಗ್ಗೆ ಹಂಪಿಯ ವಿರುಪಾಕ್ಷೇಶ್ವರಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಸ್ಥಾನದ ಆವರಣದಲ್ಲಿರುವ ಎಲ್ಲಾ ದೇವಸ್ಥಾನಗಳಿಗೆ ತೆರಳಿ ದರ್ಶನ ಪಡೆದುಕೊಂಡಿತು.

ವಿರೂಪಾಕ್ಷೇಶ್ವರಸ್ವಾಮಿ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ತೆರಳಿದಾಗ ದೇವಸ್ಥಾನ ಆಡಳಿತ ಮಂಡಳಿಯವರು ವಿಶೇಷ ಪೂಜೆ ಸಲ್ಲಿಸಿ, ಯುನೆಸ್ಕೋ ತಂಡದ ಮುಖ್ಯಸ್ಥರಿಗೆ ಶಾಲು, ಹೂವಿನಹಾರ, ಹಣ್ಣು ಪ್ರಸಾದ ನೀಡಿ ಸನ್ಮಾನಿಸಿ ಗೌರವಿಸಿದರು.

ವಿರೂಪಾಕ್ಷೇಶ್ವರ ದೇವರ ದರ್ಶನದ ನಂತರ ಪಂಪಾದೇವಿ ಮತ್ತು ಭುವನೇಶ್ವರಿ ದರ್ಶನ ಪಡೆದುಕೊಂಡು ದೇವಸ್ಥಾನದ ಮಹಿಮೆ, ಮತ್ತು ದೇವರ ಶಕ್ತಿ ರೂಪದ ಬಗ್ಗೆ ಮತ್ತು ಭಕ್ತರು ಎಲ್ಲೆಲ್ಲಿಂದ ದೇವಸ್ಥಾನಕ್ಕೆ ಬರಲಾಗುತ್ತದೆ ಎನ್ನುವ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದುಕೊಂಡರು.

ವಿರೂಪಾಕ್ಷೇಶ್ವರಸ್ವಾಮಿಯ ದೇವಸ್ಥಾನದಲ್ಲಿರುವ ರಾಜಗೋಪುರ ಸೇರಿದಂತೆ ವಿವಿಧ ಗೋಪುರಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ದೇವಸ್ಥಾನದಲ್ಲಿ ಭಕ್ತರಿಗೆ ಯಾವ ರೀತಿ ವ್ಯವಸ್ಥೆ ಕಲ್ಪಿಸಲಾಗಿದೆ. ಭಕ್ತರಿಗೆ ಮತ್ತು ಪ್ರವಾಸಿಗರಿಗೆ ಇನ್ನೂ ಏನೇನು ಸೌಲಭ್ಯಗಳು ಅಗತ್ಯ ಇವೆ ಎನ್ನುವ ಮಾಹಿತಿ ಪಡೆದುಕೊಂಡರು.

ನಂತರ ಎದುರು ಬಸವಣ್ಣ ಮಂಟಪದ ಬಳಿ ತೆರಳಿ ಎದುರು ಬಸವಣ್ಣ ಮಂಟಪ ಹಾಗೂ ಬಸವಣ್ಣ ಮೂರ್ತಿ ಸೇರಿದಂತೆ ಎರಡು ಬದಿಯಲ್ಲಿರುವ ಸಾಲು ಮಂಟಪಗಳ ಸ್ಥಿತಿಗತಿಯ ಬಗ್ಗೆ ಮಾಹಿತಿ ಪಡೆದುಕೊಂಡರು.

ಎದುರು ಬಸವಣ್ಣ ಮಂಟಪದ ಹಿಂದೆ ಅಚ್ಚುತದೇವರಾಯ ಬಜಾರ್‌ಗೆ ತೆರಳುವ ಮೆಟ್ಟಲು ಮೇಲೆ ಹತ್ತಿ ವಿರೂಪಾಕ್ಷೇಶ್ವರ ಬಜಾರ್‌ ಈ ಹಿಂದೆ ಹೇಗಿತ್ತು. ದೇವಸ್ಥಾನದ ಎರಡು ಬದಿಯಲ್ಲಿ ಮಹಡಿಯ ಸಾಲು ಮಂಟಪಗಳನ್ನು ವೀಕ್ಷಿಸಿದರು.

ಕೆಲ ವರ್ಷಗಳ ಹಿಂದೆ ಸಾಲು ಮಂಟಪಗಳು ವ್ಯಾಪಾರ ಕೇಂದ್ರಗಳಾಗಿದ್ದವು. ಅಂಗಡಿಗಳನ್ನು ತೆರವುಗೊಳಿಸಿ, ಈಗ ಸಾಲು ಮಂಟಪಗಳ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳಲಾಗಿದೆ ಎನ್ನುವ ಮಾಹಿತಿಯನ್ನು ಯುನೆಸ್ಕೋ ತಂಡಕ್ಕೆ ಅಧಿಕಾರಿಗಳು ವಿವರಿಸಿದರು.

ನಂತರ ಶ್ರೀಕೃಷ್ಣ ಬಜಾರ್‌ ಗೆ ತೆರಳಿ ಕೃಷ್ಣ ದೇವಸ್ಥಾನದ ಮುಂದಿರುವ ಬಜಾರ್‌ ಮತ್ತು ಸಾಲುಮಂಟಪಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ನಂತರ ಬಾಲ ಕೃಷ್ಣ ದೇವಸ್ಥಾನಕ್ಕೆ ತೆರಳಿ ದೇವಸ್ಥಾನದ ಗೋಪುರ, ಗೋಪುರದಲ್ಲಿರು ಚಿತ್ರಗಳ ಇಟ್ಟಿಗೆಗಳು ಮಳೆಗೆ ಕರಗುತ್ತಿರುವ ಬಗ್ಗೆ ಮಾಹಿತಿ ಪಡೆದುಕೊಂಡರು. ಯುನೆಸ್ಕೋ ತಂಡದವರು ತಮ್ಮ ಮೊಬೈಲ್ ನಲ್ಲಿ ಫೋಟೋ ತೆಗೆದುಕೊಂಡರು. ನಂತರ ಬಾಲ ಕೃಷ್ಣ ದೇವಸ್ಥಾನಕ್ಕೆ ತೆರಳಿ ದೇವರ ವಿಗ್ರಹ ಇಲ್ಲದಿದ್ದರೂ ದೇವರ ಗರ್ಭಗುಡಿಯೊಳೆಗೆ ತೆರಳಿದಾಗ ಗರ್ಭಗುಡಿ ಭಾರೀ ಕತ್ತಲು ಆವರಿಸಿತ್ತು. ಯುನೆಸ್ಕೋ ತಂಡದವರು ಮತ್ತು ಅಧಿಕಾರಿಗಳು ಮೊಬೈಲ್‌ ಬೆಳಕು ಹಾಕಿಕೊಂಡು ದೇವಸ್ಥಾನ ವೀಕ್ಷಿಸಿದ್ದು ವಿಶೇಷವಾಗಿತ್ತು.

ಹಂಪಿಯ ಸ್ಮಾರಕಗಳ ರಕ್ಷಣೆಗೆ ನಿತ್ಯವೂ ಕಾಳಜಿ ವಹಿಸುತ್ತಿರುವ ಕೇಂದ್ರ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಸಿಬ್ಬಂದಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಸಿಬ್ಬಂದ್ದಿಯೊಂದಿಗೆ ಯುನೆಸ್ಕೋ ತಂಡದವವರು ಫೋಟೋ ತೆಗೆಸಿಕೊಂಡರು.

ನಂತರ ಉಗ್ರ ನರಸಿಂಹ, ಬಡವಿಲಿಂಗ ಮಂಟಪಗಳನ್ನು ದೂರದಿಂದಲೇ ವೀಕ್ಷಿಸಿ, ವಾಹನಗಳ ಪಾರ್ಕಿಂಗ್‌ ಪ್ರದೇಶಕ್ಕೆ ಭೇಟಿ ನೀಡಿ ಪಾರ್ಕಿಂಗ್‌ ಪ್ರದೇಶದಲ್ಲಿ ಪ್ರವಾಸೋಧ್ಯಮ ಇಲಾಖೆಯಿಂದ ನಿರ್ಮಾಣವಾಗಿರುವ ಹೋಟಲ್‌ಗಳು, ಶೌಚಾಲಯಗಳ ನೂತನ ಕಟ್ಟಡದ ಬಗ್ಗೆ ಮಾಹಿತಿ ಪಡೆದುಕೊಂರು.

ಹಂಪಿಯಲ್ಲಿ ನಿರ್ಮಾಣವಾಗಿರುವ ನೂತನ ರಸ್ತೆಯನ್ನು ವೀಕ್ಷಿಸಿ, ಇದೇ ರಸ್ತೆಯಲ್ಲಿ ಬರುವ ಹಿರಿಯ ಛತ್ರವನ್ನು ವೀಕ್ಷಿಸಿದರು.

ನಂತರ ಮಹಾನವಮಿ ದಿಬ್ಬಕ್ಕೆ ತೆರಳಿ, ಸುಮಾರು ಒಂದು ಗಂಟೆಗಳ ಕಾಲ ದಿಬ್ಬದ ಕೆಳಭಾಗದಲ್ಲಿರುವ ಕಲ್ಲಿನ ಬಾಗಿಲುಗಳನ್ನು ವೀಕ್ಷಿಸಿ, ಅದರ ಬಗ್ಗೆ ಮಾಹಿತಿ ಪಡೆದುಕೊಂಡರು. ಮಹಾನವಮಿ ದಿಬ್ಬವನ್ನು ಹತ್ತಿ ಮೇಲಿನಿಂದ ಹಂಪಿಯ ನೋಟವನ್ನು ವೀಕ್ಷಿಸಿ, ತಮ್ಮ ಮೊಬೈಲ್‌ನಲ್ಲಿ ಫೋಟೋ ತೆಗೆದುಕೊಂಡರು.

ನಂತರ ವಿಜಯನಗರ ಸಾಮ್ರಾಜ್ಯದಲ್ಲಿ ನೀರಾವರಿ ವ್ಯವಸ್ಥೆ ಹೇಗಿತ್ತು ಎನ್ನುವುದಕ್ಕೆ ಕಲ್ಲಿನ ಕಾಲುವೆಗಳ ಮೂಲಕ ನೀರಾವರಿ ವ್ಯವಸ್ಥೆಯನ್ನು ವೀಕ್ಷಿಸಿ ಆಶ್ಚರ್ಯವ್ಯಕ್ತಪಡಿಸಿದರು.

ಯುನೆಸ್ಕೋ ತಂಡದವರು ಹಂಪಿಯ ಸ್ಮಾರಕಗಳನ್ನು ವೀಕ್ಷಿಸಿ ಭೋಜನ ವಿರಾಮದ ನಂತರ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಯುನೆಸ್ಕೋ ತಂಡದ ಅಂತರರಾಷ್ಟ್ರೀಯ ಪಾರಂಪರಿಕ ಪರಿಣಿತ ಕಿನ್ಯಾದ ಜಾರ್ಜ್‌ ಅಬುಂಗ್‌, ಜಪಾನ್‌ನ ಇಚಿಡಾ ಶಿಮೋಡಾ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಹೆಚ್ಚುವರಿ ಮಹಾನಿರ್ದೇಶಕ ಜಾನ್ವಿಜ್‌ ಶರ್ಮಾ ಸೇರಿದಂತೆ ಆರು ಜನರ ತಂಡದ ಸದಸ್ಯರು, ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.